ಸಿಎಂಟಿಐ 65ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಎಚ್ಡಿಕೆ ಮೋದಿ ಕಾಲದಲ್ಲಿ ಉತ್ಪಾದನೆ, ಉದ್ಯೋಗ ಆಧರಿತ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ

ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ ಹನ್ನೆರಡು ವರ್ಷಗಳಲ್ಲಿ ಕೈಗಾರಿಕಾ ಸಂಶೋಧನೆಗೆ ಅತಿ ಹೆಚ್ಚು ಒತ್ತು
  • ಕೇಂದ್ರೀಯ ಕೈಗಾರಿಕಾ ಉತ್ಪಾದನಾ ಸಂಸ್ಥೆ (ಸಿಎಂಟಿಐ) ಉತ್ತಮವಾಗಿ ಕೆಲಸ
  • 65 ವರ್ಷಗಳ ಹಿಂದೆ ಸಣ್ಣ ಸಂಸ್ಥೆಯಾಗಿ ಆರಂಭಗೊಂಡ ಸಿಎಂಟಿಐ
ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರ ಕಾಲದಲ್ಲಿ ಉತ್ಪಾದನೆ ಮತ್ತು ಉದ್ಯೋಗ ಆಧರಿತ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.
ಬೆಂಗಳೂರಿನ ಕೇಂದ್ರೀಯ ಕೈಗಾರಿಕಾ ಉತ್ಪಾದನಾ ಸಂಸ್ಥೆ (ಸಿಎಂಟಿಐ) ಯ 65ನೇ ಸಂಸ್ಥಾಪನಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ಪಾದನೆ ಮತ್ತು ಸಂಶೋಧನೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಈ ಮೂಲಕ ಕೈಗಾರಿಕಾ ಕ್ಷೇತ್ರವು ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಉದ್ಯೋಗ ಸೃಷ್ಟಿಯು ಅಗಾಧವಾಗಿ ಆಗುತ್ತಿದೆ ಎಂದ ಸಚಿವರು, ಕಳೆದ ಹನ್ನೆರಡು ವರ್ಷಗಳಲ್ಲಿ ಕೈಗಾರಿಕಾ ಸಂಶೋಧನೆಗೆ ಅತಿ ಹೆಚ್ಚು ಒತ್ತು ಕೊಡಲಾಗಿದೆ ಎಂದರು.
ತಾಂತ್ರಿಕ ಶಿಕ್ಷಣ ಪಡೆಯುವ ಅಭ್ಯರ್ಥಿಗಳಿಗೆ ಉದ್ಯೋಗ ಆಕಾಶ ಸಿಗುವುದು ಕಷ್ಟವೆನ್ನುವ ಪರಿಸ್ಥಿತಿಯ ನಡುವೆ, ಎಂಜಿನಿಯರಿಂಗ್ ಮತ್ತು ಡಿಪ್ರೋಮೋ ಓದಿರುವ ವಿದ್ಯಾರ್ಥಿಗಳಿಗೆ ವಿಪುಲವಾಗಿ ಉದ್ಯೋಗಗಳನ್ನು ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಕೌಶಲ್ಯ ಆಧರಿತ ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಒತ್ತು ನೀಡುತ್ತಿದೆ ಎಂದರು.
*ಸಿಎಂಟಿಐ ಹೆಮ್ಮೆಯ ಸಂಸ್ಥೆ:
ಬೆಂಗಳೂರು ನಗರದಲ್ಲಿ ಕೇಂದ್ರವನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಕೇಂದ್ರೀಯ ಕೈಗಾರಿಕಾ ಉತ್ಪಾದನಾ ಸಂಸ್ಥೆ (ಸಿಎಂಟಿಐ) ಉತ್ತಮವಾಗಿ ಕೆಲಸ ಮಾಡುತ್ತಿದೆ. ಬಾಹ್ಯಾಕಾಶ ರಕ್ಷಣೆ ಸೇರಿದಂತೆ ಹಲವಾರು ಸೂಕ್ಷ್ಮ ವಲಯಗಳಿಗೆ ಉಪಕರಣಗಳನ್ನು ತಯಾರಿಸಿ ಕೊಡುತ್ತಿದೆ ಎಂದರು.
ಸಿಎಂಟಿಐ ಅನ್ನು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಗಳ ಅಡಿಯಲ್ಲಿ ಈ ಸಂಸ್ಥೆಗೆ ಹೆಚ್ಚಿನ ಆರ್ಥಿಕ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತೇವೆ ಎಂದರು.
