ಸಂಚಿತ ವೇತನ ಜಾರಿಗೊಳಿಸಿ ನೇರ ಪಾವತಿ ಮಾಡುವಂತೆ ಆಗ್ರಹಿಸಿ ಗುಲ್ಬರ್ಗ ವಿಶ್ವವಿದ್ಯಾಲಯ ಗುತ್ತಿಗೆ ನೌಕರರ ಕಲ್ಯಾಣ ಸಂದ ಪದಾಧಿಕಾರಿಗಳು, ಕಾರ್ಯಕರ್ತರು ವಿವಿ ಕಾರ್ಯಸೌಧ ಎದುರು ಬುಧವಾರ ಧರಣಿ ನಡೆಸಿದರು. ವಿಜಯ ಕೆಂಗಲ್, ಶೀಲಪ್ರಕಾಶ ದೊಡ್ಮನಿ, ಅಂಬುಜಾ ಕದಂ, ಸವಿತಾ ಮಹೇಶ್ವರಿ, ನಾಗರಾಜ ಟೇಂಗಳಿ, ಚಂದ್ರಶಾ ಸೇರಿದಂತೆ ಇತರರಿದ್ದರು.
ಕಲಬುರಗಿ: ಸಂಚಿತ ವೇತನ ಜಾರಿಗೊಳಿಸಿ ನೇರ ಪಾವತಿ ಮಾಡುವಂತೆ ಆಗ್ರಹಿಸಿ ಗುಲ್ಬರ್ಗ ವಿಶ್ವವಿದ್ಯಾಲಯ ಗುತ್ತಿಗೆ ನೌಕರರ ಕಲ್ಯಾಣ ಸಂದ ಪದಾಧಿಕಾರಿಗಳು, ಕಾರ್ಯಕರ್ತರು ವಿವಿ ಕಾರ್ಯಸೌಧ ಎದುರು ಬುಧವಾರ ಧರಣಿ ನಡೆಸಿದರು.
ಗುಲ್ಬರ್ಗ ವಿವಿಯಲ್ಲಿ 281 ಗುತ್ತಿಗೆ ನೌಕರರು ಕಳೆದ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕಾಯಂ ಸ್ವರೂಪದ ಎಲ್ಲ ಕೆಲಸಗಳನ್ನು ಗುತ್ತಿಗೆ ಆಧಾರದ ನೌಕರರು ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಬಹುತೇಕ ಕಾಯಂ ನೌಕರರು ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಇವರ ಕೆಲಸದ ಭಾರ ನಾವು ಹೊರುತ್ತಿದ್ದೇವೆ. ಉದ್ಯೋಗ ಭದ್ರತೆ ಇಲ್ಲದೆ 15&20 ವರ್ಷಗಳಿಂದ ಅತ್ಯಂತ ಕಡಿಮೆ ಸಂಬಳದಲ್ಲಿ ನಿಷ್ಠೆಯಿಂದ ದುಡಿಯುತ್ತಿದ್ದೇವೆ. ಆದರೂ ಸೂಕ್ತ ನ್ಯಾಯ ದೊರೆಯುತ್ತಿಲ್ಲ ಎಂದು ದೂರಿದರು.
ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಗುತ್ತಿಗೆ ನೌಕರರಿಗೆ ಸಂಚಿತ ವೇತನ ಜಾರಿಗೊಳಿಸಿ ನೇರ ಪಾವತಿ ಮಾಡಿ ಮಾನವೀಯ ಮೌಲ್ಯ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ನೌಕರರ ಹಿತ ಕಾಪಾಡುತ್ತಿವೆ. ಹೀಗಾಗಿ ಗುಲ್ಬರ್ಗ ವಿವಿಯೂ ನೇರ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.
ಕಳೆದ ಅನೇಕ ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿದ್ದು, ವಿವಿ ಆಡಳಿತ ಸ್ಪಂದಿಸುತ್ತಿಲ್ಲ. ಬಡ ಮಕ್ಕಳು, ತಂದೆ ತಾಯಿ ಈ ನೌಕರರನ್ನು ಅವಲಂಬಿಸಿದ್ದಾರೆ. ಹೊರಗುತ್ತಿಗೆ ನೌಕರರ ಹಿತದೃಷ್ಟಿಯಿಂದ ಈ ಪ್ರಸ್ತಾವನೆ ಸಿಂಡಿಕೇಟ್ ಸಭೆಯಲ್ಲಿ ಮಂಡಿಸಿ ಅನುಮೋದಿಸಬೇಕು ಎಂದು ಮನವಿ ಮಾಡಿದರು.
ಕಾರ್ಮಿಕ ಕಾಯ್ದೆ ಅನುಸಾರ ವೇತನ ಪ್ರತಿ ತಿಂಗಳು 7ರೊಳಗೆ ಕಡ್ಡಾಯವಾಗಿ ಪಾವತಿಸಬೇಕು. ಕಾರ್ಮಿಕ ಇಲಾಖೆ ಜಾರಿಗೊಳಿಸಿರುವ 2025&26 ಮತ್ತು 2026&27ನೇ ಸಾಲಿನ ತುಟ್ಟಿಭತ್ಯೆ ಜತೆಗೆ ಬಾಕಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.
ವಿಜಯ ಕೆಂಗಲ್, ಶೀಲಪ್ರಕಾಶ ದೊಡ್ಮನಿ, ಅಂಬುಜಾ ಕದಂ, ಸವಿತಾ ಮಹೇಶ್ವರಿ, ನಾಗರಾಜ ಟೇಂಗಳಿ, ಚಂದ್ರಶಾ ಸೇರಿದಂತೆ ಇತರರಿದ್ದರು.