ಹಿತಶತ್ರುಗಳ ಪತ್ತೆಗೆ ನಾನೇ ಅಭ್ಯರ್ಥಿ ಹಾಕಿದ್ದೆ: ಅಡ್ಡ ಮತದಾನಕ್ಕೆ ಹೆದರಲ್ಲ, ಯುವಕರನ್ನ ಕರೆತಂದು ಪಕ್ಷ ಕಟ್ತೀನಿ ಅಂದ್ರು ಎಚ್​ಡಿಕೆ! HD Kumaraswamy

ಹಿತಶತ್ರುಗಳ ಪತ್ತೆಗೆ ನಾನೇ ಅಭ್ಯರ್ಥಿ ಹಾಕಿದ್ದೆ: ಅಡ್ಡ ಮತದಾನಕ್ಕೆ ಹೆದರಲ್ಲ, ಯುವಕರನ್ನ ಕರೆತಂದು ಪಕ್ಷ ಕಟ್ತೀನಿ ಅಂದ್ರು ಎಚ್​ಡಿಕೆ! HD Kumaraswamy
ಹಿತಶತ್ರುಗಳ ಪತ್ತೆಗೆ ನಾನೇ ಅಭ್ಯರ್ಥಿ ಹಾಕಿದ್ದೆ: ಅಡ್ಡ ಮತದಾನಕ್ಕೆ ಹೆದರಲ್ಲ, ಯುವಕರನ್ನ ಕರೆತಂದು ಪಕ್ಷ ಕಟ್ತೀನಿ ಅಂದ್ರು ಎಚ್​ಡಿಕೆ! HD Kumaraswamy
Published on

ಪ್ರಮುಖ ಮುಖ್ಯಾಂಶಗಳು

  • ಯಾರನ್ನು ಅತಿಯಾಗಿ ನಂಬಬಾರದು ಎಂಬ ಪಾಠವನ್ನು ಈ ಫಲಿತಾಂಶ ನನಗೆ ಕಲಿಸಿದೆ
  • ಯಾರ್ಯಾರು ಅಡ್ಡ ಮತದಾನ ಮಾಡಿದರೆ ಎಂಬ ಬಗ್ಗ ನನಗೆ ಸಂಪೂರ್ಣ ಮಾಹಿತಿ ಇದೆ
  • ಯಾವ್ಯ ಯಾವ ಕಾರಣಕ್ಕೆ ಅವರು ಅಡ್ಡ ಮತದಾನ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ
  • ಪಕ್ಷ ಬಿಡುವ ಚರ್ಚೆಯ ಹಂತದವರೆಗು ಅವರೆಲ್ಲ ಚರ್ಚೆ ಮಾಡಿಯೇ ಅಡ್ಡ ಮತದಾನ ಮಾಡಿದ್ದಾರೆ‌
ಮೈಸೂರು: ನಮ್ಮ ಶಾಸಕರ ನಿಷ್ಠೆಯ ಪರೀಕ್ಷೆಗಾಗಿಯೇ ನಾನು ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೆ. ಪಕ್ಷದಲ್ಲಿರುವ ಹಿತಶತ್ರುಗಳು ಯಾರು ಎಂಬುದನ್ನು ಪತ್ತೆ ಹಚ್ಚುವ ನನ್ನ ಪ್ರಯತ್ನಕ್ಕೆ ಈಗ ಸಂಪೂರ್ಣ ಉತ್ತರ ಸಿಕ್ಕಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ( HD Kumaraswamy ) ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚಿನ ಅಡ್ಡ ಮತದಾನದ ಬೆಳವಣಿಗೆಗಳು ತಮಗೇನೂ ಆಘಾತ ತಂದಿಲ್ಲ, ಇದರ ನಿರೀಕ್ಷೆ ತಮಗೆ ಮೊದಲೇ ಇತ್ತು ಎಂದು ಸ್ಪಷ್ಟಪಡಿಸಿದರು. ಯಾರನ್ನು ಅತಿಯಾಗಿ ನಂಬಬಾರದು ಎಂಬ ದೊಡ್ಡ ಪಾಠವನ್ನು ಈ ಫಲಿತಾಂಶ ಕಲಿಸಿದೆ ಎಂದ ಅವರು, ಪಕ್ಷ ಬಿಟ್ಟು ಹೋಗುವವರು ಹೋಗಲಿ, ಜೆಡ್-ಪ್ಲಸ್ (Gen Z) ತಲೆಮಾರಿನ ಯುವಕರನ್ನು ತಂದು ಹೊಸದಾಗಿ ಪಕ್ಷ ಕಟ್ಟುವ ಶಕ್ತಿ ತಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿ.ಟಿ. ದೇವೇಗೌಡರ ಅಧ್ಯಾಯ ಮುಗಿದ ಕಥೆ

