ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಿಸಿದ ಗುರು ಕೊಟ್ಟೂರೇಶ್ವರ ರಥೋತ್ಸವ

ಕೊಟ್ಟೂರಿನಲ್ಲಿ ಗುರುವಾರ ಸಂಜೆ ಶ್ರೀ ಕೊಟ್ಟೂರೇಶ್ವರ ರಥೋತ್ಸವವು ಅಪಾರ ಭಕ್ತರ ನಡುವೆ ಅದ್ದೂರಿಯಾಗಿ ಜರುಗಿತು.
ಕೊಟ್ಟೂರಿನಲ್ಲಿ ಗುರುವಾರ ಸಂಜೆ ಶ್ರೀ ಕೊಟ್ಟೂರೇಶ್ವರ ರಥೋತ್ಸವವು ಅಪಾರ ಭಕ್ತರ ನಡುವೆ ಅದ್ದೂರಿಯಾಗಿ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ಕೊಟ್ಟೂರು ಮಹಾರಾಜ್ ಕೀ ಜೈ ಘೋಷಣೆ
  • ಮೂಲಾ ನಕ್ಷತ್ರದ ಸಾಗಿದ ತೇರು
  • ಜಾತ್ರೆಗೆ ಹರಿದುಬಂದ ಭಕ್ತಸಾಗರ
  • ಮಿಣಿ ತುಂಡಾದರೂ ಕುಗ್ಗದ ಉತ್ಸಾಹ
  • ಬಾಳೆಹಣ್ಣು-ಉತ್ತುತ್ತಿ ಸಮರ್ಪಣೆ
  • ರಾಜಬೀದಿಯಲ್ಲಿ ವೈಭವದ ರಥಯಾತ್ರೆ
ಕೊಟ್ಟೂರು: ಕೊಟ್ಟೂರಿನ ಆರಾಧ್ಯ ದೈವ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಒಕ್ಕೋರಲಿನ ಜಯಘೋಷದೊಂದಿಗೆ ಗುರುವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಮೆರವಣಿಗೆಯೊಂದಿಗೆ ಆಗಮಿಸಿದ ಶ್ರೀ ಸ್ವಾಮಿಯು ರಥವನ್ನು ಪ್ರದಕ್ಷಿಣೆ ಮಾಡಿ ಸಂಜೆ 5.30ಕ್ಕೆ ರಥವೇರಿದರು. ರಥವು ಸಾಗಬೇಕಿದ್ದ ಸಮಯದಲ್ಲಿ ಮಿಣಿ (ಹಗ್ಗ) ತುಂಡಾಗಿದ್ದರಿಂದ ಅದನ್ನು ಸರಿಪಡಿಸುವ ವೇಳೆಗೆ ಮಾಘ ಬಹುಳ ಮೂಲಾ ನಕ್ಷತ್ರವು ಕೂಡಿಬಂದು ಸಂಜೆ 6.05ಕ್ಕೆ ಚಲಿಸಿತು.
ತಡವಾಗಿ ರಥ ಸಾಗಿದರೂ ಲಕ್ಷಾಂತರ ಜನರು ಒಕ್ಕೊರಲಿನಿಂದ ‘ಕೊಟ್ಟೂರೇಶ್ವರ ಮಹಾರಾಜ್ ಕೀ ಜೈ’ ಎಂದು ಕೂಗಿದ ಘೋಷಣೆ ಮುಗಿಲು ಮುಟ್ಟಿತು. ಪಾದಯಾತ್ರೆ ಮೂಲಕ ಬಂದ ಭಕ್ತರು ಶಾಂತತೆಯಿಂದ ಕಾದು ರಥೋತ್ಸವವನ್ನು ಕಣ್ಣುಂಬಿಕೊಂಡರು. ರಥೋತ್ಸವಕ್ಕೂ ಮುನ್ನ ಶ್ರೀ ಸ್ವಾಮಿ ರಥ ಏರುವ ಏಣಿಗೆಯನ್ನು ಶಾಸ್ತ್ರೋಕ್ತವಾಗಿ ಪೂಜಿಸಲಾಯಿತು.
