ಹಂಪಿ ಉತ್ಸವ; 200 ಕೋಟಿ ವರ್ಷಗಳ ಇತಿಹಾಸ

ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ವಿಚಾರ ಗೋಷ್ಠಿಯನ್ನು ಸಂಶೋಧಕ ಡಾ.ಸಮದ್ ಕೊಟ್ಟೂರು ಉದ್ಘಾಟಿಸಿದರು. ಪ್ರಮುಖರಾದ ಎಫ್.ಟಿ.ಹಳ್ಳಿಕೇರಿ, ಡಾ.ಗೋವಿಂದ, ಬಂಡೆ ಶ್ರೀಕಾಂತ, ರುದ್ರೇಶ ಮಡಿವಾಳ ಇದ್ದರು.
ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ವಿಚಾರ ಗೋಷ್ಠಿಯನ್ನು ಸಂಶೋಧಕ ಡಾ.ಸಮದ್ ಕೊಟ್ಟೂರು ಉದ್ಘಾಟಿಸಿದರು. ಪ್ರಮುಖರಾದ ಎಫ್.ಟಿ.ಹಳ್ಳಿಕೇರಿ, ಡಾ.ಗೋವಿಂದ, ಬಂಡೆ ಶ್ರೀಕಾಂತ, ರುದ್ರೇಶ ಮಡಿವಾಳ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಶೋಧಕ ಡಾ. ಸಮದ್ ಕೊಟ್ಟೂರು ವಿಚಾರ ಮಂಡನೆ
  • ಅನ್ವೇಷಣೆ-ಬೆಳಕು ಇಂದಿನ ಅಗತ್ಯ
ರವೀಂದ್ರ ರಡ್ಡಿ ಹಂಪಿ (ವಿರೂಪಾಕ್ಷೇಶ್ವರ ವೇದಿಕೆ)
ಹಂಪಿಯ ಬಯಲು ಶಿಲಾ ಲೋಕ ಉದಯಿಸಲು ಇಲ್ಲಿನ ವಿಶಿಷ್ಟ ಕಲ್ಲು ಕಾರಣ. ಅದರ ಉಗಮವಾಗಿದ್ದು ಸುಮಾರು ಎರಡು ನೂರು ಕೋಟಿ ವರ್ಷಗಳ ಹಿಂದೆ ಎಂಬುದು ಅಚ್ಚರಿ ಸಂಗತಿ. ವಿಜಯನಗರ ಸಾಮ್ರಾಜ್ಯ ಎಂದಾಕ್ಷಣ ರಾಜ ವೈಭೋಗ ಅಷ್ಟೇ ಅಲ್ಲ, ಅಲ್ಲಿನ ಜೀವ ವೈವಿಧ್ಯ, ಶ್ರಮಿಕ ವರ್ಗ ಹಾಗೂ ಸಾಮಾನ್ಯ ಜನಜೀವನ ಹೇಗಿತ್ತೆಂದು ಅರಿಯಬೇಕಿದೆ ಎಂದು ಸಂಶೋಧಕ ಡಾ. ಸಮದ್ ಕೊಟ್ಟೂರು ವಿಚಾರ ಹಂಚಿಕೊಂಡರು.
ಹಂಪಿ ಉತ್ಸವದ ಎರಡನೇ ದಿನವಾದ ಶನಿವಾರ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಲ್ಲಿನ ಇತಿಹಾಸ ಅರಿಯಲು 200 ಕೋಟಿ ವರ್ಷಗಳ ಹಿಂದೆ ಹೋಗಬೇಕು. ಇಲ್ಲಿನ ಕಲ್ಲು ಕ್ಲೋಸ್ ಪೇಟ್ ಗ್ರ್ಯಾನೆಟ್. ರಾಮನಗರಕ್ಕೆ ಹಿಂದೆ ಕ್ಲೋಸ್ ಪೇಟ್ ಎಂದು ಕರೆಯಲಾಗುತ್ತಿತ್ತು. ನಮ್ಮದು ದಖನ್ ಭೂಮಿ. ಇದು ಸಮುದ್ರ ಮಟ್ಟದಿಂದ ಸಾವಿರ ಮೀಟರ್ ಎತ್ತರದಲ್ಲಿದೆ. 
ಇಲ್ಲಿನ ಹವಾಗುಣಕ್ಕೆ ತಕ್ಕಂತೆ ಜೀವ ವೈವಿಧ್ಯ ಹರಡಿದೆ. ಕುರುಚಲು ಕಾಡು, ನರಿ, ತೋಳ, ಚಿಪ್ಪು ಹಂದಿ, ಕಾಡುಹಂದಿ ಹಾಗೂ ಅನೇಕ ಪಕ್ಷಿಗಳಿವೆ. ಇಲ್ಲಿನ ಜೀವ ವೈವಿಧ್ಯ ಪರಂಪರೆಯ ಹುಡುಕಾಟವಾಗಬೇಕು. ತುಂಗಭದ್ರಾ ನದಿಯಲ್ಲಿ ನೀರು ನಾಯಿ, ನಾಲ್ಕು ಪ್ರಬೇಧದ ಆಮೆಗಳಿವೆ ಹಾಗೂ 90 ಪ್ರಬೇಧದ ಮೀನುಗಳಿವೆ. ಹಿರೇಬೆಣಕಲ್ ನಿಂದ ತೆಕ್ಕಲಕೋಟೆ, ಸಂಗನಕಲ್ಲು ಆದಿಮಾನವನ ನೆಲೆಗಳಾಗಿವೆ. ಇದಕ್ಕೆ ಈ ಪ್ರದೇಶವು ಪೂರಕ ವಾತಾವರಣ ಹೊಂದಿರುವುದೇ ಕಾರಣ. ಇದೆಲ್ಲವನ್ನೂ ಅನ್ವೇಷಿಸಿ ಬೆಳಕು ಚೆಲ್ಲುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಎಫ್.ಟಿ. ಹಳ್ಳಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಧ್ಯಾಪಕ ಡಾ. ಗೋವಿಂದ, ಕಸಾಪ ಪ್ರತಿನಿಧಿಗಳಾದ ಬಂಡೆ ಶ್ರೀಕಾಂತ, ರುದ್ರೇಶ ಮಡಿವಾಳ, ವೇದಿಕೆ ಅಧ್ಯಕ್ಷೆ ಶ್ವೇತಾ ಎಸ್., ಸಂಚಾಲಕ ನಾಗರಾಜ ಹವಾಲ್ದಾರ ಇತರರು ಉಪಸ್ಥಿತರಿದ್ದರು.

