75 ಸಾವಿರ ಕೋಟಿ ರೂ. ಮೈಲಿಗಲ್ಲಿನತ್ತ ಗೃಹಲಕ್ಷ್ಮಿ Grihalakshmi

Grihalakshmi
Grihalakshmi
Published on
ಬೆಂಗಳೂರು: ರಾಜ್ಯ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸುವತ್ತ ಸಾಗಿದೆ. ಈ ಯೋಜನೆಯು, ಇದೀಗ ಒಟ್ಟು ಫಲಾನುಭವಿಗಳ ಖಾತೆಗೆ ಬರೋಬ್ಬರಿ 75 ಸಾವಿರ ಕೋಟಿ ರೂಪಾಯಿಗಳ ಧನಸಹಾಯ ತಲುಪಿಸುವ ಮೈಲಿಗಲ್ಲಿನ ಸಮೀಪದಲ್ಲಿದೆ.
ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಯೋಜನೆಯಡಿ ನೋಂದಾಯಿತ ಫಲಾನುಭವಿಗಳ ಸಂಖ್ಯೆಯು ನಿರಂತರವಾಗಿ ಏರಿಕೆಯಾಗುತ್ತಾ ಸಾಗಿದ್ದು, ಪ್ರಸಕ್ತ 2026-27ರ ಸಾಲಿನ ಮೊದಲ ಕಂತಿನ ವೇಳೆಗೆ ಬರೋಬ್ಬರಿ 1,30,17,226 (1.30 ಕೋಟಿಗೂ ಹೆಚ್ಚು) ತಲುಪಿದೆ.
ಯೋಜನೆ ಆರಂಭವಾದ ದಿನದಿಂದ ಇಂದಿನವರೆಗೆ ಸರ್ಕಾರವು ಒಟ್ಟಾರೆಯಾಗಿ ಬರೋಬ್ಬರಿ 72,251.51 ಕೋಟಿ ರೂಪಾಯಿಗಳನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ (ಡಿಬಿಟಿ) ಯಶಸ್ವಿಯಾಗಿ ವರ್ಗಾಯಿಸಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಕಂತುಗಳು ಪೂರ್ಣಗೊಳ್ಳುತ್ತಿದ್ದಂತೆ ಈ ಒಟ್ಟು ಮೊತ್ತವು ಅತ್ಯಂತ ಸುಲಭವಾಗಿ 75 ಸಾವಿರ ಕೋಟಿ ರೂಪಾಯಿಗಳ ಗಡಿಯನ್ನು ದಾಟಲಿದೆ.
ಆರಂಭಿಕ ವರ್ಷವಾದ 2023-24ರಲ್ಲಿ 18,103.88 ಕೋಟಿ ರೂ.ಗಳಿಂದ ಆರಂಭವಾದ ಈ ಆರ್ಥಿಕ ನೆರವು, ತದನಂತರದ ವರ್ಷಗಳಲ್ಲಿ ಫಲಾನುಭವಿಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಮತ್ತಷ್ಟು ವೃದ್ಧಿಸುತ್ತಾ ಸಾಗಿರುವುದು ಯೋಜನೆಯ ನಿರಂತರತೆಗೆ ಸಾಕ್ಷಿಯಾಗಿದೆ.
ವರ್ಷದಿಂದ ವರ್ಷಕ್ಕೆ ಯೋಜನೆಯ ವ್ಯಾಪ್ತಿ ವಿಸ್ತರಿಸುತ್ತಿರುವುದು ಕಂಡುಬಂದಿದೆ. 2023-24ನೇ ಸಾಲಿನ ಮೊದಲ ಕಂತಿನಲ್ಲಿ 1,06,09,155 ರಷ್ಟಿದ್ದ ಯಶಸ್ವಿ ಪಾವತಿ ಪಡೆದ ಮಹಿಳೆಯರ ಸಂಖ್ಯೆ, ಎಂಟನೇ ಕಂತಿನ ವೇಳೆಗೆ 1,20,04,970 ಕ್ಕೆ ಏರಿಕೆಯಾಗಿತ್ತು. ಅದೇ ರೀತಿ 2024-25ನೇ ಸಾಲಿನ 10ನೇ ಕಂತಿನ ವೇಳೆಗೆ ಯಶಸ್ವಿ ಫಲಾನುಭವಿಗಳ ಸಂಖ್ಯೆ 1,22,42,835 ಕ್ಕೆ ತಲುಪಿತು. ಇನ್ನು 2025-26ರ ಸಾಲಿನಲ್ಲಿ ಈ ಬೆಳವಣಿಗೆ ಮತ್ತಷ್ಟು ವೇಗ ಪಡೆದುಕೊಂಡು, 11ನೇ ಕಂತಿನ ಪಾವತಿಯ ವೇಳೆಗೆ 1,24,03,113 ಮಹಿಳೆಯರು ಇದರ ಲಾಭ ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ (2026-27) ಈಗಾಗಲೇ ಮೊದಲ ಕಂತಿನಲ್ಲೇ 1,23,38,677 ಮಹಿಳೆಯರ ಖಾತೆಗೆ ಹಣ ಜಮೆಯಾಗಿದೆ.
