ವನ್ಯಜೀವಿ ಮಾನವ ಸಂಘರ್ಷ ತಡೆಗೆ ಸಹಕರಿಸಿ

ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಆನೆ ದಿನಾಚರಣೆ ಕಾರ್ಯಕ್ರಮದಲ್ಲಿ ಆನೆ ಕುರಿತಾದ ಕಿರುಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು. ಎಸಿಎಫ್ ಕಿರಣ್‌ಕುಮಾರ್, ಆರ್‌ಎಫ್‌ಒ ಸಂತೋಷ್ ಹೂಗಾರ್, ರಜಿಯಾ ಸುಲ್ತಾನ್ ಇತರರಿದ್ದಾರೆ. --
ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಆನೆ ದಿನಾಚರಣೆ ಕಾರ್ಯಕ್ರಮದಲ್ಲಿ ಆನೆ ಕುರಿತಾದ ಕಿರುಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು. ಎಸಿಎಫ್ ಕಿರಣ್‌ಕುಮಾರ್, ಆರ್‌ಎಫ್‌ಒ ಸಂತೋಷ್ ಹೂಗಾರ್, ರಜಿಯಾ ಸುಲ್ತಾನ್ ಇತರರಿದ್ದಾರೆ. --
Published on

ಹುಣಸೂರು:

ಆನೆ ಕಾರಿಡಾರ್‌ನಲ್ಲಿ ಮನುಷ್ಯನ ಅತಿಕ್ರಮಣವಾದ ಕಾರಣದಿಂದಾಗಿ ಕಾಡಾನೆಗಳು ನಾಡಿಗೆ ನುಗ್ಗುತ್ತಿದ್ದು, ಅರಣ್ಯ ಇಲಾಖೆ ಸೂಚಿಸುವ ಹಲವು ಕ್ರಮಗಳನ್ನು ಸಾರ್ವಜನಿಕರು ಅನುಸರಿಸುವ ಮೂಲಕ ವನ್ಯಜೀವಿ-ಮಾನವ ಸಂಘರ್ಷ ನಿಯಂತ್ರಿಸಲು ಸಹಕರಿಸಬೇಕೆಂದು ಪ್ರಾದೇಶಿಕ ಅರಣ್ಯ ವಿಭಾಗದ ಎಸಿಎಫ್ ಕಿರಣ್‌ಕುಮಾರ್ ಕೋರಿದರು.


ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬುಧವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಪ್ರಾದೇಶಿಕ ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶ್ವ ಆನೆ ದಿನ 2026 ಕಾರ್ಯಕ್ರಮದಲ್ಲಿ ಮಾತನಾಡಿದರು.


ಪಶ್ಚಿಮಘಟ್ಟಗಳ ಪ್ರದೇಶ ಆನೆ ಕಾರಿಡಾರ್ ಆಗಿದ್ದ ಕಾಲವೊಂದಿತ್ತು. ಆದರೆ ಅದೀಗ ಮನುಷ್ಯನ ಅತಿಕ್ರಮಣದಿಂದಾಗಿ ಅಸಮತೋಲನವುಂಟಾಗಿದೆ. ಆನೆ ಮಾನವ ಸಂಘರ್ಷ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಹಲವು ಯೋಜನೆ ರೂಪಿಸಿ ಜನೋಪಯೋಗಿ ಕಾರ್ಯದೊಂದಿಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ನಡೆಸಿದ್ದೇವೆ. ಅಷ್ಟೇ ಅಲ್ಲದೆ ಅರಣ್ಯದಂಚಿನಲ್ಲಿ ಬದುಕು ಕಟ್ಟಿಕೊಂಡಿರುವ ಗಿರಿಜನರ ಜೀವನೋಪಾಯಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಕಾಡಂಚಿನ ಜನರ ಸಹಕಾರವಿದ್ದಲ್ಲಿ ಮಾತ್ರ ಸಂಘರ್ಷಕ್ಕೆ ಇತಿಶ್ರೀ ಹಾಡಬಹುದು. ವನ್ಯಜೀವಿಗಳ ದಾಳಿ ನಿಯಂತ್ರಣಕ್ಕಾಗಿ ಇಲಾಖೆ ಆನೆ ಕಂದಕದಿಂದ ಆರಂಭಗೊಂಡು ಸೋಲಾರ್ ಬೇಲಿ, ಅತ್ಯಾಧುನಿಕ ಕ್ಯಾಮರಾ ಕಣ್ಣುಗಳು,ರೈಲ್ವೆ ಕಂಬಿಗಳ ಬಳಕೆ, ಫಾರ್ಮ್‌ಗಾರ್ಡ್ ತಂತ್ರಜ್ಞಾನ ಸೇರಿದಂತೆ ಇಂದಿನ ಚೈನ್‌ಲಿಂಕ್ಡ್ ಮೆಶ್ ತಂತ್ರಜ್ಞಾನಗಳವರೆಗೂ ಅನುಸರಿಸಿದ್ದೇವೆ. ಎಲ್ಲವೂ ಒಂದೊಂದು ರೀತಿಯಲ್ಲಿ ಫಲ ಕೊಡುತ್ತಿವೆ. ಜತೆಗೆ ಜನರ ಸಹಕಾರವೂ ಮುಖ್ಯ ಎಂದು ಹೇಳಿದರು.


ವಲಯ ಅರಣ್ಯಾಧಿಕಾರಿ ಸಂತೋಷ್ ಹೂಗಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಆನೆ ಕುರಿತಾದ ಕಿರುಪುಸ್ತಕವನ್ನು ಪ್ರಾಂಶುಪಾಲೆ ರಜಿಯಾ ಸುಲ್ತಾನ್ ಬಿಡುಗಡೆಗೊಳಿಸಿದರು. ಹುಣಸೂರು ವಿಭಾಗಕ್ಕೆ ಸೇರಿದ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆನೆ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲಾಸ್ಪರ್ಧೆಯಲ್ಲಿ ವಿಜೇತರಾದ ಧನುಷ್, ಚಂದನಾ, ಯಶ್ವಂತ್, ಪ್ರತೀಕ್ಷಾ, ಪಿ.ಆರ್.ಕುಮಾರ್, ಚಾರುಲತಾ ಅವರಿಗೆ ಗಣ್ಯರು ಬಹುಮಾನ ವಿತರಿಸಿದರು.


ಇದೇ ವೇಳೆ ಆನೆ ಮಾನವ ಸಂಘರ್ಷ ನಿಯಂತ್ರಣ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಇಲಾಖೆಯ ಸಿಬ್ಬಂದಿ ಕುಮಾರ್, ಅಭಿಲಾಷ್, ಅಶೋಕ್, ಮತ್ತು ಭರತವಾಡಿ ಗ್ರಾಪಂ ಮಾಜಿ ಸದಸ್ಯ ವೆಂಕಟೇಶ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅರಣ್ಯ ಸಿಬ್ಬಂದಿ, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net