ಹನೂರು ತಾಲೂಕಿನಲ್ಲಿ ಬಂಗಾರದ ನಿಕ್ಷೇಪ? ಚಾಮರಾಜನಗರ ಭಾಗದಲ್ಲಿ ಸಂಚಲನ

ಥೋರಿಯಂ ಕನಿಜದ ಮಾದರಿ
ಥೋರಿಯಂ ಕನಿಜದ ಮಾದರಿ
Published on

ಪ್ರಮುಖ ಮುಖ್ಯಾಂಶಗಳು

  • ಹನೂರು ತಾಲೂಕಿನಲ್ಲಿ ಬಂಗಾರದ ನಿಕ್ಷೇಪ?
  • ಭೂವೈಜ್ಞಾನಿಕ ಸಮೀಕ್ಷೆ ಸಕಾರಾತ್ಮಕ ವರದಿ

ಚಾಮರಾಜನಗರ: ಕರಿಕಲ್ಲು ಗಣಿಗಾರಿಕೆ ಉದ್ಯಮಕ್ಕೆ ಪ್ರಸಿದ್ಧಿ ಪಡೆದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪದ ಸುಳಿವು ಭೂವೈಜ್ಞಾನಿಕ ಸಮೀಕ್ಷೆಯಲ್ಲಿ ಕಂಡುಬಂದಿರುವುದು ಸಂಚಲನ ಮೂಡಿಸಿದೆ. 

ಹನೂರು ತಾಲೂಕಿನ ರಾಮಾಪುರ, ಮಾರ್ಟಳ್ಳಿ, ಅಜ್ಜೀಪುರ ಭಾಗಗಳಲ್ಲಿ ಪ್ರಾಥಮಿಕ ಹಂತದ ಸರ್ವೆಯಲ್ಲಿ ಬಂಗಾರದ ನಿಕ್ಷೇಪದ ಸಕಾರಾತ್ಮಕ ಅಂಶಗಳು ಕಂಡುಬಂದಿದ್ದು, ಶೀಘ್ರ 2ನೇ ಹಂತದ ಸಮೀಕ್ಷೆ ಶುರುವಾಗಲಿದೆ. ಜಿ-4 ಸರ್ವೆಯಲ್ಲಿ ಅವಲೋಕನ ಮಾಡಿದ ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ ಎಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಿಳಿಸಿದೆ.

ಖನಿಜ ನಿಕ್ಷೇಪ ಪತ್ತೆ: ಇನ್ನು ಜಿಲ್ಲೆಯಲ್ಲಿ ಅಪರೂಪದ ನಿಕ್ಷೇಪ ಪತ್ತೆಯಾಗಿರುವುದು ದೃಢಪಟ್ಟಿದೆ. ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾಹಿತಿ ಪ್ರಕಾರ, ಕಳೆದ ವರ್ಷ ಕೇಂದ್ರ ಸರ್ಕಾರ ನಡೆಸಿದ್ದ ಭೂವೈಜ್ಞಾನಿಕ ಸಮೀಕ್ಷೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಕೂತನೂರು, ಮಣಗನಹಳ್ಳಿ, ವಿಜಯಪುರ (ಗುಂಡ್ಲುಪೇಟೆ ಪಟ್ಟಣದ ಪ್ರದೇಶ) ಗ್ರಾಮಗಳಲ್ಲಿ ಮೊನಾಜೈಟ್, ಥೋರಿಯಂನಂತಹ ಅಪರೂಪದ ಅಂಶಗಳು ಪತ್ತೆಯಾಗಿದ್ದವು.

ಯಾವುದಕ್ಕೆ ಬಳಕೆ?

ಮೊನಾಜೈಟ್ ಎಂಬುದು ಪ್ರಮುಖ ಖನಿಜ ಸಂಪನ್ಮೂಲವಾಗಿದೆ. ಆಧುನಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ನವೀಕರಿಸಬಹುದಾದ ಇಂಧನಗಳಲ್ಲಿ ಬಳಸಬಹುದಾಗಿದೆ. ಥೋರಿಯಂ ವಿಕಿರಣಶೀಲ ಲೋಹವಾಗಿದ್ದು, ಅತ್ಯಾಧುನಿಕ ಪರಮಾಣು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತದೆ. ಏರೋಸ್ಪೇಸ್ ಮಿಶ್ರಲೋಹಗಳು ಮತ್ತು ಜೆಟ್ ಇಂಜಿನ್ಗಳಲ್ಲೂ ಥೋರಿಯಂ ಉಪಯೋಗವಾಗುತ್ತಿದೆ.

ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಒಟ್ಟು 2.85 ಚದರ ಕಿ.ಮೀ. ಅಂದರೆ 750 ಎಕರೆ ಪ್ರದೇಶವನ್ನು ಗುರುತಿಸಿದೆ. ಇದರಲ್ಲಿ ಅಪರೂಪದ ಭೂಮಿಯ ಅಂಶಗಳು ಸಿಕ್ಕಿರುವ ಅಂದಾಜು 20 ಎಕರೆ ಪ್ರದೇಶವನ್ನು ಕೋರ್ ಝೋನ್ ಎಂದು ಗುರುತಿಸಲಾಗಿದೆ. ಕೇಂದ್ರ ಸರ್ಕಾರದಿಂದ ಗಣಿಗಾರಿಕೆಗೆ ತಯಾರಿ ನಡೆದಿದ್ದು, ಕೆಲವೇ ತಿಂಗಳಲ್ಲಿ ಆರಂಭವಾಗಲಿದೆ.

"

ಕೂತನೂರು, ಮಣಗನಹಳ್ಳಿ, ವಿಜಯಪುರ ದಲ್ಲಿ ಅಪರೂಪದ ಖನಿಜಗಳು ಪತ್ತೆಯಾಗಿವೆ. ಕೇಂದ್ರ ಸರ್ಕಾರದಿಂದ ಗಣಿಗಾರಿಕೆ ಪ್ರಕ್ರಿಯೆ ನಡೆಯುತ್ತಿದೆ. ಹನೂರಿನ ಕೆಲವು ಹಳ್ಳಿಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆ ಸರ್ವೆಯಲ್ಲಿ ಸಕಾರಾತ್ಮಕ ಅಂಶಗಳು ದೊರೆತಿವೆ.

— | ರಾಜೇಶ್ ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಚಾಮರಾಜನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net