ಎಚ್.ಸಿ. ಮಹದೇವಪ್ಪಗೆ ಮಂತ್ರಿ ಸ್ಥಾನ ನೀಡಿ

ಸರಗೂರಿನ ಪ್ರವಾಸಿ ಮಂದಿರದಲ್ಲಿ ಆದಿ ಕರ್ನಾಟಕ ಮಹಾಸಭಾದಿಂದ ಕರೆದಿದ್ದ ಸಭೆಯಲ್ಲಿ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯಿಸಲಾಯಿತು. ಇಟ್ನ ರಾಜಣ್ಣ, ಎಸ್.ಡಿ. ಸಣ್ಣಸ್ವಾಮಿ,  ಮುಳ್ಳೂರು ಪುಟ್ಟಸ್ವಾಮಿ ಇತರರಿದ್ದರು.
ಸರಗೂರಿನ ಪ್ರವಾಸಿ ಮಂದಿರದಲ್ಲಿ ಆದಿ ಕರ್ನಾಟಕ ಮಹಾಸಭಾದಿಂದ ಕರೆದಿದ್ದ ಸಭೆಯಲ್ಲಿ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯಿಸಲಾಯಿತು. ಇಟ್ನ ರಾಜಣ್ಣ, ಎಸ್.ಡಿ. ಸಣ್ಣಸ್ವಾಮಿ, ಮುಳ್ಳೂರು ಪುಟ್ಟಸ್ವಾಮಿ ಇತರರಿದ್ದರು.
Published on

ಸರಗೂರು:

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆದಿ ಕರ್ನಾಟಕ ಮಹಾಸಭಾ ವತಿಯಿಂದ ಶುಕ್ರವಾರ ನಡೆದ ಸಭೆಯಲ್ಲಿ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರನ್ನು ರಾಜ್ಯ ಸಚಿವ ಸಂಪುಟದಿಂದ ಕೈಬಿಟ್ಟಿರುವುದನ್ನು ಖಂಡಿಸಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ ಮಾತನಾಡಿ, ರಾಜ್ಯದ ಹಿಂದುಳಿದ ಹಾಗೂ ದಲಿತ ಸಮುದಾಯದ ಪ್ರಬಲ ನಾಯಕ ಡಾ. ಎಚ್.ಸಿ. ಮಹದೇವಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದು ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ. ಸರ್ಕಾರ ಕೂಡಲೇ ಈ ನಿರ್ಧಾರವನ್ನು ಮರುಪರಿಶೀಲಿಸಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ದಸಂಸ ಜಿಲ್ಲಾ ಸಂಚಾಲಕ ಎಸ್.ಡಿ. ಸಣ್ಣಸ್ವಾಮಿ ಮಾತನಾಡಿ, ಮಹದೇವಪ್ಪ ಅವರು ಸಮಾಜದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ ಹಿರಿಯ ನಾಯಕರಾಗಿದ್ದು, ಅವರನ್ನು ಕಡೆಗಣಿಸಿರುವುದು ಬೇಸರದ ಸಂಗತಿ. ಈ ನಿರ್ಧಾರದಿಂದ ಸಮುದಾಯದ ಜನರಲ್ಲಿ ಅಸಮಾಧಾನ ಉಂಟಾಗಿದೆ ಎಂದು ಹೇಳಿದರು.
ಮುಖಂಡ ಮುಳ್ಳೂರು ಪುಟ್ಟಸ್ವಾಮಿ ಮಾತನಾಡಿ, ಸಚಿವ ಸಂಪುಟದಲ್ಲಿ ಇನ್ನೂ ಒಂದು ಸ್ಥಾನ ಖಾಲಿ ಇರುವುದರಿಂದ ಡಾ. ಮಹದೇವಪ್ಪ ಅವರಿಗೆ ಅವಕಾಶ ನೀಡಬೇಕು. ಇಲ್ಲವಾದರೆ ಮುಂದಿನ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇದಕ್ಕೆ ತಕ್ಕ ಉತ್ತರವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತುಂಬಸೋಗೆ ನಾಗಣ್ಣ ಮಾತನಾಡಿ, ಸಮುದಾಯದ ಭಾವನೆಗಳಿಗೆ ಸರ್ಕಾರ ಗೌರವ ನೀಡಬೇಕು. ಡಾ. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮುದಾಯದ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಸುನೀಲ್ ಬೋಸ್ ಅಭಿಮಾನಿಗಳ ಬಳಗ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಮಾನವ ಹಕ್ಕುಗಳ ಮಿಷನ್ ಅಧ್ಯಕ್ಷ ಪಿ.ಚಿನ್ನಣ್ಣ, ಮುಳ್ಳೂರು ಮಂಜುನಾಥ, ಕುಂದೂರು ಮೂರ್ತಿ, ಉಯ್ಯಂಬಳ್ಳಿ ನಾಗರಾಜು, ಬಿಲ್ಲಯ್ಯ, ಆದಿ ಕರ್ನಾಟಕ ಮಹಾಸಭೆಯ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net