ಬಿಜೆಪಿ ಸೇರಲು ಯತ್ನಾಳರಿಗೆ ಒಳ್ಳೆಯ ಚಾನ್ಸ್ ! ಉಪ ಚುನಾವಣೆ ಹಿನ್ನೆಲೆ ಟಾಸ್ಕ್ ಕೊಟ್ಟ ಸಚಿವ ಎಂ.ಬಿ. ಪಾಟೀಲ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಚಿವ ಎಂ.ಬಿ. ಪಾಟೀಲ
ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಚಿವ ಎಂ.ಬಿ. ಪಾಟೀಲ
Published on

ಪ್ರಮುಖ ಮುಖ್ಯಾಂಶಗಳು

  • ದಾವಣಗೆರೆ-ಬಾಗಲಕೋಟೆ ಉಪ ಚುನಾವಣೆ
  • ಶಾಸಕ ಯತ್ನಾಳಗೆ ಸಲಹೆ ನೀಡುವ ಮೂಲಕ ಟಾಂಗ್
  • ಸಚಿವ ಎಂ.ಬಿ. ಪಾಟೀಲರಿಂದ ಮಾರ್ಮಿಕ ನುಡಿ
  • ಯತ್ನಾಳರ ಪಾಲಿಗೆ ಸಂದಿಗ್ದ ಪರಿಸ್ಥಿತಿ ನಿರ್ಮಾಣ
ವಿಜಯಪುರ: ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಮರಳಿ ಬಿಜೆಪಿಗೆ ಸೇರ್ಪಡೆಯಾಗಲು ಉಪ ಚುನಾವಣೆ ಒಳ್ಳೆಯ ಅವಕಾಶ ಎಂದಿರುವ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಕರ್ಯ ಸಚಿವ ಎಂ.ಬಿ. ಪಾಟೀಲರು, ಬಿಜೆಪಿಯನ್ನು ಸೋಲಿಸುವ ಮೂಲಕ ರಾಜ್ಯಾಧ್ಯಕ್ಷ ವಿಜಯೇಂದ್ರನನ್ನು ಕೆಳಗಿಳಿಸುವ ಟಾಸ್ಕ್ ಕೊಟ್ಟಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಎರಡು ಕ್ಷೇತ್ರಗಳ ಉಪ ಚುನಾವಣೆ ವಿಜಯೇಂದ್ರ ಪಾಲಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಸದ್ಯ ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಉಪ ಚುನಾವಣೆ ಎದುರಿಸುತ್ತಿದೆ. ಈ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಸೋತರೆ ವಿಜಯೇಂದ್ರ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಅಪ್ಪ-ಮಕ್ಕಳ ವಿರುದ್ಧ ಸದಾ ಕಿಡಿ ಕಾರುವ ಯತ್ನಾಳರಿಗೆ ಇದೊಂದು ಒಳ್ಳೆಯ ಅವಕಾಶ. ಬಿಜೆಪಿಯನ್ನು ಸೋಲಿಸಿ ವಿಜಯೇಂದ್ರ ಅವರನ್ನು ಕೆಳಗಿಳಿಸುವ ತಮ್ಮ ಕನಸು ನನಸು ಮಾಡಿಕೊಳ್ಳಬೇಕೆಂದು ಸೋಮವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
ಒಂದು ವೇಳೆ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ವಿಜಯೇಂದ್ರ ಅವರ ಬಲ ಹೆಚ್ಚಲಿದೆ. ಬಿಜೆಪಿ ಸೋತರೆ ವಿಜಯೇಂದ್ರ ಬಲ ಕುಸಿಯಲಿದೆ. ಹೀಗಾಗಿ ವಿಜಯೇಂದ್ರ ತೆಗೆಯಲು ಯತ್ನಾಳಗೆ ಒಳ್ಳೆಯ ಅವಕಾಶ. ವಿಜಯೇಂದ್ರ ಉಳಿಯಬೇಕಿದ್ದರೆ ಯತ್ನಾಳ ಕಾಂಗ್ರೆಸ್ ಗೆಲ್ಲಿಸಲಿ ಎಂದ ಸಚಿವ ಎಂ.ಬಿ.ಪಾಟೀಲರು, ಯತ್ನಾಳರು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳಲಿ ಎಂದು ಕೈಯೊಡ್ಡುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಅವರಿಗೆ ಸ್ವಾಭಿಮಾನ, ಮಾನ-ಮರ್ಯಾದೆ ಇದ್ದರೆ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ತೋರಿಸಲಿ. ವಿಜಯೇಂದ್ರ ಅವರನ್ನು ಉಳಿಸುವ ಕೆಲಸ ಮಾಡುತ್ತಿದ್ದರೆ ಮಾಡಲಿ. ನಾವಂತೂ ಎರಡೂ ಕ್ಷೇತ್ರದಲ್ಲಿ ಗೆಲ್ಲುವುದು ನಿಶ್ಚಿತ ಎಂದರು.
ಉಮೇಶ ಮೇಟಿ ಅವರಿಗೆ ಬೇರೆ ಬೇರೆ ಸಮುದಾಯಗಳ ಬೆಂಬಲ ಸಿಕ್ಕಿದೆ. ನಿಶ್ಚಿತವಾಗಿ ಗೆಲುವು ಸಾಧಿಸುತ್ತಾರೆಂದು ಎಂ.ಬಿ. ಪಾಟೀಲ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net