

ರಾಜಭವನಗಳ ಹೆಸರನ್ನು ಇತ್ತೀಚೆಗಷ್ಟೇ ‘ಲೋಕಭವನ’ವಾಗಿ ಬದಲಾವಣೆ ಮಾಡಲಾಗಿದೆ. ಹೆಸರಷ್ಟೇ ಬದಲಾಗಿದ್ದು, ಇವುಗಳ ಸುತ್ತ ಆವರಿಸಿಕೊಂಡಿರುವ ರಾಜಕೀಯ ಕಾರ್ಮೋಡ ಮಾತ್ರ ಚದುರಿಲ್ಲ.
ದೇಶದ ಕೆಲವು ರಾಜ್ಯಗಳಲ್ಲಂತೂ ರಾಜ್ಯಪಾಲರ ವಿರುದ್ಧ ಅಲ್ಲಿನ ಸರ್ಕಾರಗಳು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಾಜ್ಯಪಾಲರು ಕೂಡ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯವಾಗಿ, ಕೇರಳ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ನಡೆದಿರುವ ಬೆಳವಣಿಗೆಗಳು ಕಳವಳಕ್ಕೆ ಕಾರಣವಾಗಿವೆ. ಗವರ್ನರ್ ಅಧಿಕಾರವ್ಯಾಪ್ತಿ ಚರ್ಚೆಗೆ ಗ್ರಾಸವಾಗಿದ್ದರೆ, ಕೆಲ ರಾಜಕೀಯ ಮುಖಂಡರ ವರ್ತನೆ ಬಗ್ಗೆಯೂ ಅಸಹನೆ ವ್ಯಕ್ತವಾಗಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಹೊಸ ವರ್ಷದ ಮೊದಲ ಅಧಿವೇಶನದಲ್ಲೇ ರಾಜ್ಯ ಸರ್ಕಾರಗಳು ಮತ್ತು ರಾಜ್ಯಪಾಲರ ನಡುವೆ ಜಟಾಪಟಿ ಆರಂಭಗೊಂಡಿದೆ. ವರ್ಷದ ಮೊದಲ ಅಧಿವೇಶನ ಆರಂಭವಾಗುವಾಗ, ಸರ್ಕಾರದ ನೀತಿಗಳನ್ನು ಒಳಗೊಂಡ ಲಿಖಿತ ಭಾಷಣವನ್ನು ರಾಜ್ಯಪಾಲರು ಓದುವುದು ಮೊದಲಿನಿಂದ ಪಾಲಿಸಿಕೊಂಡು ಬಂದಿರುವ ಶಿಷ್ಟಾಚಾರವಾಗಿದೆ.
ಡಿಎಂಕೆ ಸರ್ಕಾರ ಸಿದ್ಧಪಡಿಸಿದ್ದ ಸಾಂಪ್ರದಾಯಿಕ ಭಾಷಣವನ್ನು ಓದಲು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಜ.20ರಂದು ನಿರಾಕರಿಸಿದ್ದು ಭಾರಿ ವಿವಾದಕ್ಕೆ ಕಾರಣವಾಯಿತು. ಭಾಷಣದಲ್ಲಿ ಹಲವು ‘ಅಸಮರ್ಥನೀಯ ಅಂಶಗಳು ಹಾಗೂ ದಾರಿ ತಪ್ಪಿಸುವ ಹೇಳಿಕೆಗಳಿವೆ’ ಎಂದು ರಾಜ್ಯಪಾಲರ ನಡೆಗೆ ಕಾರಣ ಹೇಳಿ ಲೋಕಭವನ ವಿವರಣೆ ನೀಡಿದೆ. ಇದು ಮೊದಲ ಬಾರಿಯೇನಲ್ಲ. ಅಧಿವೇಶನದಲ್ಲಿ ಸತತ ಮೂರನೇ ವರ್ಷ ಭಾಷಣ ಮಾಡದೆ ರವಿ ಮರಳಿದ್ದಾರೆ. ‘ರಾಜ್ಯಪಾಲರ ಮೈಕ್ ಪದೇಪದೆ ಸ್ವಿಚ್ ಆಫ್ ಮಾಡಿ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಹಾಗಾಗಿ ಅಲ್ಲಿಂದ ರಾಜ್ಯಪಾಲರು ಹೊರಬರಬೇಕಾಯಿತು ಎಂದು ಲೋಕಭವನ ಸ್ಪಷ್ಟನೆ ನೀಡಿತಾದರೂ, ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ವಿವಾದ ಇನ್ನೂ ಬಗೆಹರಿದಿಲ್ಲ.