- ಮೂರು ಕಂತು ಸ್ಕಿಪ್!
ಗೃಹಲಕ್ಷ್ಮೀ ವಿಚಾರದಲ್ಲಿ ವಿರೋಧ ಪಕ್ಷವು ಸರ್ಕಾರದ ವಿರುದ್ಧ ನಿರಂತರ ಆರೋಪಗಳನ್ನು ಮಾಡಿಕೊಂಡೇ ಬಂದಿದೆ, ಐದು ಸಾವಿರ ಕೋಟಿ ರೂ. ಎಲ್ಲಿ ಹೋಯಿತು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನೆ ಮಾಡಿಕೊಂಡೇ ಬಂದಿದ್ದರು. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಮೂರು ಕಂತು ಬಿಡುಗಡೆ ಮಾಡಿಲ್ಲ. ಆರಂಭಿಕ ವರ್ಷವನ್ನು (2023-24) ಹೊರತುಪಡಿಸಿ, ತದನಂತರದ ಎರಡು ವರ್ಷಗಳಲ್ಲಿ ಒಟ್ಟು ಮೂರು ತಿಂಗಳ ಕಂತುಗಳು ಫಲಾನುಭವಿಗಳಿಗೆ ಲಭ್ಯವಾಗಿಲ್ಲ. ನಿಯಮಾವಳಿಗಳ ಪ್ರಕಾರ ವಾರ್ಷಿಕವಾಗಿ ಸಿಗಬೇಕಿದ್ದ ಕಂತುಗಳ ಪೈಕಿ 2024-25ರಲ್ಲಿ 10 ಕಂತುಗಳು ಹಾಗೂ 2025-26ರಲ್ಲಿ 11 ಕಂತುಗಳು ಮಾತ್ರ ಬಿಡುಗಡೆಯಾಗಿದ್ದು, ಒಟ್ಟು 3 ತಿಂಗಳ ಕಂತುಗಳು ಬಾಕಿ ಉಳಿದಿವೆ. ಬಜೆಟ್ ಹೊಂದಾಣಿಕೆ ಹಾಗೂ ತಾಂತ್ರಿಕ ಪ್ರಕ್ರಿಯೆಗಳ ಕಾರಣದಿಂದಾಗಿ ಈ ವ್ಯತ್ಯಯ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಸರಿದೂಗಿಸುವ ನಿರೀಕ್ಷೆಯಿದೆ.
- 60 ಸಾವಿರ ರೂ.ವರೆಗೆ ಸಂದಾಯ!
ಆರಂಭಿಕ ತಿಂಗಳಲ್ಲಿ 1.06 ಕೋಟಿ ಲಾನುಭವಿಗಳಿಗೆ ಮಾಸಿಕ ಎರಡು ಸಾವಿರದಂತೆ ಸಂದಾಯವಾಗಿತ್ತು. ಅವರೆಲ್ಲರ ಖಾತೆಗೆ ಈ ವರೆಗೆ ಸಂದಾಯವಾಗಿರುವುದು ಬರೋಬ್ಬರು 60 ಸಾವಿರ ರೂಪಾಯಿ. ಯಾವುದೇ ಸೋರಿಕೆ ಇಲ್ಲದೇ, ಮಧ್ಯವರ್ತಿಗಳ ಹಾವಳಿ ಇಲ್ಲದೇ ದೊಡ್ಡ ಮೊತ್ತ ಅವರ ಖಾತೆಗೆ ಜಮೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net