ಜೆಡಿಎಸ್ ಹಿರಿಯ ನಾಯಕ ಜಿ.ಟಿ. ದೇವೇಗೌಡರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ಕುಮಾರಸ್ವಾಮಿ, ಜಿ.ಟಿ.ಡಿ ಹೆಸರನ್ನು ನನ್ನ ಮುಂದೆ ಪ್ರಸ್ತಾಪಿಸಬೇಡಿ, ಅದೆಲ್ಲ ಮುಗಿದುಹೋದ ಕಥೆ ಎಂದು ಖಡಕ್ ಆಗಿ ಹೇಳಿದರು. ಅವರು ಈಗಾಗಲೇ ಒಂದು ಕಾಲಲ್ಲ, ಎರಡು ಕಾಲನ್ನೂ ಪಕ್ಷದಿಂದ ಹೊರಗಿಟ್ಟಿದ್ದಾರೆ. ಅವರ ವಿಚಾರದಲ್ಲಿ ನನ್ನ ನಿಲುವು ಬಹಳ ಸ್ಪಷ್ಟವಾಗಿದೆ. ದೊಡ್ಡ ಗೌಡರಾದ ದೇವೇಗೌಡರು ಹೇಳಿದರು ಸಹ ಪಕ್ಷದ ಹಿತದೃಷ್ಟಿಯಿಂದ ನಾನು ನನ್ನ ನಿರ್ಧಾರವನ್ನು ಬದಲಾಯಿಸುವುದಿಲ್ಲ. ಮುಂಬರುವ ದಿನಗಳಲ್ಲಿ ಟಿಕೆಟ್ ಹಂಚಿಕೆಯ ಅಂತಿಮ ನಿರ್ಧಾರ ನನ್ನದೇ ಆಗಿರುತ್ತದೆ. ದೊಡ್ಡ ಗೌಡರಿಗೆ ಜಿ.ಟಿ.ಡಿ ಮೇಲೆ ಪ್ರೀತಿ, ವ್ಯಾಮೋಹ ಇರುವುದು ನಿಜ, ಆದರೆ ಆ ವ್ಯಾಮೋಹವನ್ನೇ ಜಿ.ಟಿ.ಡಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರ ಎಲ್ಲಾ ಆಟಗಳು ಮತ್ತು ಪೂರ್ವಪರ ಗೊತ್ತಿದ್ದೇ ಈ ಬಾರಿ ಕಠಿಣ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಎಚ್ಚರಿಸಿದರು.

ಬಿಡದಿ ಟೌನ್‌ಶಿಪ್ ಹೆಸರಲ್ಲಿ ರೈತರ ಭೂಮಿ ಲೂಟಿ ಮಾಡಲು ಬಿಡೆನು

ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಮಾತನಾಡಿದ ಎಚ್‌ಡಿಕೆ, ಬಿಡದಿ ವಿಚಾರದಲ್ಲಿ ನನ್ನ ವಿರುದ್ಧ ಏನೇ ಅಪಪ್ರಚಾರ ಮಾಡಿದರೂ ನಾನು ರೈತರ ಭೂಮಿಯನ್ನು ಲೂಟಿ ಮಾಡಲು ಬಿಡುವುದಿಲ್ಲ. ನನ್ನ ಹೋರಾಟ ನಿರಂತರವಾಗಿದ್ದು, ಕಾನೂನಾತ್ಮಕವಾಗಿ ಹಾಗೂ ರೈತರೊಂದಿಗೆ ಸೇರಿ ಬೀದಿಗಿಳಿದು ಹೋರಾಡುತ್ತೇನೆ ಎಂದರು. ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಬಿಡದಿ ಸೇರಿದಂತೆ 5 ಟೌನ್‌ಶಿಪ್ ಮಾಡಲು ನಿರ್ಧರಿಸಿದ್ದು ಸತ್ಯ. ಆದರೆ ಆ ವೇಳೆ ಸ್ಥಳೀಯ ರೈತರ ವಿರೋಧ ಮತ್ತು ಅವರ ಕಷ್ಟಗಳನ್ನು ಅರಿತ ತಕ್ಷಣವೇ ನಾನು ಆ ಪ್ರಸ್ತಾಪವನ್ನು ಕೈಬಿಟ್ಟಿದ್ದೆ. ಈಗ ಅದನ್ನು ನನ್ನದೇ ಕೂಸು ಎಂದು ಬಿಂಬಿಸಲಾಗುತ್ತಿದೆ. ಹಿಂದೆ ನೈಸ್ ಯೋಜನೆಯನ್ನು ದೊಡ್ಡ ಗೌಡರ ಕೂಸು ಎಂದರು, ಆದರೆ ಅದರಿಂದ ಲಾಭ ಮಾಡಿಕೊಂಡವರು ಬೇರೆ ಯಾರೋ! ಮುಂದಿನ ಜಂಟಿ ಸದನದಲ್ಲಿ ಇದರ ಎಲ್ಲಾ ಅಕ್ರಮ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ" ಎಂದು ಸವಾಲು ಹಾಕಿದರು.

