ಸಿಂದಗಿ ಪಟ್ಟಣದಲ್ಲಿ ತಳವಾರ ಸಮುದಾಯ ಭವನದ ಭೂಮಿ ಪೂಜೆಯನ್ನು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ ನೆರವೇರಿಸಿದರು. ಶಾಸಕ ಎ.ಎಂ. ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಶಿವಣ್ಣ ಕೊಟಾರಗಸ್ತಿ ಇತರರಿದ್ದಾರೆ.
ಸಿಂದಗಿ : ನಗರದ ಗೋಲಗೇರಿ ರಸ್ತೆಯಲ್ಲಿ ನಿರ್ಮಾಣ ವಾಗುತ್ತಿರುವ ತಳವಾರ ಸಮುದಾಯ ಭವನದ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ಒದಗಿಸುವುದಾಗಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ ವಾಗ್ದಾನ ನೀಡಿದರು.
ಪಟ್ಟಣದ ಆದರ್ಶ ವಿದ್ಯಾಲಯದ ಬಳಿಯ 20 ಗುಂಟೆ ಸ್ಥಳದಲ್ಲಿ ಭಾನುವಾರ ಮುಖ್ಯಮಂತ್ರಿಗಳ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಯಡಿಯಲ್ಲಿ 50 ಲಕ್ಷ ರೂ.ಗಳ ಅನುದಾನದಲ್ಲಿ ತಳವಾರ ಸಮಾಜದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಅವರು ಮಾತನಾಡಿ, ತಳವಾರ ಸಮುದಾಯದ ಅಭಿವೃದ್ಧಿಗೆ ಶಾಸಕ ಮನಗೂಳಿ ಅವರ ಸಂಪೂರ್ಣ ಸಹಕಾರವಿದ್ದು, ಸಮಾಜದ ಬಂಧುಗಳು ಅವರ ಸಹಕಾರವನ್ನು ಪಡೆದು ಸಮಾಜದ ಒಳಿತಿನ ಕಾರ್ಯ ಮಾಡಬೇಕು ಎಂದರು.
ಶಾಸಕ ಎ.ಎಂ. ಮನಗೂಳಿ ಮಾತನಾಡಿ, ತಾಲೂಕಿನ ತಳವಾರ ಸಮುದಾಯದ ಜನರಿಗೆ ಸರ್ಕಾರದ ಸೌಲಭ್ಯಗಳೊಂದಿಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ. ತಳವಾರ ಸಮುದಾಯದ ಭವನಕ್ಕೆ ಮೊದಲ ಹಂತವಾಗಿ 50 ಲಕ್ಷ ರೂ. ಬಿಡುಗಡೆಯಾಗಿದ್ದು, ಕಟ್ಟಡ ಲೋಕಾರ್ಪಣೆಗೊಳ್ಳುವವರೆಗೂ ಸರ್ಕಾರದಿಂದ ಅಗತ್ಯ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತಾನಾಡಿ, ಶಾಸಕ ಮನಗೂಳಿ ಸಮುದಾಯಕ್ಕೆ ಮೌಲ್ಯದ ಸ್ಥಳವನ್ನು ಗುರುತು ಮಾಡಿ, ಭೂಮಿಪೂಜೆ ನೆರವೇರಿಸಿದ್ದು, ಮುಂಬರುವ ದಿನಗಳಲ್ಲಿ ಯಾರಿಂದಲೇ, ಯಾವುದೇ ಒತ್ತಡ ಬಂದರೂ ಗುರುತಿಸಿದ ಸ್ಥಳವನ್ನು ಬದಲಾಯಿಸದೇ ಸಮಾಜಕ್ಕೆ ಕೊಟ್ಟ ಭರವಸೆಯಂತೆ ನಡೆದುಕೊಳ್ಳಬೇಕು. ಶಾಸಕ ಕಮಕನೂರ ಹಾಗೂ ಮನಗೂಳಿ ಅವರ ತಲಾ 3 ಕೋಟಿ ರೂ, ಅನುದಾನದಲ್ಲಿ ಸುಂದರ ಸಮುದಾಯ ಭವನ ನಿರ್ಮಾಣಗೊಳ್ಳಲಿ ಎಂದರು.