ಗೌರಿಬಿದನೂರು: ದಿನನಿತ್ಯದ ಬದುಕಿನಲ್ಲಿ ಯೋಗಾಭ್ಯಾಸ ಅಳವಡಿಸಿಕೊಂಡರೆ ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದು ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ನಾರಾಯಣಸ್ವಾಮಿ ತಿಳಿಸಿದರು.healthy life
ನಗರದ ಲೀಡರ್ಸ್ ಅಂತಾರಾಷ್ಟ್ರೀಯ ಶಾಲೆ ಮತ್ತು ಕಾಲೇಜಿನಲ್ಲಿ ಆಯೋಜಿಸಿದ್ದ ಯೋಗ ದಿನದಲ್ಲಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಯೋಗವು ದೈಹಿಕ ವ್ಯಾಯಾಮ ಮಾತ್ರವಲ್ಲದೆ ಮನಸ್ಸು ಮತ್ತು ಆತ್ಮದ ನಡುವಿನ ಸಾಮರಸ್ಯ ಸಾಧಿಸುವ ಶ್ರೇಷ್ಠ ಆಧ್ಯಾತ್ಮಿಕ ವಾಹನವಾಗಿದೆ. ಯೋಗ ಅಭ್ಯಾಸದಿಂದ ಮಾನಸಿಕ ಶಾಂತಿ, ಒತ್ತಡ, ಆತಂಕವನ್ನು ಕಡಿಮೆಯಾಗುವುದಲ್ಲದೆ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಲ್.ಶಿವರಾಮ ರೆಡ್ಡಿ ಮಾತನಾಡಿ, ಯೋಗವು ದೇಹದ ಆರೋಗ್ಯ ವೃದ್ಧಿಸುವುದರ ಜತೆಗೆ ಮನಸ್ಸಿನ ಶಾಂತಿ, ಏಕಾಗ್ರತೆ ಹಾಗೂ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದರು.
850 ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಶ್ರೀ ಪತಂಜಲಿ ಯೋಗ ಮಂದಿರದ ಶಿಕ್ಷಕಿ ಅಶ್ವಿನಿ ದೇವರಾಜು, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಹನುಮಂತ ರೆಡ್ಡಿ, ಆಡಳಿತ ಮಂಡಳಿ ಕಾರ್ಯದರ್ಶಿಗಳಾದ ಬಿ.ಎನ್.ನರಸಿಂಹ ಮೂರ್ತಿ, ರಕ್ಷಾ ಚಂದನ್, ಪ್ರಾಂಶುಪಾಲ ಮಧುಕರ್ ಇದ್ದರು.