ಲಕ್ಕುಂಡಿಯಲ್ಲಿ ಮುತ್ತು, ಹವಳ ಪತ್ತೆ! ನಿಧಿಯ 5ನೇ ಒಂದು ಭಾಗದ ಮೊತ್ತ ಕುಟುಂಬಕ್ಕೆ? ಅಧಿಕಾರಿಗಳಿಂದ ಸ್ಪಷ್ಟನೆ

ಗದಗ ಲಕ್ಕುಂಡಿಯಲ್ಲಿ ಪುರಾತನ ಕಾಲದ ಚಿನ್ನಾಭರಣಗಳು ಪತ್ತೆ
ಗದಗ ಲಕ್ಕುಂಡಿಯಲ್ಲಿ ಪುರಾತನ ಕಾಲದ ಚಿನ್ನಾಭರಣಗಳು ಪತ್ತೆ
Published on

ಪ್ರಮುಖ ಮುಖ್ಯಾಂಶಗಳು

  • ಗದಗ ಲಕ್ಕುಂಡಿಯಲ್ಲಿ ಪುರಾತನ ಕಾಲದ ಚಿನ್ನಾಭರಣಗಳು ಪತ್ತೆ
  • ಮನೆ ಕಟ್ಟಿಸಲು ಅಡಿಪಾಯ ತೋಡುವಾಗ ತಂಬಿಗೆ ಪ್ರತ್ಯಕ್ಷ
  • ಪುರಾತತ್ವ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ
  • ನಿಧಿಯ 5ನೇ ಒಂದು ಭಾಗದ ಮೊತ್ತ ಕುಟುಂಬಕ್ಕೆ ಸಲ್ಲುತ್ತದೆ: ಪುರಾತತ್ವ ಅಧಿಕಾರಿಗಳು ಸ್ಪಷ್ಟನೆ
ಗದಗ: ಶನಿವಾರ (ಜ.10) ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ನಿರ್ಮಾಣಕ್ಕೆಂದು ಅಡಿಪಾಯ ತೋಡುವಾಗ ತಂಬಿಗೆಯೊಂದು ಪತ್ತೆಯಾಗಿದ್ದು, ಅದರಲ್ಲಿ ಮುತ್ತು, ಹವಳ, ಚಿನ್ನಾಭರಣ, ಖಡ್ಗ, ನೀಲಮಣಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳು ಸಿಕ್ಕಿವೆ. ನಿಧಿ ಸಿಕ್ಕ ಸ್ಥಳವನ್ನು ಜಿಲ್ಲಾಡಳಿತಕ್ಕೆ ಕುಟುಂಬ ತೋರಿಸಿದ್ದೇ ತಡ, ಆ ಜಾಗದಲ್ಲೀಗ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಇದರೊಟ್ಟಿಗೆ ಜಾಗವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿರುವುದು ಸದ್ಯ ಮನೆಯಲ್ಲಿ ವಾಸವಿದ್ದ ತಾಯಿ ಮತ್ತು ಮಗನಿಗೆ ತೊಂದರೆಯಾಗಿ ಕಾಡಲಾರಂಭಿಸಿದೆ.
ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ‌ ನಿಧಿ ಪತ್ತೆ ಹಿನ್ನೆಲೆ ಸೋಮವಾರ (ಜ12) ಲಕ್ಕುಂಡಿ ಗ್ರಾಮಕ್ಕೆ ಹಂಪಿ ಪುರಾತತ್ವ ಇಲಾಖೆ ಅಧಿಕಾರಿಗಳು ಸೇರಿ ಶಾಸಕ ಸಿ.ಸಿ‌ ಪಾಟೀಲ, ಎಸ್.ವಿ. ಸಂಕನೂರು ಮತ್ತು ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿತು. ನಿಧಿ ಪತ್ತೆ ಪ್ರಕರಣ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದ್ದು, ಗೊಂದಲಕ್ಕೂ ಎಡೆಮಾಡಿಕೊಟ್ಟಿದೆ. ಹೀಗಾಗಿ ರಾಜ್ಯಾದ್ಯಂತ ನಿಧಿ ಪತ್ತೆ ಪ್ರಕರಣ ದೊಡ್ಡ ತಿರುವು ಪಡೆದುಕೊಳ್ಳುತ್ತಿದೆ.

ಅಧಿಕಾರಿಗಳ ಭೇಟಿಯಲ್ಲಿ ಏನೆಲ್ಲ ಆಯಿತು?

ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು. ಹಂಪಿ ವಿಭಾಗದ ನಿರ್ದೇಶಕ ಸೈಜೇಶ್ವರ ಸ್ಥಳ ಪರಿವೀಕ್ಷಣೆ ವೇಳೆ ಮಾತನಾಡಿ, 1962 ನಿಯಮ ಪ್ರಕಾರ 10 ರೂ. ಮೌಲ್ಯಕ್ಕಿಂತ ಹೆಚ್ಚಿನ ಮೊತ್ತದ ವಸ್ತು ಸಿಕ್ಕರೆ ಅದು ಸರ್ಕಾರಕ್ಕೆ ಸಲ್ಲುತ್ತದೆ. ಇದು ನಿಧಿಯಾಗಿದೆ. ಭೂಮಿಯ ಒಂದು ಅಡಿ ಆಳದಲ್ಲಿ ಏನೆ ಸಿಕ್ಕರೂ ಅದು ಸರ್ಕಾರದ ಸ್ವತ್ತು ಆಗಲಿದೆ. ಇನ್ನೂ ಯಾವ ಕಾಲಕ್ಕೆ ಸೇರಿದ್ದು, ಯಾರ ಆಳ್ವಿಕೆಯ ಎಂಬುದು ಬಗ್ಗೆ ಪರಿಶೀಲನೆ ನಡೆಯಬೇಕಿದೆ. ವಶಕ್ಕೆ ಪಡೆದ ಆಭರಣಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡುತ್ತೇವೆ. ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ವರದಿ ನೀಡುತ್ತೇವೆ. ಸಿಕ್ಕ ನಿಧಿಯಲ್ಲಿ 5ನೇ ಒಂದು ಭಾಗ ಕುಟುಂಬಕ್ಕೆ ಸಲ್ಲುತ್ತದೆ ಎಂದು ಅಧಿಕಾರಿ ತಿಳಿಸಿದರು.

ಪತ್ತೆ ಆಗಿದ್ಹೇಗೆ?

ಗ್ರಾಮದ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬ ಮಹಿಳೆ ಮನೆ ಕಟ್ಟಿಸುವ ಆಸೆಯನ್ನು ಹೊತ್ತಿದ್ದರು. ಈ ಹಿನ್ನೆಲೆ ತಮ್ಮ ಜಾಗದಲ್ಲಿ ಶನಿವಾರ ಅಡಿಪಾಯಕ್ಕೆ ಗುಂಡಿ ಅಗೆಯುವ ಕೆಲಸಕ್ಕೆ ಮುಂದಾದರು. ಈ ವೇಳೆ, ಅವರ ಪುಟ್ಟ ಮಗನಿಗೆ ತಾಮ್ರದ ತಂಬಿಗೆಯಲ್ಲಿ ಪುರಾತನದ ವಸ್ತುಗಳು ಎಂದು ಸೂಚಿಸುವ ಚಿನ್ನಾಭರಣಗಳು ಸಿಕ್ಕಿತು. ಅಲ್ಲಿಂದ ಶುರುವಾದ ಪುರಾತತ್ವ ಇಲಾಖೆಯ ಕೆಲಸ, ಇದು ಯಾವ ಶತಮಾನದ್ದು ಎಂದು ಕಂಡುಹಿಡಿಯುವ ಸವಾಲಿಗೆ ದೂಡಿದೆ.

ಏನೆಲ್ಲ ಸಿಕ್ಕಿವೆ?

ತಂಬಿಗೆಯಲ್ಲಿ ಚಿನ್ನಾಭರಣ, ಹವಳ ಸೇರಿ ಹಲವು ಬೆಲೆ ಬಾಳುವ ವಸ್ತುಗಳು ಪತ್ತೆಯಾದ ಬೆನ್ನಲ್ಲೇ ಲಕ್ಕುಂಡಿ ಗ್ರಾಮದ ಶ್ರೀಮಂತಿಕೆ ಮತ್ತೊಮ್ಮೆ ಪುನರುಚ್ಚರಿಸಿದೆ. ಶನಿವಾರ ಸಿಕ್ಕ ಚಿನ್ನಾಭರಣದಲ್ಲಿ ಎರಡು ನೀಲಮಣಿ, ಎರಡು ಮಾಣಿಕ್ಯ ಮತ್ತು ಒಂದು ಹವಳ ಜತೆ ಒಂದು ಮುತ್ತು ದೊರೆತಿದ್ದು, ಚಿನ್ನಾಭರಣದ ಮೌಲ್ಯದಷ್ಟೇ ನೀಲಮಣಿ ಮುತ್ತು-ಹವಳ ಮಾಣಿಕ್ಯದ ಮೌಲ್ಯವು ಇನ್ನೂ ಅಧಿಕವಾಗಲಿದೆ ಎಂದು ತಿಳಿದುಬಂದಿದೆ. ಇದು ಪ್ರಾಚೀನ ಕಾಲದ್ದು ಎಂಬುದು ಬಹುತೇಕ ಖಚಿತವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net