ರಾಜ್ಯಪಾಲರು ಶಿಷ್ಟಾಚಾರ ಮರೆತು ವಿಧಾನಮಂಡಲದಿಂದ ನಿರ್ಗಮಿಸಿದರು ಎಂದು ಮುಖ್ಯಮಂತ್ರಿ ಸ್ಟಾಲಿನ್ ಆರೋಪಿಸಿದರು. ಮಾತ್ರವಲ್ಲ, ರಾಜ್ಯಪಾಲರ ನಡೆ ಖಂಡಿಸಿ ಸ್ಟಾಲಿನ್ ಮಂಡಿಸಿದ ನಿರ್ಣಯವನ್ನು ಸದನ ಅಂಗೀಕರಿಸಿತು. ‘ಭಾಷಣ ಓದದೇ ಇರುವ ರಾಜ್ಯಪಾಲರ ವರ್ತನೆಯನ್ನು ಸದನ ಒಪು್ಪವುದಿಲ್ಲ. ಸರ್ಕಾರ ಸಿದ್ಧಪಡಿಸಿರುವ ತಮಿಳು ಭಾಷೆಯಲ್ಲಿರುವ ಭಾಷಣವನ್ನು ಸ್ಪೀಕರ್ ಎಂ.ಅಪ್ಪವು ಓದಿದ್ದು, ಇದು ಮಾತ್ರ ಕಡತಕ್ಕೆ ಹೋಗಲಿದೆ’ ಎಂಬ ಅಂಶಗಳನ್ನು ಈ ನಿರ್ಣಯ ಒಳಗೊಂಡಿದೆ.
ಸದನವನ್ನು ಉದ್ದೇಶಿಸಿ ಮಾತನಾಡುವ ವೇಳೆ ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ಭಾಷಣದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿದ್ದಾರೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ. ‘ವಿಧಾನಸಭೆ ಅಧಿವೇಶನ ಆರಂಭದಲ್ಲಿ ಸದನ ಉದ್ದೇಶಿಸಿ ಭಾಷಣ ಓದಿರುವ ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ಕೇಂದ್ರ ಸರ್ಕಾರದ ವಿರುದ್ಧದ ಕೆಲ ಭಾಗಗಳನ್ನು ಕೈಬಿಟ್ಟಿದ್ದಾರೆ. ಆದರೆ, ಸಂವಿಧಾನದ ಪ್ರಕಾರ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವ ಭಾಷಣಕ್ಕೇ ಪ್ರಾಧಾನ್ಯ ಇರಲಿದೆ’ ಎಂದು ಪಿಣರಾಯಿ ವಿಜಯನ್ ಹೇಳುವ ಮೂಲಕ, ರಾಜ್ಯಪಾಲರ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೇರಳ ವಿಧಾನಸಭೆ ಅಂಗೀಕರಿಸಿದ ಹಲವು ಮಸೂದೆಗಳು ದೀರ್ಘಕಾಲದಿಂದ ಅಂಕಿತಕ್ಕಾಗಿ ಬಾಕಿ ಉಳಿದಿವೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ರಾಜ್ಯದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸಂವಿಧಾನ ಪೀಠಕ್ಕೆ ವರ್ಗಾಯಿಸಿದೆ.
ವರ್ಷದ ಆರಂಭದಲ್ಲಿ ನಡೆಯುವ ವಿಧಾನಸಭೆ ಅಧಿವೇಶನ ವೇಳೆ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದನ್ನು ಕಡ್ಡಾಯಗೊಳಿಸುವ ಅವಕಾಶಗಳನ್ನು ಸಂವಿಧಾನದಿಂದ ತೆಗೆದುಹಾಕಬೇಕು. ಈ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರಲು ಡಿಎಂಕೆ ಪಕ್ಷ ಪ್ರಯತ್ನಿಸಲಿದೆ.