65 ವರ್ಷಗಳ ಹಿಂದೆ ಸಣ್ಣ ಸಂಸ್ಥೆಯಾಗಿ ಆರಂಭಗೊಂಡ ಸಿಎಂಟಿಐ ಇಂದು ಅಗಾಧವಾಗಿ ಬೆಳೆದು ನಿಂತಿದೆ. ನೂರಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿ ಸಾವಿರಾರು ಕುಟುಂಬಗಳಿಗೆ ಆಧಾರ ಸ್ಥಂಭವಾಗಿದೆ. ಅಷ್ಟೇ ಅಲ್ಲದೆ ಸಂಶೋಧನೆ ಆವಿಷ್ಕಾರ ಅಭಿವೃದ್ಧಿ ವಿಭಾಗಗಳಲ್ಲಿ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಈ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಿದೆ ಎಂದರು
ಅಂತಿಮ ಹಂತದಲ್ಲಿ ಹೆಚ್‌ಎಂಟಿಗೆ
ಕಾಯಕಲ್ಪ ನೀಡುವ ಯೋಜನೆ:
ಉತ್ಪಾದನೆ ಆಧರಿತ ಕೈಗಾರಿಕೆಗಳಿಗೆ ಉತ್ತೇಜಿನ ನೀಡುವ ಪ್ರಧಾನಿಗಳ ದೂರ ದೃಷ್ಟಿ ಹಿನ್ನೆಲೆಯಲ್ಲಿ ದೇಶದ ಪ್ರತಿಷ್ಠಿತ ಉದ್ಯಮಿಗಳಲ್ಲಿ ಒಂದಾದ ಹಿಂದುಸ್ತಾನ್ ಮಷೀನ್ ಟೂಲ್ಸ್ (ಹೆಚ್‌ಎಂಟಿ) ಕಂಪನಿಗೆ ಮರುಜೀವ ನೀಡುವ ಯೋಜನೆ ಅಂತಿಮ ಅಂತದಲ್ಲಿ ಇದೆ ಎಂದು ಸಚಿವ ಕುಮಾರಸ್ವಾಮಿ ತಿಳಿಸಿದರು.
ಬೆಂಗಳೂರು ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಹೆಚ್‌ಎಂಟಿ ಎಲ್ಲಾ ವಿಭಾಗಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಕೇಂದ್ರ ಸರ್ಕಾರ ಹೊಂದಿದ್ದು, ಡಿಪಿಆರ್ ಕೂಡ ಅಂತಿಮ ಹಂತದಲ್ಲಿದ್ದು, ಶೀಘ್ರವೇ ವಿಸ್ತ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದೇನೆ ಎಂದರು.
ಕಳೆದ ಎರಡು ವರ್ಷಗಳಿಂದ ಎಚ್‌ಎಂಟಿ ಕಂಪನಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಸರ್ಕಾರ ಕೆಲಸ ಮಾಡುತ್ತಿದೆ. ನೀತಿ ಆಯೋಗದ ಸದಸ್ಯರಾದ ಡಾ. ವಿ.ಕೆ.ಸಾರಸ್ವತ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ವರದಿಯನ್ನು ಪಡೆದುಕೊಳ್ಳಲಾಗಿದೆ. ಸಮಿತಿಯು ಮೌಲಿಕವಾದ ಅನೇಕ ಶಿಫಾರಸುಗಳನ್ನು ಮಾಡಿದೆ. ಆ ಆಧಾರದ ಮೇಲೆ ಕಂಪನಿಯನ್ನು ಮೇಲೆತ್ತುವ ಯೋಜನೆ ಹಾಕಿಕೊಳ್ಳಲಾಗಿದೆ. ಹೆಚ್‌ಎಂಟಿ ಅಪೂರ್ವ ವೈಭವವನ್ನು ಮರಳಿ ತರುವ ಕೆಲಸ ಆರಂಭಿಸಿದ್ದೇವೆ ಎಂದರು.
ಸಿಎಂಟಿಐ ನಲ್ಲಿರುವ ಸುಧಾರಿತ ಎಂಜಿನಿಯರಿಂಗ್ ಸಾಮಗ್ರಿ ಪರೀಕ್ಷಾ ಸೌಲಭ್ಯ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದರು. ತದನಂತರ ಸಚಿವರು ಇಡೀ ಸಂಸ್ಥೆಯನ್ನು ವೀಕ್ಷಿಸಿದರು. ವಿವಿಧ ವಿಭಾಗಗಳಿಗೆ ತೆರಳಿ ಮಾಹಿತಿಯನ್ನು ಪಡೆದುಕೊಂಡರು. ಅಲ್ಲದೆ ಯುವ ವಿಜ್ಞಾನಿಗಳ ಜತೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಸಿಎಂಟಿಐ ನಿರ್ದೇಶಕ ಡಾ. ನಾಗಹನುಮಯ್ಯ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
*ಬೆಂಗಳೂರು ನಗರದಲ್ಲಿ ಕೇಂದ್ರವನ್ನಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಕೇಂದ್ರೀಯ ಕೈಗಾರಿಕಾ ಉತ್ಪಾದನಾ ಸಂಸ್ಥೆ (ಸಿಎಂಟಿಐ) ಉತ್ತಮವಾಗಿ ಕೆಲಸ ಮಾಡುತ್ತಿದೆ. ಬಾಹ್ಯಾಕಾಶ ರಕ್ಷಣೆ ಸೇರಿದಂತೆ ಹಲವಾರು ಸೂಕ್ಷ್ಮ ವಲಯಗಳಿಗೆ ಉಪಕರಣಗಳನ್ನು ತಯಾರಿಸಿ ಕೊಡುತ್ತಿದೆ.
-ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net