ಲಾಭಕ್ಕಾಗಿ ನಾನೆಂದೂ ಸಹಿ ಅಥವಾ ಟಿಕೆಟ್ ಮಾರಿಕೊಂಡಿಲ್ಲ

ಪಕ್ಷದ ಟಿಕೆಟ್ ಹಂಚಿಕೆ ಹಾಗೂ ದೇಣಿಗೆ ವಿಚಾರವಾಗಿ ಎದುರಾದ ಆರೋಪಗಳಿಗೆ ಉತ್ತರಿಸಿದ ಅವರು, ನಮ್ಮ ಶಾಸಕರಿಗೆ ಮತ್ತು ಪಕ್ಷದ ನಿಷ್ಠಾವಂತರಿಗೆ ರಾಜಕೀಯವಾಗಿ ನೆರವಾಗಲು ಈ ಹಿಂದೆ ಕೆಲವರಿಗೆ ವಿಧಾನ ಪರಿಷತ್ ಹಾಗೂ ವಿಧಾನಸಭೆಗೆ ಟಿಕೆಟ್ ಕೊಟ್ಟಿದ್ದೇನೆ ಮತ್ತು ಅವರಿಂದ ಪಕ್ಷಕ್ಕೆ ದೇಣಿಗೆ ಪಡೆದುಕೊಂಡಿದ್ದೇನೆ. ಆದರೆ, ವೈಯಕ್ತಿಕ ಲಾಭಕ್ಕಾಗಿ ನಾನೆಂದೂ ಪಕ್ಷದ ಟಿಕೆಟ್ ಮಾರಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಸಿಎಂ ಆಗಿದ್ದಾಗಲೂ ನನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ, ಈಗ ಕೇಂದ್ರ ಸಚಿವನಾಗಿದ್ದಾಗಲೂ ಅಂತಹ ಕೆಲಸ ಮಾಡುವುದಿಲ್ಲ. ನನ್ನ ಹಳೆಯ ಸ್ನೇಹಿತರು ಏನೇನೋ ಮಾತನಾಡುತ್ತಿದ್ದಾರೆ, ಮಾತನಾಡಲಿ. ಹಿಂದೆ 'ಪ್ಲೇ ವಿನ್' ಲಾಟರಿ ನಿಷೇಧ ಮಾಡುವ ಸಂದರ್ಭದಲ್ಲಿ ಹೋಟೆಲ್ ರೂಮ್‌ಗೇ ಕೋಟ್ಯಂತರ ರೂಪಾಯಿ ಹಣ ತಂದು ಇಟ್ಟು ಆಫರ್ ನೀಡಲಾಗಿತ್ತು. ಆ ಭಾರಿ ಮೊತ್ತದ ಆಮಿಷವನ್ನೇ ಧೂಳೀಕರಿಸಿದ ಇತಿಹಾಸ ನನ್ನದಾಗಿದೆ ಎಂದರು.

ಕೇಂದ್ರದ ಹುದ್ದೆ ತಾತ್ಕಾಲಿಕ, ನನಗೆ ನನ್ನ ರಾಜ್ಯವೇ ಶಾಶ್ವತ

ಕೇಂದ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದರೂ ತಮ್ಮ ಗಮನ ಸದಾ ಕರ್ನಾಟಕದ ಮೇಲೆಯೇ ಇರುತ್ತದೆ ಎಂಬುದನ್ನು ಪುನರುಚ್ಚರಿಸಿದ ಕುಮಾರಸ್ವಾಮಿ, "ಕೇಂದ್ರದಲ್ಲಿ ನಾನು ನಿರ್ವಹಿಸುತ್ತಿರುವ ಜವಾಬ್ದಾರಿ ತಾತ್ಕಾಲಿಕ. ಆದರೆ ನನಗೆ ನನ್ನ ಹೆತ್ತ ರಾಜ್ಯ ಕರ್ನಾಟಕವೇ ಶಾಶ್ವತ ಎಂದು ಭಾವುಕರಾಗಿ ನುಡಿದರು. ರಾಜ್ಯ ರಾಜಕಾರಣಕ್ಕೆ ತಾವು ಹೊಸದಾಗಿ ಕಲಿಯಬೇಕಾದ್ದು ಅಥವಾ ಬರಬೇಕಾದ್ದು ಏನೂ ಇಲ್ಲ, ರಾಜ್ಯದ ಜನರ ಹಿತರಕ್ಷಣೆ ಮತ್ತು ರೈತರ ಪರವಾದ ಹೋರಾಟವೇ ತಮ್ಮ ಮೊದಲ ಆದ್ಯತೆ ಎಂದು ಮೈಸೂರಿನಲ್ಲಿ ಸಿಂಹಗರ್ಜನೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net