ಚರಿತ್ರೆಯ ಮರುಕಟ್ಟುವಿಕೆ-ಶ್ರಮಿಕ ವರ್ಗದ ಇತಿಹಾಸ

ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಂಗನಾಥ ಆರನಕಟ್ಟೆ ಮಾತನಾಡಿ, ಇಂದು ನಾವು ಚರಿತ್ರೆಗಳಿಂದ ಕೇವಲ ಮತೀಯ ವಿಷಯಗಳನ್ನು ಆರಿಸಿಕೊಳ್ಳುತ್ತಿದ್ದೇವೆ. ರಾಬರ್ಟ್ ಸೆವೆಲ್ ತನ್ನ ಮರೆತು ಹೋದ ಮಹಾ ಸಾಮ್ರಾಜ್ಯ ಕೃತಿಯಲ್ಲಿ ಮತದ ಆಧಾರದ ಮೇಲೆ ಇತಿಹಾಸ ಬರೆದಿದ್ದಾನೆ. ರಾಜ ಪ್ರಭುತ್ವವು ಯಾವುದೇ ಮತ, ಪಂಥಕ್ಕೆ ಸೀಮಿತವಾಗಲು ಸಾಧ್ಯವಿಲ್ಲ. ಜಾತಿ, ಮತ, ಭಾಷೆ ಹಾಗೂ ದೈವ ಕೇಂದ್ರಿತವಾಗಿ ಇದನ್ನು ಗುರುತಿಸಲು ಸಾಧ್ಯವಿಲ್ಲ. ಹೀಗಾಗಿ ಚರಿತ್ರೆಯನ್ನು ಮರು ಕಟ್ಟಿಕೊಡಬೇಕಿದೆ. 
ಮೌಖಿಕ ಪರಂಪರೆಯಲ್ಲಿ ವಿಜಯನಗರದ ದಾಸ ಪರಂಪರೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮಾತನಾಡುತ್ತೇವೆ, ಆದರೆ ತತ್ವಪದಕಾರರನ್ನು ನಿರ್ಲಕ್ಷಿಸಿದ್ದೇವೆ. ಅವರು ಗುರು-ಶಿಷ್ಯ ಪರಂಪರೆಗೆ ಆದ್ಯತೆ ನೀಡಿದ್ದರು. ಅಲ್ಲಿ ಜಾತಿ, ಧರ್ಮದ ಪ್ರತಿಪಾದನೆ ಇರಲಿಲ್ಲ. ನಾವು ಯುದ್ಧದ ಬಗ್ಗೆ ಮಾತನಾಡುತ್ತೇವೆ, ಆದರೆ ಸೈನಿಕರಿಗೆ ಅಷ್ಟು ದೂರ ನಡೆಯಲು ಮತ್ತು ಯುದ್ಧ ಮಾಡಲು ಬೇಕಾದ ಚಪ್ಪಲಿ, ಕತ್ತಿ, ಗುರಾಣಿ ಸೇರಿದಂತೆ ಇನ್ನಿತರ ಸಲಕರಣೆಗಳನ್ನು ಪೂರೈಸಿದ ಶ್ರಮಿಕರ ಇತಿಹಾಸ ನಮಗೆ ಬೇಕಿದೆ. 
ವೃತ್ತಿ ಆಧಾರಿತ ಹೆಸರುಗಳು ಇಂದು ಜಾತಿಗಳಾಗಿ ಮಾರ್ಪಾಡಾಗಿವೆ. ದೇವದಾಸಿ ಪದ್ಧತಿ ಮುಂದುವರಿಯಲು ಪ್ರಭುತ್ವ ಮತ್ತು ಧರ್ಮ ಬೆಂಬಲಿಸುತ್ತಿದೆಯೇ ಎಂಬ ಎಂಬ ಅನುಮಾನವಿದೆ. ದೇವದಾಸಿ ಪದ್ಧತಿ, ವೇಶ್ಯಾವಾಟಿಕೆ ಸೇರಿದಂತೆ ಅನೇಕ ಸಾಮಾಜಿಕ ಪಿಡುಗುಗಳ ಬಗ್ಗೆ ಚಿಂತನೆ ಅವಶ್ಯ ಎಂದು ಆಶಯ ವ್ಯಕ್ತಪಡಿಸಿದರು.

