ಇಂದು ತೊದಲಬಾಗಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ

ಜಮಖಂಡಿ ನಗರದ ಕಾನಿಪ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥ ರಮೇಶ ಭಜಂತ್ರಿ ಮಾತನಾಡಿದರು. ಸಿದ್ದಪ್ಪ ಹೆಗ್ಗೊಂಡ, ಸಾಬು ಗುಡ್ಡದ, ಶಿವಾನಂದ ಮಾಳಿ, ಸಿದ್ದಪ್ಪ ಸೊನ್ನದ ಇತರರಿದ್ದಾರೆ.
ಜಮಖಂಡಿ ನಗರದ ಕಾನಿಪ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥ ರಮೇಶ ಭಜಂತ್ರಿ ಮಾತನಾಡಿದರು. ಸಿದ್ದಪ್ಪ ಹೆಗ್ಗೊಂಡ, ಸಾಬು ಗುಡ್ಡದ, ಶಿವಾನಂದ ಮಾಳಿ, ಸಿದ್ದಪ್ಪ ಸೊನ್ನದ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ರಮೇಶ ಭಜಂತ್ರಿ ಮಾಹಿತಿ
  • ಮೀರಜ್‌ವರೆಗೆ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹ
ಜಮಖಂಡಿ: ತಾಲೂಕಿನ ತೊದಲಬಾಗಿ ಗ್ರಾಮದಿಂದ ಮಹಾರಾಷ್ಟ್ರದ ಮೀರಜ್ ನಗರದವರೆಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಜು. 30ರಂದು ಗ್ರಾಮದಲ್ಲಿ ರಸ್ತೆ ತಡೆಮಾಡಿ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡ ರಮೇಶ ಭಜಂತ್ರಿ ಹೇಳಿದರು.
ನಗರದ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ತೊದಲಬಾಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅನೇಕ ರೋಗಿಗಳು ವಿವಿಧ ಕಾಯಿಲೆಗಳ ಚಿಕಿತ್ಸೆಗಾಗಿ ಪ್ರತಿನಿತ್ಯ ಮೀರಜ್‌ನ ಆಸ್ಪತ್ರೆಗಳಿಗೆ ತೆರಳಬೇಕಾಗುತ್ತದೆ.
ಆದರೆ ನೇರ ಬಸ್ ವ್ಯವಸ್ಥೆ ಇಲ್ಲದ ಕಾರಣ ಕಡುಬಡವರು ಖಾಸಗಿ ವಾಹನಗಳನ್ನು ಬಾಡಿಗೆಗೆ ಪಡೆದು ಹೆಚ್ಚಿನ ವೆಚ್ಚ ಭರಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇದರಿಂದ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಸಾಲ ಮಾಡಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಅಲ್ಲದೆ ಮೀರಜ್‌ನಲ್ಲಿ ನಸಿರ್ಂಗ್, ಮೆಡಿಕಲ್ ಹಾಗೂ ಫಾರ್ಮಸಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ನೇರ ಬಸ್ ವ್ಯವಸ್ಥೆ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.
ಈ ಕುರಿತು ಎನ್‌ಡಬ್ಲೂಕೆಆರ್‌ಟಿಸಿ ನಿಗಮದ ಅಧ್ಯಕ್ಷ, ಕಾಗವಾಡ ಶಾಸಕ ರಾಜು ಕಾಗೆ ಅವರ ಮೂಲಕ ಬಾಗಲಕೋಟೆ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿದಿನ ಬೆಳಗ್ಗೆ 7 ಗಂಟೆಗೆ ತೊದಲಬಾಗಿ ಸಾವಳಗಿ ಅಥಣಿ ಮಾರ್ಗವಾಗಿ ಮೀರಜ್‌ಗೆ ತೆರಳುವ ಹಾಗೂ ಅದೇ ದಿನ ಸಂಜೆ ಮೀರಜ್‌ನಿಂದ ಅಥಣಿ ಸಾವಳಗಿ ಮಾರ್ಗವಾಗಿ ತೊದಲಬಾಗಿಗೆ ಮರಳುವ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ಹಾಗೂ ಸಾರಿಗೆ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದರು.
ಜು.30ರಂದು ತೊದಲಬಾಗಿಯ ಸಿದ್ಧರಾಮೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಿ, ಒಂದು ದಿನ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ ಅವರು, 10 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಸಿದ್ದಪ್ಪ ಹೆಗ್ಗೊಂಡ, ಸಾಬು ಗುಡ್ಡದ, ಶಿವಾನಂದ ಮಾಳಿ, ಸಿದ್ದಪ್ಪ ಸೊನ್ನದ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net