ಮಲೆನಾಡು, ಕರಾವಳಿಯಲ್ಲಿ ಉತ್ತಮ ಮಳೆ ನಿರೀಕ್ಷೆ: ಹವಾಮಾನ ಇಲಾಖೆ ಮಾಹಿತಿ-Good rain expected

ಕರಾವಳಿ,ಮಲೆನಾಡಿನ ವ್ಯಾಪ್ತಿಯ ಪ್ರದೇಶಗಳಲ್ಲಿ ವಾರಪೂರ್ತಿ ಉತ್ತಮ ವರ್ಷಧಾರೆ
ಕರಾವಳಿ,ಮಲೆನಾಡಿನ ವ್ಯಾಪ್ತಿಯ ಪ್ರದೇಶಗಳಲ್ಲಿ ವಾರಪೂರ್ತಿ ಉತ್ತಮ ವರ್ಷಧಾರೆ
Published on
ಬೆಂಗಳೂರು: ಮಳೆ ಕೊರತೆ ಅನುಭವಿಸುತ್ತಿರುವ ಕರಾವಳಿ,ಮಲೆನಾಡಿನ ವ್ಯಾಪ್ತಿಯ ಪ್ರದೇಶಗಳಲ್ಲಿ ವಾರಪೂರ್ತಿ ಉತ್ತಮ ವರ್ಷಧಾರೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ 29ರಿಂದ ಜು.5ವರೆಗೆ ಜೋರು ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಜು 1,2ರಂದು, ಬೆಳಗಾವಿ, ಬೀದರ್, ಧಾರವಾಡ, ಗದಗ, ರಾಯಚೂರು, ಹಾವೇರಿ, ಯಾದಗಿರಿಯಲ್ಲಿ ಜು.2ರಿಂದ ಮುಂದಿನ 2 ದಿನ ಹಾಗೂ ಕಲಬುರಗಿಯಲ್ಲಿ ಜು.3ರಂದು ಬಿರುಸಾಗಿ ಮಳೆಯಾಗುವ ಸಂಭವ ಇರುವುದರಿಂದ ಯೆಲ್ಲೋ ಅಲರ್ಟ್ ಎಚ್ಚರಿಕೆ ಕೊಡಲಾಗಿದೆ.
ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾತನಾಡಿ, ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಆದರೆ, ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಬೆಂ.ದಕ್ಷಿಣ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮತ್ತು ವಿಜಯನಗರದಲ್ಲಿ ಸಾಧಾರಣ ಮಳೆಯಾಗಲಿದೆ ಎಂದರು.
ಮುಂಗಾರು ಚುರುಕುಗೊಳ್ಳಲು ಅರಬ್ಬಿ ಸಮುದ್ರ,ಬಂಗಾಳಕೊಲ್ಲಿಯಲ್ಲಿ ಪೂರಕ ವಾತಾವರಣ ಇಲ್ಲ. ವಾಯುಭಾರ ಕುಸಿತ, ಮೇಲ್ಮೈಸುಳಿಗಾಳಿ ಮತ್ತು ತೇವಾಂಶ ಭರಿತ ಮೋಡಗಳು ಉಂಟಾಗುತ್ತಿಲ್ಲ. ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇದ್ದರೂ ಮಳೆಯಾಗುತ್ತಿಲ್ಲ. ನೈಋತ್ಯ ಮಾನ್ಸೂನ್ ಮೇಲೆ ಈಗಾಗಲೇ ‘ಎಲ್ ನಿನೋ’ ಪ್ರಭಾವ ಬೀರಿದೆ. ಪೆಸಿಫಿಕ್ ಸಾಗರದಲ್ಲಿ ಜುಲೈ ವೇಳೆಗೆ ‘ಎಲ್ ನಿನೋ’ ಶುರುವಾಗಲಿದೆ ಎಂದು ಪಾಟೀಲ್ ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net