ಕುಮಾರರಾಮನ ಸಾಂಸ್ಕೃತಿಕ ಕೊಡುಗೆ

ಬೆಂಗಳೂರಿನ ಚಿಂತಕ ಡಾ. ಎನ್.ಎಂ. ಗಿರಿಜಾಪತಿ ಅವರು ಕುಮಾರರಾಮನ ಜನಪದ ಕಾವ್ಯಗಳ ಸಾಂಸ್ಕೃತಿಕ ಅವಲೋಕನ ವಿಷಯದ ಕುರಿತು ವಿಚಾರ ಮಂಡಿಸಿದರು. ಹಂಪಿಯ ವೈಭವೋಪೇತ ಆಡಳಿತವನ್ನು ನಾವಿಂದು ನೆನೆಯುತ್ತೇವೆ. ಆದರೆ, ಅದನ್ನು ಕಟ್ಟಿದ ಹಕ್ಕ-ಬುಕ್ಕ ಹಾಗೂ ಅವರ ವಂಶಜರಾದ ಕುಮಾರರಾಮ, ಮುಮ್ಮಡಿ ಶಿಂಗೇಯ ನಾಯಕ, ಕಂಪಿಲರಾಯ ಮತ್ತಿತರರು ನೀಡಿದ ಕೊಡುಗೆಯನ್ನು ಸ್ಮರಿಸಬೇಕು. ಜನಪದ ಸಾಹಿತ್ಯದಲ್ಲಿ ಕುಮಾರರಾಮನಿಗೆ ದೈವಿಕ ಸ್ಥಾನವಿದೆ. ಒಬ್ಬ ವ್ಯಕ್ತಿ ಜನಪರವಾಗಿ ಇದ್ದಾಗ ಮಾತ್ರ ಜನಮಾನಸದಲ್ಲಿ ದೈವ ಸ್ಥಾನ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸತಿ ಸಹಗಮನ ಹಾಗೂ ದೇವದಾಸಿ ಪದ್ಧತಿ

ವಿಜಯನಗರ ಕಾಲದ ಸತಿ ಸಹಗಮನ ಹಾಗೂ ದೇವದಾಸಿ ಪದ್ಧತಿ ಕುರಿತು ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಉಮಾಶಂಕರ್ ಎಚ್.ಡಿ. ವಿಚಾರ ಮಂಡಿಸಿದರು. ಅನಿಷ್ಟ ಪದ್ಧತಿಗಳ ಬಳಕೆ, ರಾಜ ಪ್ರಭುತ್ವದಲ್ಲಿ ಅವುಗಳಿಗಿದ್ದ ಸ್ಥಾನಮಾನ, ಅನುಷ್ಠಾನ ಮತ್ತು ಆದ್ಯತೆ ಹಾಗೂ ಅದರ ಸುತ್ತ ಇದ್ದ ದೈವಿಕ ಕಾರಣಗಳನ್ನು ಅವರು ಬಿಚ್ಚಿಟ್ಟರು. ತಮ್ಮದೆ ಆದ ವಿಶಿಷ್ಟ ದೃಷ್ಟಿಕೋನದಲ್ಲಿ ವಿಚಾರ ಮಂಡನೆ ಮಾಡಿದರು.

ಗೋಷ್ಠಿಯಲ್ಲಿ ಮಂಡನೆಯಾಗುವ ವಿಚಾರಗಳು, ಪ್ರಬಂಧ ಹಾಗೂ ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು. ಇದರಿಂದ ಇನ್ನಷ್ಟು ಹೊಸ ವಿಚಾರಗಳು ಜನತೆಗೆ ತಿಳಿಯಲು ಸಹಕಾರಿ. ಉತ್ಸವ ಸಮಿತಿಯು ಇದನ್ನು ಪರಿಗಣಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net