ಬೇಕರಿಗಳಲ್ಲಿ ಭರ್ಜರಿ ವ್ಯಾಪಾರ / NELAMANGAL

ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದ ಮುಖ್ಯರಸ್ತೆಯ ಶ್ರೀ ರಾಮ್​ ಬೇಕರಿಯಲ್ಲಿ ಕೇರ್​ ಖರೀದಿಸುತ್ತಿರುವ ಸಾರ್ವಜನಿಕರು.
ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದ ಮುಖ್ಯರಸ್ತೆಯ ಶ್ರೀ ರಾಮ್​ ಬೇಕರಿಯಲ್ಲಿ ಕೇರ್​ ಖರೀದಿಸುತ್ತಿರುವ ಸಾರ್ವಜನಿಕರು.
Published on
ನೆಲಮಂಗಲ : ಹೊಸ ವರ್ಷಾಚರಣೆಯಲ್ಲಿ ಕೇಕ್​ಗಳಿಗೆ ಬೇಡಿಕೆ ಹೆಚ್ಚಿದ್ದು, ನಗರ ಸೇರಿ ತಾಲೂಕಿನಾದ್ಯಂತ ಬೇಕರಿಗಳಲ್ಲಿ ಜನರು ವಿವಿಧ ಬಗೆಯ ಕೇಕ್​ಗಳನ್ನು ಖರೀದಿಸಿ ಸಂಭ್ರಮಿಸಿದ್ದಾರೆ.
ಹೊಸ ವರ್ಷದ ಹಿಂದಿನ ದಿನವೇ ಬಹುತೇಕ ಯುವಕರು ಬೇಕರಿಗಳಿಗೆ ತೆರಳಿ ಇಷ್ಟವಾದ ಆಕಾರ ಹಾಗೂ ಗಾತ್ರದ ಕೇಕ್​ಗಳನ್ನು ಮುಂಗಡವಾಗಿ ಹಣ ನೀಡಿ ಕಾಯ್ದಿರಿಸಿದ್ದರು. ಬೇಕರಿಗಳಲ್ಲಿ 5ಕೆ.ಜಿ., 4ಕೆ.ಜಿ., 2.ಕೆ.ಜಿ., 1ಕೆ.ಜಿ. ಹಾಗೂ ಅರ್ಧಕೆ.ಜಿ. ತೂಕದ ನೂರಾರು ಕೇಕ್​ಗಳು ಸಿದ್ಧಗೊಂಡಿವೆ. ಪ್ರತಿ ಕೆ.ಜಿ.ಗೆ 350ರಿಂದ 600 ರೂಪಾಯಿವರೆಗೆ ಮಾರಾಟವಾಗುತ್ತಿವೆ. ಕ್ರೀಮ್​ ಕೇಕ್​, ಬಟರ್​ಸ್ಕಾಚ್​ ಕೇಕ್​, ಬ್ಲ್ಯಾಕ್​ ಫಾರೆಸ್ಟ್​, ಪಿಸ್ತಾ, ಬಾದಾಮ್​, ಪೈನಾಪಲ್​ ಕೇಕ್​ಗಳಿಗೆ ಬೇಡಿಕೆ ಹೆಚ್ಚಿದ್ದು, ಇದರಿಂದ ಬೇಕರಿಗಳ ಮಾಲೀಕರು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.
ಯುವಕ, ಯುವತಿಯರು ಹಾಗೂ ಮಕ್ಕಳು ಗುಂಪುಗಳಾಗಿ ಬೇಕರಿಗಳಿಗೆ ಬಂದು ಬಣ್ಣ ಬಣ್ಣದ ಕೇಕ್​ಗಳನ್ನು ಖರೀದಿಸುತ್ತಿದ್ದಾರೆ. ಎಲ್ಲರೂ ಮಧ್ಯರಾತ್ರಿ ವೇಳೆಗೆ ತಮ್ಮತಮ್ಮ ಓಣಿಗಳಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಕೊಂಡು ಹೊಸ ವರ್ಷವನ್ನು ಬರಮಾಡಿಕೊಂಡರು. ಹತ್ತು ವರ್ಷಗಳಿಂದ ಕೇಕ್​ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪ್ರತಿ ವರ್ಷ ಹೊಸ ವರ್ಷಾಚರಣೆಯಗೆ ಕೇಕ್​ಗಳ ಬೇಡಿಕೆ ಹೆಚ್ಚುತ್ತಲೇ ಇದೆ. ಹತ್ತು ದಿನದಿಂದ ನಿರಂತರ ಕೆಲಸ ಮಾಡುತ್ತಿದ್ದೇವೆ ಎಂದು ಬೇಕರಿ ಮಾಲೀಕ ರಮೇಶ್​ ತಿಳಿಸಿದರು.
ದೇವಾಲಯದಲ್ಲಿ ವಿಶೇಷ ಪೂಜೆ : ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.
ಪೊಲೀಸ್​ ಬಂದೋಬಸ್ತ್​ : ಹೊಸ ವರ್ಷಾಚರಣೆ ವೇಳೆ ನಗರದಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಪೊಲೀಸ್​ ಇಲಾಖೆಯಿಂದ ನಗರ ಸೇರಿ ಕೆಲವಡೆ ಮಧ್ಯರಾತ್ರಿವರೆಗೂ ಪೊಲೀಸ್​ ಬಂದೋಬಸ್ತ್​ ನಿಯೋಜಿಸಲಾಗಿತ್ತು. ಬಾರ್​, ಹೊಟೇಲ್​ ಮಾಲೀಕರು ಹಾಗೂ ಸಿಬ್ಬಂದಿ ಜತೆಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಯಾವುದೇ ಗಲಾಟೆ ಗದ್ದಲಗಳು ನಡೆದಲ್ಲಿ ತಕ್ಷಣ ಪೊಲೀಸ್​ ಠಾಣಿಗೆ ಮಾಹಿತಿ ನೀಡುವಂತೆ ನಗರ ಪೊಲೀಸ್​ ಠಾಣೆ ಆರಕ್ಷಕ ನಿರೀಕ್ಷಕ ಭರತ್​ಗೌಡ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net