ಹುಣಸೂರು: ಗುರುಪೂರ್ಣಿಮೆ ಅಂಗವಾಗಿ ವಿದ್ಯಾರ್ಥಿಗಳು ತಮ್ಮ ಗುರುಗಳ ಪಾದಪೂಜೆಗೈದು ಸಂತೃಪ್ತಿ ಹೊಂದಿದರೆ, ಗುರುಗಳು ಧನ್ಯತೆಯ ಭಾವ ಅನುಭವಿಸಿದರು.
ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆಯಲ್ಲಿ ಬುಧವಾರ ಗುರುಪೂರ್ಣಿಮೆಯನ್ನು ಪಾದಪೂಜಾ ಕಾರ್ಯಕ್ರಮದ ಮೂಲಕ ಗುರುಶಿಷ್ಯರ ಮಹತ್ವದ ಸಂಬಂಧಗಳನ್ನು ಸಾರಲಾಯಿತು. ತಮಗೆ ಅಕ್ಷರ ಕಲಿಸುತ್ತಿರುವ ಗುರುಗಳ ಪಾದತೊಳೆದು ಪಾದಕ್ಕೆರಗಿ ನಮಸ್ಕರಿಸಿದ ಶಿಷ್ಯಗಣ ಕೃತಾರ್ಥನೆ ಅನುಭವಿಸಿತು.
ಈ ವೇಳೆ ಮಾತನಾಡಿದ ಪ್ರಾಂಶುಪಾಲ ಎಂ.ಟಿ.ಮಂಜುನಾಥ್, ಗುರುಪೂರ್ಣಿಮೆ ಆಚರಣೆ ಗುರುಶಿಷ್ಯರ ಸಂಬಂಧಗಳನ್ನು ಮಾತ್ರ ತಿಳಿಸುವುದಿಲ್ಲ. ನಮ್ಮ ನೆಲದ ಪರಂಪರೆಯ ಹಲವು ಐತಿಹಾಸಿಕ ಘಟನೆಗಳಿಗೂ ಸಾಕ್ಷಿಯಾಗಿದೆ. ಗುರುಪೂರ್ಣಿಮೆ ದಿನ ವಸಿಷ್ಠರು ಶ್ರೀರಾಮನಿಗೆ ಯೋಗವಿದ್ಯೆ ಕಲಿಸಿದ ದಿನವಾಗಿದೆ.(ಯೋಗಾವಾಸಿಷ್ಠ್ಯ) ಪರುಶುರಾಮ ತನ್ನ ಕೊಡಲಿಯನ್ನು ತ್ಯಜಿಸಿ ಆಧ್ಯಾತ್ಮಿಕ ಸಿದ್ಧಿಗಾಗಿ ಮಹೇಂದ್ರ ಪರ್ವತಕ್ಕೆ ಸಾಗಿದ ದಿನ. ಗೌತಮ ಬುದ್ಧನಿಗೆ ಜ್ಞಾನೋದಯವಾದ ನಂತರ ನೀಡಿದ ಮೊದಲ ಉಪನ್ಯಾಸ ಗುರುಪೂರ್ಣಿಮೆ ದಿನವಾಗಿದೆ. ಮತ್ಸ್ಯಾವತಾರಿ ವಿಷ್ಣು ಸಪ್ತ ಋಷಿಗಳಿಗೆ ಜ್ಞಾನ ನೀಡಿದ ದಿನವಾಗಿದೆ. ಬಾದರಾಯಣ ವ್ಯಾಸರು ಬ್ರಹ್ಮಸೂತ್ರ ಆರಂಭಿಸಿದ ದಿನ ಗುರುಪೂರ್ಣಿಮೆ. ವಾಲ್ಮೀಕಿ ಮಹರ್ಷಿ ಲವಕುಶರಿಗೆ ಪಾಠ ಆರಂಭಿಸಿದ ದಿನವಾಗಿದೆ. ಶಂಕರಾಚಾರ್ಯರಿಗೆ ತಮ್ಮ ಗುರು ದೊರೆತ ದಿನ ಇದಾಗಿದ್ದರೆ, ಮಹಾವಿಷ್ಣು ವೇದವ್ಯಾಸ ಅವತಾರ ತಳೆದ ದಿನವೂ ಇದೇ ಆಗಿದೆ. ಹಾಗಾಗಿ ಭಾರತೀಯ ಪರಂಪರೆಯ ಗುರುಶಿಷ್ಯ ಸಂಬಂಧಕ್ಕೆ ಬೆಲೆಕಟ್ಟಲಾಗದು. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ ಎಂದರು.
ವಿದ್ಯಾಸಂಸ್ಥೆ ಸಂಸ್ಥಾಪನಾ ನಿರ್ದೇಶಕ ನವೀನ್ ರೈ, ಎಂ.ಆರ್.ಮಂಜುನಾಥ್ ಮಾತನಾಡಿದರು. ಟ್ಯಾಲೆಂಟ್ ಪಬ್ಲಿಕ್ ಶಾಲೆಯ ಸಿಬಿಎಸ್‌ಸಿ ವಿಭಾಗದ ಪ್ರಾಂಶುಪಾಲೆ ಗುಲ್ನಾಜ್ ಖಾನ್, ಹಿರಿಯ ಶಿಕ್ಷಕಿ ಎಸ್.ಎನ್.ಶಶಿಕಲಾ ಇತರರು ಇದ್ದರು.