7 ತಿಂಗಳ ಗರ್ಭಪಾತಕ್ಕೆ ಅನುಮತಿಸಿದ ಹೈಕೋರ್ಟ್​| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯ ಹಿತದೃಷ್ಟಿಯಿಂದ ಅರ್ಜಿ ಪುರಸ್ಕೃತ
ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗರ್ಭಿಣಿಯಾಗಿರುವ 15 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳ ಗರ್ಭಪಾತಕ್ಕೆ ಹೈಕೋರ್ಟ್​ ಅನುಮತಿ  ನೀಡಿದೆ. ಸಂತ್ರಸ್ತೆಯ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ನ್ಯಾಯಾಲಯ ಈ ಆದೇಶ ನೀಡಿದೆ.
ಅಪ್ರಾಪ್ತ ಬಾಲಕಿ ಪರವಾಗಿ ಆಕೆಯ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್​ನ ನಿಯಮಾವಳಿಗಳಂತೆ ಬಾಲಕಿಯ ಗೌಪ್ಯತೆಯನ್ನು ನ್ಯಾಯಾಲಯ ರಕ್ಷಿಸಿದೆ.
ಬಾಲಕಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಗತಿಯನ್ನು ಪರಿಶೀಲಿಸಲು ಕೆ.ಸಿ. ಜನರಲ್​ ಆಸ್ಪತ್ರೆಯ ಮುಖ್ಯಸ್ಥರ ನೇತೃತ್ವದಲ್ಲಿ ತುರ್ತು ವೈದ್ಯಕಿಯ ಮಂಡಳಿಯನ್ನು ರಚಿಸುವಂತೆ ನ್ಯಾಯಾಲಯವು ಮೇ 19ರಂದು ನಿರ್ದೇಶನ ನೀಡಿತ್ತು. ಬಾಲಕಿಯ ವೈದ್ಯಕಿಯ ತಪಾಸಣೆ ನಡೆಸಿದ ಮಂಡಳಿಯು ಗರ್ಭಪಾತ ಮಾಡುವುದೇ ಸೂಕ್ತ ಎಂದು ಅಂತಿಮ ವರದಿ ಸಲ್ಲಿಸಿತ್ತು. ಈ ವರದಿಯನ್ನು ಅಂಗೀಕರಿಸಿದ ನ್ಯಾಯಪೀಠ, ಗರ್ಭಪಾತಕ್ಕೆ ಅನುಮತಿ ನೀಡಿದೆ.
ಗರ್ಭಪಾತ ನಡೆಸಿದ ನಂತರ ಭ್ರೂಣವನ್ನು ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಿಡಬೇಕು. ಇದು ಅತ್ಯಾಚಾರ ಪ್ರಕರಣದ ತನಿಖೆಗೆ ಪ್ರಮುಖ ಸಾಕ್ಷ$್ಯವಾಗಿದೆ ಎಂದು ನ್ಯಾಯಪೀಠ ಆಸ್ಪತ್ರೆಗೆ ನಿರ್ದೇಶನ ನೀಡಿದೆ. 

ಬಾಲಕಿಗೆ ಪರಿಹಾರ:

ಲೈಂಗಿಕ ದೌರ್ಜನ್ಯ ಸಂತ್ರಸ್ತೆಯರ ಪರಿಹಾರ ಯೋಜನೆಯಡಿ ಕಾನೂನುಬದ್ಧವಾಗಿ ಸಿಗಬೇಕಾದ ಕೌನ್ಸಿಲಿಂಗ್​, ವೈದ್ಯಕಿಯ ವೆಚ್ಚ ಮತ್ತು 3 ಲಕ್ಷ ರೂಪಾಯಿವರೆಗಿನ ಪರಿಹಾರ ಧನವನ್ನು ಪಡೆದುಕೊಳ್ಳಲು ಸಂತ್ರಸ್ತೆಗೆ ಅವಕಾಶವಿದೆ. ಈ ನಿಟ್ಟಿನಲ್ಲಿ ಸಂತ್ರಸ್ತೆಯ ಪರವಾಗಿ ವಿನಂತಿ ಸಲ್ಲಿಸಿದರೆ ಸಂಬಂಧಿಸಿದ ಪ್ರಾಧಿಕಾರಗಳು ಅದನ್ನು ಆದ್ಯತೆಯ ಮೇಲೆ ಪರಿಗಣಿಸಬೇಕು ಎಂದು ನ್ಯಾಯಲಯ ತನ್ನ ಆದೇಶದಲ್ಲಿ ತಿಳಿಸಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net