ಮಧ್ಯಾಹ್ನ ದಲಿತ ಸಮುದಾಯದ ನೂರಾರು ಯುವಕರು ಗಚ್ಚಿನಮಠದಿಂದ ಬೃಹತ್ತಾದ ಏಣಿಯನ್ನು ಮೆರವಣಿಗೆ ಮೂಲಕ ವಿಜೃಂಭಣೆಯಿಂದ ಹೊತ್ತು ತಂದು ರಥಕ್ಕೆ ನಿಲ್ಲಿಸಿದರು. ನಂತರ ಮೂರು ಗಂಟೆಯ ವೇಳೆಗೆ ಆಯಗಾರ ಬಳಗದಿಂದ ಬಲಿಬಾನವನ್ನು ಸಮರ್ಪಿಸಲಾಯಿತು. ಗುರು ಕೊಟ್ಟೂರೇಶ್ವರ ಸ್ವಾಮಿಯ ಉತ್ಸವವು 4.15ಕ್ಕೆ ಹಿರೇಮಠದಿಂದ ಕ್ರಿಯಾಮೂರ್ತಿ ಶಿವಪ್ರಕಾಶ ಕೊಟ್ಟೂರು ದೇವರ ನೇತೃತ್ವದಲ್ಲಿ ಪಲ್ಲಕ್ಕಿಯಲ್ಲಿ ಹೊರಟು ಹರಳಯ್ಯನಕೇರಿ ಸಮೀಪ ಆಗಮಿಸಿತು.
ಈ ವೇಳೆ ಶ್ರೀಮಠದ ಧರ್ಮಕರ್ತರಾದ ಶೇಖರಯ್ಯ, ದತ್ತಿ ಇಲಾಖೆಯ ಇಒ ಮಲ್ಲಪ್ಪ ಹಾಗೂ ಅರ್ಚಕರು ಮತ್ತು ಆಯಾಗಾರ ಬಳಗವು ಹರಳಯ್ಯನ ಸಮುದಾಯದ ದುರುಗಮ್ಮ ಹಾಗೂ ಉಡಿಸಲಮ್ಮ ಅವರ ಮನೆಗೆ ಆಗಮಿಸಿ ಸ್ವಾಗತಿಸಿದರು. ಹರಳಯ್ಯನ ಸಮುದಾಯದ ಮಹಿಳೆಯರು ಗುರು ಕೊಟ್ಟೂರೇಶ್ವರ ಸ್ವಾಮಿಗೆ ಕಳಸ ಹಾಗೂ ಧೂಪದಾರತಿ ಬೆಳಗಿದರು. ಅಲ್ಲಿಂದ ಸ್ವಾಮಿಯ ಪಲ್ಲಕ್ಕಿ ಉತ್ಸವವು ವಿವಿಧ ಮೇಳಗಳೊಂದಿಗೆ ರಥದತ್ತ ಸಾಗಿತು.
ಪ್ರತಿ ವರ್ಷಕ್ಕಿಂತ ಈ ವರ್ಷ ಮೂಲಾ ನಕ್ಷತ್ರ ತಡವಾಗಿ ಕೂಡಿ ರಥ ಸಾಗಿದರೂ ಭಕ್ತರ ಉತ್ಸಾಹ ಕಡಿಮೆಯಾಗದೆ ಸ್ವಾಮಿಯ ಜೈಕಾರ ಮೊಳಗುತ್ತಿತ್ತು. ಬಾಳೆಹಣ್ಣು, ಉತ್ತುತ್ತಿ ಹಾಗೂ ದವನ ಎಸೆದು ಸಂಭ್ರಮಿಸಿದ ಭಕ್ತರು ದೈವಕ್ಕೆ ನಮಿಸಿದರು. ರಥೋತ್ಸವದಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವವು ರಾಜಗಾಂಭೀರ್ಯದಿಂದ ಪಾದಗಟ್ಟೆವರೆಗೆ ಸಾಗಿ ಮರಳಿ 7.30ಕ್ಕೆ ರಥವು ಮೂಲ ಸ್ಥಾನಕ್ಕೆ ಬಂದು ವಿರಾಮಿಸಿತು.
ರಥ ನಿಂತ ನಂತರ ಸ್ವಾಮಿಯ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಆಯಗಾರರು, ಭಕ್ತರು ಹಾಗೂ ಅರ್ಚಕರು ಕೊಂಡೊಯ್ದು ಮಠದಲ್ಲಿ ಪ್ರತಿಷ್ಠಾಪಿಸಿದರು. ಪ್ರತಿವರ್ಷದ ಪದ್ಧತಿಯಂತೆ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಈ ವೇಳೆ ರಥೋತ್ಸವದ ವೇಳೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಯಾವುದೇ ಅವಘಡ ಸಂಭವಿಸದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಕಾರ್ಯಕ್ರಮಕ್ಕೆ ಸುಮಾರು ಆರು ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ರಥೋತ್ಸವ ನಡೆಯುವ ಮುಂಚೆ ಹರಳಯ್ಯನ ಸಮುದಾಯದ ದುರುಗಮ್ಮ ಕಳಸ ಹಾಗೂ ಉಡಸಲಮ್ಮ ಧೂಪದಾರತಿ ಬೆಳಗಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net