ರೈತರ ಆತ್ಮಹತ್ಯೆಗೆ ಸರ್ಕಾರವೇ ಕಾರಣ

Government is responsible for farmers' suicides
Government is responsible for farmers' suicides
Published on
ಕುಣಿಗಲ್​: ರೈತನ ಸಾವಿಗೆ ಹಲವಾರು ಕಾರಣವನ್ನು ಸರ್ಕಾರ ನೀಡುತ್ತದೆ. ಆದರೆ ರೈತರ ಆತ್ಮಹತ್ಯೆಗೆ ಸರ್ಕಾರವೇ ಕಾರಣವಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್​ಪಟೇಲ್​ ತಿಳಿಸಿದರು.
ಪಟ್ಟಣದ ಕಸಾಪ ಪಟೇಲ್​ ನಾರಸೀಗೌಡ, ಮಲ್ಲಮ್ಮ ಸಭಾಂಗಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ರೈತರ ಪಾದ ತೊಳೆದು, ಪಾದಪೂಜೆ ಮಾಡಿ ಮಾತನಾಡಿ, ರೈತರು ಎಷ್ಟೇ ಕಷ್ಟವಾದರೂ ತಮ್ಮ ಕಾಯಕ ಬಿಟ್ಟಿಲ್ಲ, ಉದ್ಯಮಿಗಳು ಲಾಭವಿಲ್ಲದಿದ್ದರೇ ಕಾರ್ಖಾನೆ ಬಂದ್​ ಮಾಡುತ್ತಾರೆ. ಆದರೆ ರೈತ ಲಾಭ ನಷ್ಟ ಲೆಕ್ಕ ಹಾಕದೇ ತಮ್ಮ ಕಾಯಕ ಬಿಡದೇ ಮಾಡುತ್ತಾ ಇಡೀ ಪ್ರಪಂಚಕ್ಕೆ ಅನ್ನ ಹಾಕುತ್ತಿದ್ದಾನೆ. ಆದರೆ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ರೈತನ ಶ್ರಮದಿಂದ ಇಡೀ ದೇಶ ಹಸಿವು ಮುಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿವು ಮುಕ್ತ ಕರ್ನಾಟಕ ಮಾಡುತ್ತೇನೆ ಎಂದು ಹೇಳುತ್ತಾರೆ, ಸಿದ್ದರಾಮಯ್ಯ ಅವರಿಂದ ಹಸಿವು ಮುಕ್ತ ಕರ್ನಾಟಕ ಮಾಡಲು ಸಾಧ್ಯವಿಲ್ಲ. ಅದು ರೈತರಿಂದ ಮಾತ್ರ ಸಾಧ್ಯ. ಸರ್ಕಾರ ಗ್ಯಾರಂಟಿ ಯೋಜನೆಗಾಗಿ ಕೃಷಿ ಉತ್ಪನ್ನದ ಮೇಲಿನ ಎಲ್ಲ ಸಹಾಯಧನ ನಿಲ್ಲಿಸಿದ್ದಾರೆ. ಇದರಿಂದ ರೈತ ಸಂಕಷ್ಟದಲ್ಲಿ ಇದ್ದಾನೆ, ಉಚಿತ ಯೋಜನೆ ಮೂಲಕ ಸರ್ಕಾರ ವೋಟ್​ ಬ್ಯಾಂಕ್​ ಮಾಡಿಕೊಳ್ಳಲು ಹೊರಟಿದೆ ಎಂದು ಟೀಕಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಡಾ.ಕಪನಿಪಾಳ್ಯ ರಮೇಶ್​ ಮಾತನಾಡಿ, ಹೆತ್ತ ತಾಯಿ, ಭೂ ತಾಯಿಯನ್ನು ನಾವು ಎಂದು ಮರೆಯಬಾರದು, ತಾಯಿ ನಮಗೆ ಜನ್ಮ ನೀಡಿದರೇ, ಭೂ ತಾಯಿ ಹಸಿವನ್ನು ನೀಗಿಸುತ್ತಾಳೆ. ರೈತನು ಬೆಳೆ ಬೆಳೆದು ವಿಶ್ವಕ್ಕೆ ಅನ್ನ ಕೊಡುತ್ತಾನೆ. ಹೀಗಾಗಿ ಈ ಮೂವರು ನಮಗೆ ದೇವರ ಸಮಾನರಾಗಿದ್ದಾರೆ ಎಂದು ಹೇಳಿದರು.
ಇದಕ್ಕೂ ಮುನ್ನ ಸಾಧಕ ರೈತರಾದ ನವೀದ್​ಪಾಷಾ, ಶ್ರೀನಿವಾಸ್​, ಸುಚಿತ್ರಾ, ವೆಂಕಟೇಗೌಡ, ನಯಾಜ್​ ಅವರನ್ನು ಸನ್ಮಾನಿಸಲಾಯಿತು. ರೈತ ಸಂಘದ ತಾಲೂಕು ಅಧ್ಯಕ್ಷ ಅನಿಲ್​ಕುಮಾರ್​, ಪ್ರಧಾನ ಕಾರ್ಯದರ್ಶಿ ಲಕ್ಷ$್ಮಣ್​ಗೌಡ, ಕಾರ್ಯದರ್ಶಿ ಹೊಸರಂಗಯ್ಯನಪಾಳ್ಯ ವೆಂಕಟೇಶ್​, ಹೋಬಳಿ ಅಧ್ಯಕ್ಷ ಬೆಟ್ಟಸ್ವಾಮಿಗೌಡ, ಕೃಷ್ಣ, ಪ್ರಕಾಶ್​. ಗೌರೀಶ್​ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net