ಕುಷ್ಟಗಿ: ತಾಲೂಕು ಸೇರಿದಂತೆ ಕೊಪ್ಪಳ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರು, ಪ್ರಾಚಾರ್ಯರ ಹುದ್ದೆಗಳು ಖಾಲಿಯಿದ್ದು, ಬೋಧನೆಗೆ ಭಾರಿ ಹಿನ್ನಡೆ ಉಂಟಾಗುತ್ತಿದೆ.
ಮೇ ಕೊನೆಯ ವಾರದಲ್ಲಿ ಎಲ್ಲ ಸರ್ಕಾರಿ ಜೂನಿಯರ್ ಕಾಲೇಜುಗಳು ಪುನರಾರಂಭಗೊಳ್ಳುತ್ತಿವೆ. ಆದರೆ ಉಪನ್ಯಾಸಕರ ಕೊರತೆ ಕಾರಣ, ಗುಣಮಟ್ಟದ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ.
ಜಿಲ್ಲೆಯ 53 ಸರ್ಕಾರಿ ಕಾಲೇಜುಗಳ ಪೈಕಿ 537 ಮಂಜೂರಾದ ಹುದ್ದೆಗಳಲ್ಲಿ ಪ್ರಾಚಾರ್ಯರು-31, ಉಪನ್ಯಾಸಕರು -233, ಪ್ರಥಮ ದರ್ಜೆ ಸಹಾಯಕರು-3, ದ್ವಿತೀಯ ದರ್ಜೆ ಸಹಾಯಕರು-16, ಗ್ರಂಥಪಾಲಕರು-2, ಡಿ ದರ್ಜೆ ನೌಕರರು-34, ದೈಹಿಕ ಶಿಕ್ಷಕರು-1 ಸೇರಿದಂತೆ 320 ಹುದ್ದೆಗಳು ಖಾಲಿ ಇವೆ.
2020ರಲ್ಲಿ ಸರ್ಕಾರದಿಂದ ನೇಮಕಾತಿ ಮಾಡಿದ್ದು, ಈವರೆಗೆ ಹೊಸ ನೇಮಕಾತಿ ಗೋಜಿಗೆ ಸರ್ಕಾರ ಮುಂದಾಗಿಲ್ಲ. ಪ್ರಾಚಾರ್ಯರು, ಕಾಯಂ ಉಪನ್ಯಾಸಕರಿಲ್ಲದೇ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ.
ಕೊಪ್ಪಳ-13, ಯಲಬುರ್ಗಾ-12, ಕುಷ್ಟಗಿ-9, ಗಂಗಾವತಿ-4, ಕುಕನೂರು-10, ಕಾರಟಗಿ-2, ಕನಕಗಿರಿ-3 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 53 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿದ್ದು, ಮೇ ಕೊನೆಯ ವಾರ ಪುನರಾರಂಭಗೊಳ್ಳಲಿವೆ.