ಪೌರಕಾರ್ಮಿಕ ಆರೋಗ್ಯ ರಕ್ಷಣೆ: ಗ್ಲೌಸ್ ಸೇರಿದಂತೆ ಸುರಕ್ಷತಾ ಪರಿಕರ ಧರಿಸುವುದು ಕಡ್ಡಾಯ : ಜಿಲ್ಲಾಧಿಕಾರಿ ಇಕ್ರಮುಲ್ಲಾ ಶರೀಫ್

,
,
Published on
ಕಲಬುರಗಿ:  ಪೌರ ಕಾರ್ಮಿಕರ ಆರೋಗ್ಯ, ಸುರಕ್ಷತೆಯ ಹಿತದೃಷ್ಟಿಯಿಂದ ಕೆಲಸದ ಅವಧಿಯಲ್ಲಿ ಗ್ಲೌಸ್ ಸೇರಿದಂತೆ ಎಲ್ಲಾ ಸುರಕ್ಷತಾ ಪರಿಕರಗಳನ್ನು ಧರಿಸಬೇಕು ಈ ಬಗ್ಗೆ ಸ್ಥಳೀಯ ಮುಖ್ಯ ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ ಇಕ್ರಮುಲ್ಲಾ ಶರೀಫ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ  ಜಿಲ್ಲಾ ಮಟ್ಟದ ಸಫಾಯಿ ಕರ್ಮ ಚಾರಿಗಳ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಿಂದ 2 ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದ್ಯ ಕೆಲವು ಕಾರ್ಮಿಕರು ಗ್ಲೌಸ್ ಧರಿಸುವುದರಿಂದ ಕೈ ಬೆವರುತ್ತದೆ ಎಂಬ ಕಾರಣ ನೀಡಿ, ನೇರವಾಗಿ ಕೈಯಿಂದಲೇ ಕಸ ವಿಲೇವಾರಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸುರಕ್ಷತಾ ಪರಿಕರಗಳ ಬಳಕೆ ಕರ್ತವ್ಯದ ಒಂದು ಭಾಗವಾಗಿದ್ದು, ಇದರಲ್ಲಿ ಯಾವುದೇ ವಿನಾಯಿತಿ ನೀಡ ಬಾರದು, ಪೌರಕಾರ್ಮಿಕರ ಸುರಕ್ಷತಾ ಪರಿಕರ ಧರಿಸದೆ ಇದ್ದಲ್ಲಿ ಅವರನ್ನು ಕೆಲಸದಿಂದ ತಗೆದು ಹಾಕಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೂಡಲೇ ವಾರ್ಡ್ ಮಟ್ಟದಲ್ಲಿ ಪೌರಕಾರ್ಮಿಕರ ಸಭೆ ಕರೆದು ಈ ನಿಯಮವನ್ನು ಕಡ್ಡಾಯಗೊಳಿಸಬೇಕು. ಪೌರ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯ ಆರೋಗ್ಯ ತಪಾಸಣೆ ಮತ್ತು ವರ್ಷಕ್ಕೊಮ್ಮೆ ಮಾಸ್ಟರ್ ಹೆಲ್ತ್ ಚೆಕ್-ಅಪ್ ಮಾಡಿಸಲು ಕ್ರಮವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್ಸ್  ನಿರ್ಮೂಲನೆ ಹಾಗೂ ಕಾರ್ಮಿಕರ ಸುರಕ್ಷತೆ ಕುರಿತು ಸುದೀರ್ಘ ಚರ್ಚೆ ಜರುಗಿತು. ಮಾನವ ಚಾಲಿತ ಮಲಸಂಸ್ಕಾರ ತಡೆಯಲು ಯುಜಿಡಿ ಇಲ್ಲದ ಪಟ್ಟಣ ಪಂಚಾಯಿತಿಗಳಿಗೂ ಸಣ್ಣ ಸಕ್ಕಿಂಗ್ ಹಾಗೂ ಜೆಟ್ಟಿಂಗ್ ಯಂತ್ರಗಳನ್ನು ಒದಗಿಸಲು ಚರ್ಚಿಸಲಾಯಿತು.
ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ಹಾಗೂ ಸ್ವಯಂ ಉದ್ಯೋಗ ಯೋಜನೆಗಳ ಪ್ರಗತಿ ಪರಿಶೀಲನೆ ವೇಳೆ, 2022-23ನೇ ಸಾಲಿನ ಯೋಜನೆಗಳು ಕಳೆದ ನಾಲ್ಕು ವರ್ಷಗಳಿಂದ ಬಾಕಿ ಉಳಿದಿರುವುದಕ್ಕೆ ಅಧಿಕಾರಿ ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯದ 29 ಜಿಲ್ಲೆಗಳಲ್ಲಿ ಈ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿರುವಾಗ, ನಮ್ಮ ಜಿಲ್ಲೆಯಲ್ಲಿ ಮಾತ್ರ ಯಾಕೆ ವಿಳಂಬವಾಗುತ್ತಿದೆ? ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.
ಖಾಲಿ ಹುದ್ದೆಗಳ ಭರ್ತಿ ಮತ್ತು ವಸತಿ ಸೌಕರ್ಯ
ಸರ್ಕಾರದ ಆದೇಶದನ್ವಯ ಪೌರಕಾರ್ಮಿಕರು, ತೋಟಗಾರರು, ಲೋಡರ್ಸ್, ಕ್ಲೀನರ್ಸ್ ಹಾಗೂ ವಾಟರ್ ಸಪ್ಲೈ ಹೆಲ್ಪರ್ಸ್ ಸೇರಿದಂತೆ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಶೀಘ್ರವೇ ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಡಿಸಿ ಶರೀಫ್ ತಿಳಿಸಿದರು.
ಇನ್ನು ಪಿ.ಎಂ.ಎ.ವೈ ಅಡಿಯಲ್ಲಿ ಮಂಜೂರಾಗಿರುವ ಒಟ್ಟು 215 ಮನೆಗಳ ಪೈಕಿ 121 ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನುಳಿದ ಮನೆಗಳಿಗೆ ಜಾಗದ ಕೊರತೆ ಎದುರಾಗಿದ್ದು, ತಕ್ಷಣವೇ ಸೂಕ್ತ ಸರ್ಕಾರಿ ಜಾಗ ಗುರುತಿಸಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಸ್‌ಸಿಪಿ/ಟಿಎಸ್‌ಪಿ ಯೋಜನೆಯ ಪ್ರಗತಿ ಪರಿಶೀಲನಾ ಇಲಾಖೆ ವಾರು  ಸಭೆಯನ್ನು ನಡೆಸಿದರು ಮುಂದಿನ  ತ್ರೈಮಾಸಿಕ ಸಭೆಯಲ್ಲಿ ಕಡ್ಡಾಯವಾಗಿ ಅಧಿಕಾರಿಗಳು  ಸಭೆಯಲ್ಲಿ ಹಾಜರಿದ್ದು, ಇಲ್ಲಿಯವರೆಗೆ ಆದ ಖರ್ಚುವೆಚ್ಚದ ಮಾಹಿತಿಯನ್ನು ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ   ನಗರ‌ ಪೊಲೀಸ್ ಆಯುಕ್ತಾಲಯದ ಕಾನೂನು ಸುವ್ಯವಸ್ಥೆ ಡಿ.ಸಿ.ಪಿ. ಶಾಲೂ,  ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್. ಎಸ್. ಸಂಕನೂರ,  ಉಪಕಾರ್ಯದರ್ಶಿ ಲಕ್ಷ್ಮಣ  ಶೃಂಗೇರಿ,  ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ,
ಡಿಯುಡಿಸಿ  ಜಿಲ್ಲಾ ಯೋಜನಾ ನಿರ್ದೇಶಕ ಮುನಾವರ ದೌಲಾ,  ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ಚಂದ್ರಶೇಖರ,  ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಮಹಾನಗರ ಪಾಲಿಕೆ ಅಧಿಕಾರಿಗಳು ಜಿಲ್ಲಾಮಟ್ಟದ ಅಧಿಕಾರಿಗಳು ರಾಜ್ಯ ಸಮಿತಿ ಸದಸ್ಯರಾದ  ನರ್ಮದಾ ಸೌದಾ, ಮ್ಯಾನುವೇಲ್ ಸ್ಕ್ಯಾವೆಂಜರ್ ಜಿಲ್ಲಾ ಜಾಗೃತಿ ಸಮಿತಿ ನಾಮನಿರ್ದೇಶನ ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net