

ಗಂಗರು ನಾಲ್ಕನೇ ಶತಮಾನದಲ್ಲಿ ನಂದಿಗಿರಿನಾಥ ಎಂಬ ಬಿರುದನ್ನು ಧರಿಸಿದ್ದ ಬಾಣರನ್ನು ಸೋಲಿಸಿ ನಂದಿಯನ್ನು ಗಿರಿದುರ್ಗವನ್ನಾಗಿಸಿಕೊಂಡು, ಕುವಳಾಲವನ್ನು(ಕೋಲಾರ) ತಮ್ಮ ರಾಜಧಾನಿಯಾಗಿಸಿಕೊಂಡು ರಾಜ್ಯಾಡಳಿತ ಆರಂಭಿಸಿದರು. 3 ತಲೆಮಾರಿನ ನಂತರ ಅವರು ರಾಜಧಾನಿಯನ್ನು ತಲಕಾಡಿಗೆ ವರ್ಗಾಯಿಸಿಕೊಂಡರೂ ಗಂಗಾರುಸಾಸಿರದ ಭಾಗವಾದ ಚಿಕ್ಕಬಳ್ಳಾಪುರ ಪ್ರದೇಶವನ್ನು ಅಧೀನದಲ್ಲೇ ಇಟ್ಟುಕೊಂಡಿದ್ದರು. ಇತ್ತ ಚಿಕ್ಕಬಳ್ಳಾಪುರ ಪ್ರದೇಶ ಕಳೆದುಕೊಂಡ ಬಾಣರು ಆಗಿಂದಾಗ್ಗೆ ಮರಳಿ ತಮ್ಮ ರಾಜ್ಯ ಪಡೆಯಲು ಗಂಗರ ಮೇಲೆ ಯುದ್ಧಕ್ಕೆ ಬರುತ್ತಲೇ ಇದ್ದರು. ಈ ಕಿರಿಕಿರಿ ತಪ್ಪಿಸಿಕೊಳ್ಳಲು 9ನೇ ಶತಮಾನದಲ್ಲಿ ಗಂಗರು ಚಿಕ್ಕಬಳ್ಳಾಪುರ ಪ್ರದೇಶವನ್ನು ನೊಳಂಬರಿಗೆ ಬಿಟ್ಟುಕೊಡುತ್ತಾರೆ. ಹಾಗಾಗಿ ಚಿಕ್ಕಬಳ್ಳಾಪುರ ಪ್ರದೇಶದಲ್ಲಿ ಗಂಗರ ಶಾಸನಗಳು 8ನೇ ಶತಮಾನದವರೆಗೆ ಮಾತ್ರ ಸಿಗುತ್ತವೆ.
> ಡಿ.ಎನ್.ಸುದರ್ಶನರೆಡ್ಡಿ, ಶಾಸನತ,