ಜಾತಿ ಗಣತಿಗೆ ಮಾಹಿತಿ ಕೊಡಲು ಇಲಾಖೆಗಳ ಹಿಂದೇಟು! caste census
ವಿಧಾನಸೌಧ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗಂಭೀರವಾಗಿ ಪರಿಗಣನೆ ಎಂದು ಎಚ್ಚರಿಸಿದ ಸರ್ಕಾರ
ತರಬೇತಿ ನೀಡಿದರೂ ಸಹ ಮಾಹಿತಿ ಸಲ್ಲಿಸಿಲ್ಲ
13 ಇಲಾಖೆಗಳು ಮಾಹಿತಿ ಅಪ್‌ಲೋಡ್ ಮಾಡುವ ಕಾರ್ಯವನ್ನೇ ಪ್ರಾರಂಭಿಸಿಲ್ಲ
ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿಯ ಜಾತಿ ಗಣತಿಗೆ (caste census) ಅಗತ್ಯವಾಗಿ ಬೇಕಾದ ಸೆಕೆಂಡರಿ ದತ್ತಾಂಶ ಮಾಹಿತಿ ಸಂಗ್ರಹಿಸುವ ಹಿಂದುಳಿದ ವರ್ಗಗಳ ಆಯೋಗಕ್ಕೆ ಸರ್ಕಾರದ ಇಲಾಖೆಗಳಿಂದಲೇ (government) ಪೂರ್ಣ ಸಹಕಾರ ದೊರಕದೇ ಇರುವ ಬೆಳವಣಿಗೆ ನಡೆದಿದೆ. ಇದನ್ನು ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ.
ಆಯೋಗವು ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ರಾಜ್ಯದ ನಾಗರಿಕ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿದೆ. ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ವಿವಿಧ ಪ್ರವರ್ಗಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು ಎಂಪರಿಕಲ್ ಡೇಟಾ ಪಡೆದು ಸೂಕ್ತ ಶಿಫಾರಸುಗಳೊಂದಿಗೆ ಸಲ್ಲಿಸಬೇಕಾಗಿದೆ.
ಹೀಗಾಗಿ ಸರ್ಕಾರದ ಇಲಾಖೆಗಳು, ನಿಗಮ, ಮಂಡಳಿ, ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಪ್ರವರ್ಗಗಳಿಗೆ ಸೇರಿದ ಅಧಿಕಾರಿ/ನೌಕರರ ಮಾಹಿತಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಪಡೆದ ವಿದ್ಯಾರ್ಥಿಗಳ ವಿವರ ಒದಗಿಸುವಂತೆ ಆಯೋಗ ಹಲವು ಬಾರಿ ಇಲಾಖೆಗಳಿಗೆ ಸೂಚನೆ ಕಳಿಸಿತ್ತು. ಆದರೆ, ಸ್ಪಂದನೆ ಸಿಗದ ಪರಿಣಾಮ, ಮುಖ್ಯಕಾರ್ಯದರ್ಶಿಯವರ ಮೂಲಕ ಬಿಸಿಮುಟ್ಟಿಸುವ ಕೆಲಸವೂ ನಡೆದಿತ್ತು.
ಅಷ್ಟಾಗಿಯೂ ಮಾಹಿತಿಗಳ ಪ್ರಕಾರ ಮಂಗಳವಾರ ಎಲ್ಲ ಇಲಾಖೆಗಳು ಮಾಹಿತಿ ನೀಡಬಹುದು ಎಂದು ಆಯೋಗ ಭರವಸೆ ಇಟ್ಟುಕೊಂಡಿದೆ.
ಇಲಾಖೆಗಳು
ಇಂಧನ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪಶುಸಂಗೋಪನೆ, ಸಹಕಾರ, ವೈದ್ಯಕೀಯ ಶಿಕ್ಷಣ, ಕನ್ನಡ ಸಂಸ್ಕೃತಿ, ಯುವ ಸಬಲೀಕರಣ, ಐಟಿಬಿಟಿ, ಪರಿಶಿಷ್ಟ ವರ್ಗಗಳ ಕಲ್ಯಾಣ, ಸಂಸದೀಯ ವ್ಯವಹಾರ, ತೋಟಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (15 ಇಲಾಖೆ) ಪೂರ್ಣ ಮಾಹಿತಿ ನೀಡಿವೆ.
ಹಣಕಾಸು, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಣ್ಣ ನೀರಾವರಿ, ಕೃಷಿ, ಕಾರ್ಮಿಕ, ಭಾರಿ ನೀರಾವರಿ, ಕೌಶಲ್ಯ ಅಭಿವೃದ್ಧಿ, ಪ್ರವಾಸೋದ್ಯಮ, ಗೃಹ, ಒಳಾಡಳಿತ, ಮೂಲಸೌಲಭ್ಯ, ಕಾನೂನು ಇಲಾಖೆಗಳು (12 ಇಲಾಖೆ) ಇನ್ನೂ ಅರ್ಧಂಬರ್ಧ ಮಾಹಿತಿ ನೀಡಿವೆ ಅಥವಾ ಮಾಹಿತಿ ನೀಡುವ ಹಂತದಲ್ಲಿವೆ.
