ಕೋಲಾರ: ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ, ಹೋರಾಟ ಮತ್ತು ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮ್ಯೂಸಿಯಂ (ವಸ್ತು ಸಂಗ್ರಹಾಲಯ) ನಿಮಾರ್ಣ ಮಾಡಲು ರಾಜ್ಯ ಸರ್ಕಾರ ಅಧಿಕೃತವಾಗಿ ಪೂರ್ವಾನುಮೋದನೆ ನೀಡಿದೆ.
ಕೋಲಾರದಲ್ಲಿ ಇಂತಹದ್ದೊಂದು ಬೃಹತ್ ಜ್ಞಾನಕೇಂದ್ರ ತಲೆ ಎತ್ತಬೇಕು ಎಂಬ ಜಿಲ್ಲಾಧಿಕಾರಿಗಳ ವಿಶೇಷ ಆಶಯದಂತೆ ಈ ಯೋಜನೆ ಸಾಕಾರಗೊಳ್ಳುತ್ತಿರುವುದು ಜಿಲ್ಲೆಯ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.
"
ಸಾಮಾಜಿಕ ಪರಿವರ್ತನೆ ಕೇಂದ್ರ
ಶಿಕ್ಷಣ ತಜ್ಞರು, ನಾಯಕರು, ಸಮಾಜಮುಖಿ ಕಾರ್ಯಕರ್ತರು, ಸರ್ಕಾರಿ ಅಧಿಕಾರಿಗಳು, ಆರ್ಥಿಕ ತಜ್ಞರು, ವಿದ್ಯಾರ್ಥಿಗಳು ಹಾಗೂ ಸಮಾಜದ ವಂಚಿತ ವರ್ಗಗಳ ಸಾಮಾಜಿಕ ಪರಿವರ್ತನೆಯಲ್ಲಿ ತೊಡಗಿರುವ ವಿವಿಧ ಗುಂಪುಗಳ ನಡುವೆ ದೃಢವಾದ ಸಂಪರ್ಕವನ್ನು ಸ್ಥಾಪಿಸಲು ಈ ಕೇಂದ್ರವು ಪ್ರಮುಖ ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಜಿಲ್ಲಾಧಿಕಾರಿಯವರ ಸಕಾರಾತ್ಮಕ ಹೆಜ್ಜೆ ಹಾಗೂ ರಾಜ್ಯ ಸರ್ಕಾರದ ತ್ವರಿತ ಸ್ಪಂದನೆಯಿಂದಾಗಿ ಜಿಲ್ಲೆಯಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಜಾಗೃತಿಯ ನೂತನ ಶಕ್ತಿ ಕೇಂದ್ರವೊಂದು ತಲೆ ಎತ್ತುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಸಂತೋಷ ವ್ಯಕ್ತವಾಗಿದೆ.
ಕೋಲಾರ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಈಕಂಬಳ್ಳಿ ಗ್ರಾಮದ ಸರ್ವೇ ನಂಬರ್ 19ರಲ್ಲಿರುವ 5- ಎಕರೆ ವಿಸ್ತೀರ್ಣದ ಸರ್ಕಾರಿ ಗುಂಡು ತೋಪು ಜಮೀನನ್ನು ಡಾ.ಬಿ.ಆರ್.ಅಂಬೇಡ್ಕರ್ ಮ್ಯೂಸಿಯಂ ನಿಮಾರ್ಣಕ್ಕಾಗಿ ಕಾಯ್ದಿರಿಸಲಾಗಿದೆ. ಈ ಮಹತ್ವದ ಯೋಜನೆಗಾಗಿ ಜಮೀನನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಹೆಸರಿಗೆ ಕಾಯ್ದಿರಿಸಲು ಕಂದಾಯ ಇಲಾಖೆಯು ಜಿಲ್ಲಾಧಿಕಾರಿಯವರಿಗೆ ಅನುಮೋದನೆ ನೀಡಿದೆ.
