ಹಲವೆಡೆ ಆಲಿಕಲ್ಲು ಆರ್ಭಟ, ತಂಪಾದ ರಾಜ್ಯ; ಇನ್ನೂ ನಾಲ್ಕು ದಿನ ಈ ಭಾಗದಲ್ಲಿ ಮಳೆ!

ಆಲಿಕಲ್ಲಿನ ಮಳೆ
ಆಲಿಕಲ್ಲಿನ ಮಳೆ
Published on

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ತೇವಾಂಶ ಭರಿತ ಮೋಡದ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಾ.22ರವರೆಗೆ ಮಳೆ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಂಗಳವಾರವೂ ರಾಜ್ಯದ ಹಲವೆಡೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆಯಾಯಿತು. ಕೆಲವೆಡೆ ರಾಶಿರಾಶಿ ಆಲಿಕಲ್ಲು ಬಿದ್ದ ಪರಿಣಾಮ ಜನರು ಪುಳಕಿತಗೊಂಡರು. ಮೋಡ ಕವಿದ ವಾತಾವರಣ, ಮಳೆಯಿಂದಾಗಿ ಬಿಸಿಯಾಗಿದ್ದ ತಾಪಮಾನ ತುಸು ಇಳಿಮುಖವಾಯಿತು.

ಎಲ್ಲೆಲ್ಲಿ ಮಳೆ ಅಲರ್ಟ್

ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ತುಮಕೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ ಮತ್ತು ವಿಜಯಪುರ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಾ.18ರಿಂದ ಮಾ.22ರವರೆಗೆ ಮಳೆಯಾಗುವ ಮುನ್ಸೂಚನೆ ಇದೆ.

"

ಬೇಸಿಗೆಯಲ್ಲಿ ತಾಪಮಾನ ಹೆಚ್ಚಾದಂತೆ ಗುಡುಗು,ಮಿಂಚು ಸಹಿತ ಆಲಿಕಲ್ಲು ಮಳೆ ಬರಲಿದೆ. ರಾಜ್ಯದಲ್ಲಿ ವಾರಪೂರ್ತಿ ಅಲ್ಲಲ್ಲಿ ಮಳೆಯಾಗಲಿದೆ. ಮಳೆ ಅವಧಿ 15 ಅಥವಾ 30 ನಿಮಿಷ ಇದ್ದರೂ ಅದರ ತೀವ್ರತೆ ಜಾಸ್ತಿ ಇರಲಿದೆ.

ಮಂಗಳವಾರ (ಮಾ.17) ಸಂಜೆ ಏಕಾಏಕಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದ ಪರಿಣಾಮ ಕಲಘಟಗಿ ಪಟ್ಟಣ ಹಾಗೂ ಸುತ್ತಲಿನ ಕೆಲವು ಗ್ರಾಮಗಳು ಮಂಜುಗಡ್ಡೆಗಳಿಂದ ಆವೃತವಾಗಿ ಕಾಶ್ಮೀರದಂತೆ ಗೋಚರಿಸಿತು. ಭಾರಿ ಪ್ರಮಾಣದ ಆಲಿಕಲ್ಲು ಸುರಿದ ಪರಿಣಾಮ ಕಲಘಟಗಿಯಿಂದ ಮಾಚಾಪುರ ಮಾರ್ಗದ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಘಟನಾ ಸ್ಥಳಕ್ಕೆ ಸಚಿವ ಸಂತೋಷ ಲಾಡ್ ಅವರ ಆಪ್ತ ಕಾರ್ಯದರ್ಶಿಗಳ ತಂಡ ಭೇಟಿ ನೀಡಿ, ಜೆಸಿಬಿ ಮೂಲಕ ಮಂಜುಗಡ್ಡೆ ತೆರವುಗೊಳಿಸಿತು.
ಬಿರುಸಿನಿಂದ ಬಿದ್ದ ಆಲಿಕಲ್ಲುಗಳ ಹೊಡೆತಕ್ಕೆ ಮಾಚಾಪುರ ಗ್ರಾಮದಲ್ಲಿನ ಬಹುತೇಕ ಮನೆಯ ಮೇಲಿನ ಹಂಚುಗಳು ಒಡೆದು, ಮುರಿದು ಬಿದ್ದಿವೆ. ಜಗದೀಶ ಹಿರೇಮಠ ಎಂಬುವರ ಮನೆ ಹೊರಗಡೆ ನಿಲ್ಲಿಸಿದ ಕಾರಿನ ಗ್ಲಾಸ್ಗಳು ಪುಡಿಯಾಗಿವೆ. ಇನ್ನೂ ಅನೇಕ ಮನೆಗಳಲ್ಲಿ ದಿನೋಪಯೋಗಿ ವಸ್ತು ಹಾನಿಯಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net