ಗುಬ್ಬಿ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ, ಪ್ರಧಾನಮಂತ್ರಿ ಆಗಲಿ, ಸ್ವಾಗತ ಮಾಡುತ್ತೇನೆ. ಆದರೆ ನಮ್ಮ ಜಿಲ್ಲೆಯ ಹೇಮಾವತಿ ನೀರು ರಾಮನಗರದತ್ತ ಹರಿಸಿಕೊಳ್ಳುವ ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಬಿಡುವುದಿಲ್ಲ. ಗೋಲಿಬಾರ್ ಮಾಡಿದರೂ ಸರಿ ಹೇಮಾವತಿ ಬಿಟ್ಟುಕೊಡುವುದಿಲ್ಲ ಎಂದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ ನೀಡಿದರು.
ತಾಲೂಕಿನ ಮಾವಿನಹಳ್ಳಿ, ಮೆಳೆಕಲ್ಲಹಳ್ಳಿ ಹಾಗೂ ಪೆದ್ದನಹಳ್ಳಿಯಲ್ಲಿ 1.35 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಜಿಲ್ಲೆಯ 24 ಲಕ್ಷ ರೈತರ ಜೀವನಾಡಿ ಹೇಮಾವತಿಯನ್ನು ಯಾವುದೇ ಕಾರಣಕ್ಕೂ ಮತ್ತೊಂದು ಜಿಲ್ಲೆಗೆ ಹರಿಯಲು ಬಿಡುವುದಿಲ್ಲ. ಕೆಲ ನರಸತ್ತ ಕಾಂಗ್ರೆಸ್ಸಿಗರು ನೀರು ಕೊಡುವ ಬಗ್ಗೆ ಮಾತನಾಡುತ್ತಾರೆ ಎಂದು ಛೇಡಿಸಿದರು.
ಜನತಾದಳ ಎಂದಿಗೂ ರೈತಪರ ಕೆಲಸ ಮಾಡುತ್ತದೆ. ನನಗೆ ಮತ ಹಾಕಿದ ರೈತರ ಹಿತ ಕಾಯುವ ಕೆಲಸ ನನ್ನದು. ಜಿಲ್ಲೆಯ ಯಾವ ಶಾಸಕರೂ ಬರಲಿ ಬಿಡಲಿ ನಾನು ಮಾತ್ರ ಲಿಂಕ್ ಕೆನಾಲ್ ವಿರೋಧವಾಗಿಯೇ ನಿಲ್ಲುತ್ತೇನೆ. ಕುಣಿಗಲ್ ಕ್ಷೇತ್ರಕ್ಕೆ 3.3 ಟಿಎಂಸಿ ನೀರು ಹಂಚಿಕೆಯಾಗಿದೆ. ಆದರೆ ಈಗ 7.5 ಟಿಎಂಸಿ ನೀರು ಎಲ್ಲಿಗೆ ಹೋಗುತ್ತದೆ ತಿಳಿಯಬೇಕಿದೆ. ನಾಲೆ ಸಂಖ್ಯೆ 26, 27, 28 ಎಲ್ಲಿಗೆ ನೀರು ಹರಿಯುತ್ತದೆ ಎಂಬ ಲೆಕ್ಕವಿದೆ. ಹಾಗೆಯೇ ವಿವರಣೆ ಇಲ್ಲದ ಲಿಂಕ್ ಕೆನಾಲ್ ಎಲ್ಲಿಗೆ ಹರಿಯುತ್ತದೆ ಎಂಬುದೇ ರಹಸ್ಯ ಮಾಡಿದರೆ ನಮ್ಮ ರೈತರ ಪಾಡೇನು ಎಂದು ಪ್ರಶ್ನಿಸಿದರು.
ಜೆಡಿಎಸ್ ಪಕ್ಷ ತೊರೆದು ಹೋದವರು ಮರಳಿ ಬರುವುದಾದರೆ ಸ್ವಾಗತ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದರೂ ಸುಸ್ವಾಗತ ಮಾಡುತ್ತೇನೆ. ಯಾಕೆ ಅಂದ್ರೆ ಇಲ್ಲಿಯೇ ರಾಜಕಾರಣ ಮಾಡಿದವರು. ಮರಳಿ ಮನೆಗೆ ಬಂದಂತೆ ಎಂದು ಹೇಳಿದರು.
ಮುಖಂಡರಾದ ಜನ್ನೇನಹಳ್ಳಿ ಮೂರ್ತಣ್ಣ, ಉಂಗ್ರ ರವಿಕುಮಾರ್, ವೀರಣ್ಣಗುಡಿ ರಾಮಣ್ಣ, ಲಕ್ಷ$್ಮಣ್, ನರಸಿಂಹಮೂರ್ತಿ, ಯೋಗೀಶ್, ಚೇತನ್, ಚಂದ್ರೇಗೌಡ ಇತರರು ಇದ್ದರು.