ಸವದತ್ತಿಯ ಯಾತಾಳೇಶ್ವರ ದೇವಸ್ಥಾನದ ಆವರಣದಲ್ಲಿ ತೈಲ ಮತ್ತು ಗ್ಯಾಸ್‌ರಹಿತ ಅಡುಗೆ ಸ್ಪರ್ಧೆ ನಡೆಯಿತು. ಡಾ.ನಯನಾ ಭಸ್ಮೆ, ಪಲ್ಕವಿ ಪದಕಿ, ಪಾರ್ವತಿ ಕಾಂತಿಮಠ, ವನಜಾಕ್ಷಿ ಸಾಲಿಮಠ ಇತರರಿದ್ದರು.
ಆರೋಗ್ಯಕರ ಜೀವನಕ್ಕಾಗಿ ಪಾರಂಪರಿಕ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದ್ದು, ಖಾದ್ಯ ತೈಲದ ಮಿತ ಬಳಕೆ ಆರೋಗ್ಯಕ್ಕೆ ಸಹಕಾರಿ ಎಂದು ಬೆಳಗಾವಿ ಗ್ರಾಮಾಂತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ.ನಯನಾ ಹೇಮಂತ ಭಸ್ಮೆ ಹೇಳಿದರು.
ನಗರದ ಯಾತಾಳೇಶ್ವರ ದೇವಸ್ಥಾನದ ಆವರಣದಲ್ಲಿ ಧರ್ಮಸ್ಥಳ ಸಂಘದಿಂದ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಖಾದ್ಯ ತೈಲ ಹಾಗೂ ಅಡುಗೆ ಅನಿಲ ಬಳಸದೇ ಅಡುಗೆ ಮಾಡುವ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪೂರ್ವಜರು ಅನುಸರಿಸುತ್ತಿದ್ದ ಸಿರಿಧಾನ್ಯ, ಸೊಪ್ಪು-ತರಕಾರಿ ಹಾಗೂ ನೈಸರ್ಗಿಕ ಆಹಾರ ಪದ್ಧತಿಗಳು ಆರೋಗ್ಯಕರ ಜೀವನಕ್ಕೆ ಪೂರಕವಾಗಿವೆ. ಇಂತಹ ಪಾರಂಪರಿಕ ಆಹಾರ ಪದ್ಧತಿಗಳನ್ನು ಪ್ರತಿಯೊಬ್ಬರೂ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜೈಂಟ್ಸ್ ಗ್ರೂಪ್ ಆಫೀಸರ್ ಪಲ್ಲವಿ ಪದಕಿ ಮಾತನಾಡಿ, ಮಹಿಳೆಯರು ಕುಟುಂಬದ ಆರೋಗ್ಯದ ಕೇಂದ್ರಬಿಂದುವಾಗಿದ್ದು, ಮನೆಯಲ್ಲಿಯೇ ಆರೋಗ್ಯಕರ ಆಹಾರ ತಯಾರಿಸುವ ಮೂಲಕ ಕುಟುಂಬದ ಸದಸ್ಯರ ಉತ್ತಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಸ್ಪರ್ಧೆಯಲ್ಲಿ ಮಹಿಳೆಯರು ವಿವಿಧ ಬಗೆಯ ಆರೋಗ್ಯಕರ ಖಾದ್ಯಗಳನ್ನು ತಯಾರಿಸಿ ಗಮನಸೆಳೆದರು.
ಸ್ಪರ್ಧೆಯಲ್ಲಿ ರೇಣುಕಾ ಕಾಮಕರ ವಿಜೇತರಾಗಿ ಹೊರಹೊಮ್ಮಿದ್ದು, ಅವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.