ಜಿಲ್ಲೆಯಲ್ಲಿ ಶಾಶ್ವತವಾಗಿ ಉಳಿಯುವ ಕೆಲಸ ಮಾಡಬೇಕೆಂಬ ಆಲೋಚನೆ ಇತ್ತು. ಅಂಬೇಡ್ಕರ್ ಅವರ ಹೆಸರು ಶಾಶ್ವತವಾಗಿ ಈ ಜಿಲ್ಲೆಯಲ್ಲಿ ಉಳಿಯುವಂತಹ ಕೆಲಸ ಮಾಡಬೇಕೆಂದು ಪ್ರಜ್ಞಾವಂತರು ಮತ್ತು ದಲಿತ ಮುಖಂಡರು ಒತ್ತಾಯ ಮಾಡುತ್ತಿದ್ದರು. ಜಿಲ್ಲೆಯಲ್ಲಿ ಅಂಬೇಡ್ಕರ್ ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರ ಸ್ಥಾಪಿಸಬೇಕೆಂಬ ಚಿಂತನೆಯೊಂದಿಗೆ 5 ಎಕರೆ ಜಮೀನು ಶಿಫಾರಸಿಗೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದ್ದು, ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮತ್ತು ಚಿಂತಾಮಣಿಯಲ್ಲಿ ಅಧ್ಯಯನ ಕೇಂದ್ರಗಳು ಪ್ರಾರಂಭಗೊಂಡಿವೆ. ಕೋಲಾರದಲ್ಲಿಯೂ ಅದೇ ರೀತಿ ಅಧ್ಯಯನ ಕೇಂದ್ರ ಮತ್ತು ಮ್ಯೂಸಿಯಂ ಪ್ರಾರಂಭಿಸಿ ಅಂಬೇಡ್ಕರ್ ಬಗೆಗಿನ ಪುಸ್ತಕಗಳು ಲಭ್ಯವಿರುವಂತೆ ಮಾಡಲಾಗುವುದು. ಅಂಬೇಡ್ಕರ್ ಉಡುಪುಗಳು ಮ್ಯೂಸಿಯಂನಲ್ಲಿ ಲಭ್ಯವಿರುತ್ತವೆ. ಅಧ್ಯಯನ ಕೇಂದ್ರದಲ್ಲಿ ಆಡಿಟೋರಿಯಂ, ಹೈಟೆಕ್ ಗ್ರಂಥಾಲಯ, ಭವನ ಒಳಗೊಂಡಂತೆ ನೂತನವಾಗಿ ಕಟ್ಟಡ ನಿಮಾರ್ಣವಾಗಲಿದೆ.
— ಎಂ.ಆರ್ ರವಿ, ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿಗಳ ದೂರದೃಷ್ಟಿಯಂತೆ ನಿಮಾರ್ಣವಾಗುತ್ತಿರುವ ಈ ಮ್ಯೂಸಿಯಂ ಕೇವಲ ಒಂದು ಭೌತಿಕ ಸ್ಮಾರಕವಾಗಿರದೆ, ಸಮಾಜಕ್ಕೆ ಬೆಳಕು ನೀಡುವ ಚೈತನ್ಯಶಿಲ ಅಧ್ಯಯನ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
ಡಾ.ಬಿ.ಆರ್.ಅಂಬೇಡ್ಕರ್ ವಿಚಾರಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಲು, ಜನಪ್ರಿಯಗೊಳಿಸಲು ಮತ್ತು ಅಧ್ಯಯನ ಆಸಕ್ತರಿಗೆ ಸಂಪನ್ಮೂಲ ಒದಗಿಸಲು ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.ಇದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಕಾಲಘಟ್ಟದ ಕುರಿತಾದ ನಿಖರ ದಾಖಲೀಕರಣ ಕಾರ್ಯವನ್ನು ಪ್ರೋತ್ಸಾಹಿಸುತ್ತದೆ.
ಅಂಬೇಡ್ಕರ್ ಅವರ ಆಳವಾದ ತತ್ವಶಾಸ್ತ್ರವನ್ನು ಸಮಕಾಲೀನ ಸನ್ನಿವೇಶದಲ್ಲಿ ಅಧ್ಯಯನ ಮಾಡಲು ಮತ್ತು ಅರ್ಥಮಾಡಿಕೊಳ್ಳಲು ಇದೊಂದು ಕಲಿಕಾ ವೇದಿಕೆಯಾಗಲಿದೆ.