ಶಿಡ್ಲಘಟ್ಟ ತಾಲೂಕಿನ ಗೆಜ್ಜೆಗಾನಹಳ್ಳಿಯಲ್ಲಿ ಹಕ್ಕಬುಕ್ಕರ ಶಾಸನ ಪತ್ತೆ

ಪತ್ತೆಯಾದ ವಿಜಯನಗರ ಸಾಮ್ರಾಜ್ಯದ ಪ್ರಾರಂಭಿಕ ಕಾಲದ ಶಾಸನದೊಂದಿಗೆ ಸ್ಥಳೀಯರು
ಪತ್ತೆಯಾದ ವಿಜಯನಗರ ಸಾಮ್ರಾಜ್ಯದ ಪ್ರಾರಂಭಿಕ ಕಾಲದ ಶಾಸನದೊಂದಿಗೆ ಸ್ಥಳೀಯರು
Published on

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಗೆಜ್ಜೆಗಾನಹಳ್ಳಿ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರಾರಂಭಿಕ ಕಾಲದ (ಹಕ್ಕಬುಕ್ಕರ ಕಾಲದ) ಅಪ್ರಕಟಿತ ತಮಿಳು ಶಾಸನವನ್ನು ಶಾಸನತಜ್ಞರಾದ ಕೆ.ಧನಪಾಲ್ ಮತ್ತು ಅಪ್ಪೇಗೌಡನಹಳ್ಳಿ ಎ.ಎಂ.ತ್ಯಾಗರಾಜ್  ಪತ್ತೆಹಚ್ಚಿದ್ದಾರೆ.
ಗೆಜ್ಜಿಗಾನಹಳ್ಳಿ ಗ್ರಾಮದ ಬೇಲಿಯಲ್ಲಿ ಹುದುಗಿಹೋಗಿದ್ದ ಶಾಸನದ ಕಲ್ಲನ್ನು, ಗೊರಮಡುಗು ರಾಜಣ್ಣ ಮತ್ತು ತಂಡದವರು ಹೊರಗೆ ತೆಗೆದು, ಗ್ರಾಮದ ವೀರಾಂಜನೇಯಸ್ವಾಮಿ ದೇವಸ್ಥಾನದ ಬಳಿ ಇರಿಸಿದ್ದಾರೆ. ಈ ಕಲ್ಲಿನ ಎರಡೂ ಬದಿಯಲ್ಲಿ ತಮಿಳು ಭಾಷೆಯಲ್ಲಿ ಶಾಸನವನ್ನು ಕೆತ್ತಲಾಗಿದೆ.

*ಶಾಸನದ ಪಠ್ಯದಲ್ಲೇನಿದೆ*
“ವಿಜಯನಗರ ಸಾಮ್ರಾಜ್ಯದ  ಆರಂಭಿಕ ಕಾಲದ ಶ್ರೀ ವೀರ ಹರಿಯಪ್ಪ ಒಡೆಯರು ಮತ್ತು ಬುಕ್ಕಣ್ಣ ಒಡೆಯರು ಒಟ್ಟಿಗೆ ಸಾಮ್ರಾಜ್ಯವನ್ನು ಆಳುವ ಸಮಯದ ಈ ತಮಿಳು ಶಾಸನದಲ್ಲಿ ಬರೆದಿರುವ ಕಲಿಯುಗ 4448ನೇ ವರುಷಕ್ಕೆ ಸೇರುವ, ಶಕ ವರುಷ  1270ನೇ ಆಶಾಢದ 9 ನೇ ದಿನದ ಸೋಮವಾರವು ಕ್ರಿ. ಶ. 1348 ರ ಜುಲೈ 7 ರ ಸೋಮವಾರಕ್ಕೆ ಸರಿಹೊಂದುತ್ತದೆ. ಈ ಕಾಲಮಾನದಲ್ಲಿ ಈ ಪ್ರಾಂತ್ಯವು ಅಂಬಡಕ್ಕಿ  ನಾಡೆಂದು ಪ್ರಸಿದ್ಧಿ ಪಡೆದಿತ್ತು. ಈ ಪ್ರಾಂತ್ಯದ ಸಾಮಂತನಾಗಿ ನರಲೋಕ ಗಂಡ ಮೈಲೇಯ ನಾಯಕನು ಆಳುವ ಸಮಯದಲ್ಲಿ ಅಂಬಡಕ್ಕಿ ನಾಡಿನ ಆಳ್ವಾರರು ಆದ  ಪರಪ್ಪೆಸಿಯರ್, ಸೊಕ್ಕಿತಿಯರ್, ಮಚ್ಚಿದೇವನ್, ಕಣ್ಣವನ್, ಸಾನಂದೈ ಮತ್ತು ಇತರರು ಸೇರಿ ರಾಮಣ್ಣನ ಮಗ ನೀಲಪ್ಪನಿಗೆ ಕಚ್ಛೆಗಾನಪಲ್ಲಿ (ಈಗಿನ ಗೆಜ್ಜೆಗಾನಹಳ್ಳಿ) ಮತ್ತು ಮರುಗೈಪಲ್ಲಿಯ ಕೆರೆಯ ಕೆಳಗೆ ಹೊಲ ಗದ್ದೆ ಮತ್ತು ಜಮೀನಿನ ಒಂದುವರೆ ಭಾಗವನ್ನು ದಾನ ನೀಡಿ ಈ ಶಾಸನವನ್ನು ಹಾಕಿದ್ದಾರೆ.
ಈ ಶಾಸನಕ್ಕೆ ಗ್ರಾಮಲೆಕ್ಕಿಗ ದಾಮೋದರ ಪೆರುಮಾಳ್ ಸಹಿ ಹಾಕಿ ಆಗಿನ ನಾಡ ದೇವರಾದ ಶೆಟ್ಟಿಸ್ವರ (ಸೆಟ್ಟೀಶ್ವರ ದೇವರನ್ನು ಈಗ ಉಪ್ಪಾರಪೇಟೆ ಯಲ್ಲಿ “ಸೃಷ್ಟೀಶ್ವರ” ಎಂಬ ಹೆಸರಿನಲ್ಲಿ ಪೂಜಿಸುತ್ತಾರೆ) ಒಡೆಯಾರ್ ಸಾಕ್ಷಿಯಾಗಿ ದಾನ ನೀಡಿದ್ದಾರೆ” ಎಂದು ಶಾಸನತಜ್ಞರಾದ ಕೆ.ಧನಪಾಲ್ ವಿವರಿಸಿದ್ದಾರೆ. ಈ ಶಾಸನದ ಅಧ್ಯಯನದಲ್ಲಿ ಕೃಷ್ಣಗಿರಿಯ ಗೋವಿಂದರಾಜ್, ಪಿ. ವಿ. ಕೃಷ್ಣಮೂರ್ತಿಯವರು ಮತ್ತು ಕೆ. ಆರ್. ನರಸಿಂಹನ್ ರವರು ನೇರವಾಗಿದ್ದಾರೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net