ಸಿಬ್ಬಂದಿ ಮತ್ತಿ ಆಡಳಿತ ಸುಧಾರಣೆ ಇಲಾಖೆ, ನಗರಾಭಿವೃದ್ಧಿ, ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಸತಿ, ಉನ್ನತ ಶಿಕ್ಷಣ, ಶಾಲಾ ಶಿಕ್ಷಣ, ಕಂದಾಯ, ಸಾಮಾಜಿಕ ಸುರಕ್ಷೆ, ರೇಷ್ಮೆ, ಮೀನುಗಾರಿಕೆ, ವಾಣಿಜ್ಯ ಮತ್ತು ಕೈಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ 13 ಇಲಾಖೆಗಳು ಮಾಹಿತಿ ಅಪ್‌ಲೋಡ್ ಮಾಡುವ ಕಾರ್ಯವನ್ನೇ ಪ್ರಾರಂಭಿಸಿಲ್ಲ.
ಮಾಹಿತಿ ಕೊಡದೆ ಇರುವ ಬಗ್ಗೆ ಉಲ್ಲೇಖ
ಅಪರ ಮುಖ್ಯಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದು ಮಾಹಿತಿ ಕೊಡದೆ ಇರುವ ಬಗ್ಗೆ ಉಲ್ಲೇಖಿಸಿದ್ದಾರೆ. ಜ್ಞಾನವುಳ್ಳ ನುರಿತ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಮಾಹಿತಿ ಅಪ್ಲೋಡ್ ಮಾಡುವಂತೆ ಆಯೋಗದಿಂದ ತರಬೇತಿ ನೀಡಿದರೂ ಸಹ ಮಾಹಿತಿ ಸಲ್ಲಿಸಿಲ್ಲ ಎಂದು ಅವರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಎಲ್ಲಾ ಇಲಾಖೆಗಳ ಅಪರ ಮುಖ್ಯಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ ತಮ್ಮ ವ್ಯಾಪ್ತಿಗೊಳಪಡುವ ಇಲಾಖೆ, ನಿಗಮ ಮಂಡಳಿ, ಸಂಸ್ಥೆ ವಿಶ್ವವಿದ್ಯಾಲಯಗಳ ಬೋಧಕ, ಬೋಧಕೇತರ ವಿವಿಧ ಪ್ರವರ್ಗಗಳಿಗೆ ಸೇರಿದ ಗ್ರೂಪ್ ಎ, ಗ್ರೂಪ್ ಬಿ, ಸಿ ಮತ್ತು ಡಿ ವೃಂದವಾರು ಮಾಹಿತಿಯನ್ನು ಮತ್ತು ವಿದ್ಯಾರ್ಥಿಗಳ ಮಾಹಿತಿಯನ್ನು ಆಯೋಗ ಅಭಿವೃದ್ಧಿಪಡಿಸಿರುವ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಲು ಕ್ರಮವಹಿಸುವಂತೆ ಉಮಾ ಮಹದೇವನ್ ತಾಕೀತು ಮಾಡಿದ್ದಾರೆ.
ಪ್ರಾಥಮಿಕ ಮಾಹಿತಿಯನ್ನು ಗಣತಿದಾರರು ಸಂಗ್ರಹಿಸಿದ್ದಾರೆ.
ಇಲಾಖೆಗಳಲ್ಲಿರುವ ಮಾಹಿತಿಯನ್ನು ಸೆಕೆಂಡರಿ ಡೇಟಾವಾಗಿ ಪರಿಗಣಿಸಲಾಗುತ್ತದೆ.
ಇಲಾಖೆಗಳ ಬಹಳ ಮಾಹಿತಿ ನಿಖರತೆಯಿಂದ ಕೂಡಿರುತ್ತದೆ.
ಯಾವ ವರ್ಗದವರು ಎಷ್ಟು ಮಂದಿ ಸರ್ಕಾರಿ ನೌಕರರಿದ್ದಾರೆಂಬುದು ಆಯೋಗಕ್ಕೆ ಅತ್ಯಗತ್ಯ
ಸಮುದಾಯಗಳ ಶೈಕ್ಷಣಿಕ ಮಟ್ಟ ಅರಿಯಲು ವಿದ್ಯಾರ್ಥಿಗಳ ಮಾಹಿತಿಕೂಡ ಅನಿವಾರ್ಯ
ಸಮುದಾಯಗಳ ಪ್ರಾತಿನಿಧ್ಯ ಅರಿಯುವುದಕ್ಕೂ ಸರ್ಕಾರದ ದತ್ತಾಂಶ ಬೇಕಾಗುತ್ತದೆ
"
ಮಾಹಿತಿ ಕೊಡುವಂತೆ ಇಲಾಖೆಗಳಿಗೆ ತಿಳಿಸಲಾಗಿದೆ. ತರಬೇತಿಯನ್ನೂ ಕೊಡಲಾಗಿದೆ. ಮಾಹಿತಿ ಶೀಘ್ರ ಕೊಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಯವರೂ ಸೂಚನೆ ನೀಡಿದ್ದಾರೆ. ಮಾಹಿತಿ ಕೊಡುವುದು ನೋಡಲ್ ಅಧಿಕಾರಿಗಳ ಕರ್ತವ್ಯವಾಗಿದೆ.