ರಾಜ್ಯ ಸರ್ಕಾರ ಅಂಗೀಕರಿಸಿದ ವಿಧೇಯಕಗಳಿಗೆ ಅಂಕಿತ ಹಾಕದೆ ವಿಳಂಬನೀತಿ ಅನುಸರಿಸುತ್ತಿದ್ದ ಪಂಜಾಬ್ ಮತ್ತು ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ 2023ರ ನವೆಂಬರ್ನಲ್ಲಿ ಚಾಟಿ ಬೀಸಿ, ‘ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ’ ಎಂದು ಎಚ್ಚರಿಸಿತ್ತು. ರಾಜ್ಯ ಸರ್ಕಾರಗಳು ಅಂಗೀಕರಿಸಿದ ಮಸೂದೆಗಳ ಬಗ್ಗೆ ಆಕ್ಷೇಪಗಳಿದ್ದರೆ, ಅನುಮಾನಗಳಿದ್ದರೆ ರಾಜ್ಯಪಾಲರು ಸ್ಪಷ್ಟನೆ ಕೋರಿ ಅದನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸಬೇಕೆ ಹೊರತು, ಅನಿರ್ದಿಷ್ಟ ಕಾಲದವರೆಗೆ ಸರ್ಕಾರ ಕಾಯುವಂತೆ ಮಾಡಬಾರದು. ಇದರಿಂದ ಸರ್ಕಾರದ ಕಾರ್ಯನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಕೋರ್ಟ್ ಹೇಳಿತ್ತು.
ಕಾಲಮಿತಿ ನಿಗದಿ ಪಡಿಸಿದ ನ್ಯಾಯಾಲಯ: ಸಚಿವ ಸಂಪುಟದ ಸಹಾಯ ಮತ್ತು ಸಲಹೆ ಇಲ್ಲದೆ ರಾಜ್ಯಪಾಲರು ಅಂಕಿತ ಹಾಕುವುದನ್ನು ತಡೆಹಿಡಿಯಲು ನಿರ್ಧರಿಸಿದರೆ ಮಸೂದೆಗಳನ್ನು ಮೂರು ತಿಂಗಳೊಳಗೆ ವಿಧಾನಸಭೆಗೆ ಹಿಂದಿರುಗಿಸಬೇಕು. ವಿಧಾನ ಮಂಡಲ ಪುನರ್ವಿಮರ್ಶೆ ನಂತರ ಮಸೂದೆಯನ್ನು ರಾಜ್ಯಪಾಲರಿಗೆ ಮತ್ತೊಮ್ಮೆ ಕಳುಹಿಸಿದರೆ ಅಂಥ ಮಸೂದೆಗೆ ಒಂದು ತಿಂಗಳೊಳಗೆ ರಾಜ್ಯಪಾಲರು ಒಪ್ಪಿಗೆ ನೀಡಬೇಕು. ರಾಜ್ಯಪಾಲರು ಕಾಲಮಿತಿ ಒಳಗೆ ಕಾರ್ಯನಿರ್ವಹಿಸಲು ವಿಫಲವಾದರೆ ನ್ಯಾಯಾಲಯಗಳಿಂದ ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಬಹುದು. ಹಾಗಾಗಿ ರಾಜ್ಯಪಾಲರು ರಾಜ್ಯ ಶಾಸಕಾಂಗಕ್ಕೆ ಅಡೆತಡೆಗಳನ್ನು ಒಡ್ಡದಂತೆ ಜಾಗೃತರಾಗಿರಬೇಕು ಎಂದು ಸುಪ್ರೀಂ ಕೋರ್ಟ್ 2025ರ ಏಪ್ರಿಲ್ನಲ್ಲಿ ನೀಡಿದ ತನ್ನ ಆದೇಶದಲ್ಲಿ ತಿಳಿಸಿದೆ.