ಜಲ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ

ಹುಕ್ಕೇರಿಯ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ
ಹುಕ್ಕೇರಿಯ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ
Published on
ವಿಜಯವಾಣಿ ಸುದ್ದಿಜಾಲ ಹುಕ್ಕೇರಿ
ತಾಲೂಕಿನ ಜನ ತಮ್ಮ ಭೂಮಿಯನ್ನು ಹಿಡಕಲ್ಲ ಜಲಾಶಯ ನಿರ್ಮಿಸಲು ಅನುವು ಮಾಡಿಕೊಟ್ಟಿದ್ದಾರೆ. ಆದರೆ, ಅವರಿಗೆ ಕುಡಿಯಲು ನೀರು ಸಿಗುತ್ತಿಲ್ಲವೆಂಬುದು ವಿಪರ್ಯಾಸ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಹೇಳಿದರು.
ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ರೈತ ಸಂಘಟನೆಯಿಂದ ಬುಧವಾರ ಹುಕ್ಕೇರಿ ತಾಲೂಕು ಸಮಗ್ರ ನೀರಾವರಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ತಾಲೂಕಿನ ಅಮ್ಮಣಗಿ, ಕಣಗಲಾ ಸೇರಿದಂತೆ 60 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ರಾಜ್ಯ ಸರ್ಕಾರ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಹಿಡಕಲ್ಲ ಜಲಾಶಯದಿಂದ ನೀರು ಪೂರೈಸಲು ಯೋಜಿಸಿದೆ. ಮೊದಲು ಜಲಾಶಯಕ್ಕಾಗಿ ಜಮೀನು ನೀಡಿದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಇಲ್ಲವಾದರೆ ಧಾರವಾಡಕ್ಕೆ ನೀರು ತೆಗೆದುಕೊಂಡು ಹೋಗಲು ಹಾಕಿರುವ ಪೈಪ್‌ಲೈನ್ ಕಿತ್ತೆಸೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆ ಕಾರ್ಯಾಧ್ಯಕ್ಷ ಶಶಿಕಾಂತ ಗುರೂಜಿ ಮಾತನಾಡಿ, ರಾಜಕೀಯ ರಹಿತ ಹಾಗೂ ಪಕ್ಷಾತೀತವಾಗಿ ರೈತರ ಹೋರಾಟ ಇದಾಗಿದೆ. ಪ್ರತಿಭಟನೆಗೆ ಬೆಂಬಲಿಸುವ ಎಲ್ಲರಿಗೂ ಮುಕ್ತ ಅವಕಾಶವಿದೆ. ಆದರೆ, ರಾಜಕೀಯ ಹೊರತುಪಡಿಸಿ ನೀರಾವರಿಗಾಗಿ ಮಾತ್ರ ಪಾಲ್ಗೊಳ್ಳಬೇಕು ಎಂದರು.
ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಮಾಜಿ ಸಚಿವರಾದ ಮಲ್ಲಾರಿಗೌಡ ಪಾಟೀಲ, ಉಮೇಶ ಕತ್ತಿ, ಶಶಿಕಾಂತ ನಾಯಿಕ, ಮಾಜಿ ಶಾಸಕ ಮಹಾಜನಶೆಟ್ಟಿ ಅವರು ಕೈಗೊಂಡ ನೀರಾವರಿ ಕಾರ್ಯಗಳನ್ನು ವಿವರಿಸಿದರು.
ಈಗಿರುವ ಏತ ನೀರಾವರಿಗಳ ಸಮರ್ಪಕ ಬಳಕೆ, ನದಿ ಮತ್ತು ಕೆರೆಗಳ ಹೂಳೆತ್ತುವಿಕೆಗೆ ಆದ್ಯತೆ ನೀಡಬೇಕು. ಈಗಾಗಲೇ 41 ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತಿದೆ. ಹಿರಣ್ಯಕೇಶಿ ನದಿಯಲ್ಲಿ 12 ತಿಂಗಳು ನೀರು ಇರಿಸಲು 5 ಬ್ಯಾರೇಜುಗಳಿಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಂಡ ಬಳಿಕ ಪ್ರಸ್ತುತ ಶೇ.80ರಷ್ಟು ಭಾಗ ನೀರಾವರಿ ಆಗುತ್ತದೆ. ಮಲ್ಲಿಕಾರ್ಜುನ ಏತ ನೀರಾವರಿ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೊಂಡಲ್ಲಿ ಹುಕ್ಕೇರಿ ಮತಕ್ಷೇತ್ರದ 25 ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರಕಲಿದೆ. ಇದರಿಂದ ಹುಕ್ಕೇರಿ ಮತಕ್ಷೇತ್ರ ಸಂಪೂರ್ಣ ನೀರಾವರಿ ಆಗಲಿದೆ ಎಂದರು.
ಭಾರತೀಯ ಕೃಷಿಕ ಸಮಾಜ ಚಿಕ್ಕೋಡಿ ಜಿಲ್ಲಾಧ್ಯಕ್ಷ ದುಂಡನಗೌಡ ಪಾಟೀಲ ಮಾತನಾಡಿದರು. ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ರೈತ ಮುಖಂಡರಾದ ಸಂಜು ಹಾವಣ್ಣವರ, ಸುರೇಶ ಘಸ್ತಿ, ರವಿ ಚಿಕ್ಕೋಡಿ, ಕಲ್ಲಪ್ಪ ನಾಯಿಕ, ನಾಗರಾಜ ಹಾದಿಮನಿ, ಪ್ರೇಮ ಚೌಗಲಾ, ರಾಮಚಂದ್ರ ಜೋಶಿ, ಸತ್ಯಪ್ಪ ನಾಯಿಕ, ಬಸವರಾಜ ಹುಂದ್ರಿ, ಭೀಮಗೌಡ ಗಿರಿಗೌಡನವರ, ಭೀಮಸೇನ ಬಾಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net