ಪ್ರೇಯಸಿಗೆ 56 ಲಕ್ಷ ರೂ ಚಿನ್ನಾಭರಣ ನೀಡಿದ್ದ ಜ್ಞಾನೇಂದ್ರ: ಅಕ್ರಮ ಮತ್ತಷ್ಟು ಬಯಲು

ಪ್ರೇಯಸಿಗೆ 56 ಲಕ್ಷ ರೂ ಚಿನ್ನಾಭರಣ ನೀಡಿದ್ದ ಜ್ಞಾನೇಂದ್ರ: ಅಕ್ರಮ ಮತ್ತಷ್ಟು ಬಯಲು
ಪ್ರೇಯಸಿಗೆ 56 ಲಕ್ಷ ರೂ ಚಿನ್ನಾಭರಣ ನೀಡಿದ್ದ ಜ್ಞಾನೇಂದ್ರ: ಅಕ್ರಮ ಮತ್ತಷ್ಟು ಬಯಲು
Published on
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿ ಬಂಧಿತನಾಗಿರುವ ಐಎಎಸ್​ ಅಧಿಕಾರಿ ಜ್ಞಾನೇಂದ್ರ ಕುಮಾರ್​ ಗಂಗ್ವಾರ್​ ವಿರುದ್ಧ ಬಗೆದಷ್ಟೂ ಭ್ರಷ್ಟಾಚಾರ ಬಯಲಾಗುತ್ತಿದೆ. ಪ್ರೇಯಸಿಗಾಗಿ ಅರ್ಧ ಕೋಟಿ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿ ಉಡುಗೊರೆಯಾಗಿ ನೀಡಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬೀದರ್​ ಜಿಲ್ಲೆ ಭಾಲ್ಕಿಯಲ್ಲಿನ ಸಹಕಾರ ಬ್ಯಾಂಕ್​ನಿಂದ ಬೆಂಗಳೂರಿನ ಚಿನ್ನದ ಅಂಗಡಿಗೆ 26 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ಚಿನ್ನಾಭರಣ ಖರೀದಿಸಿದ್ದ ಜ್ಞಾನೇಂದ್ರ, ಮತ್ತೆ 30 ಲಕ್ಷ ರೂ. ಮೌಲ್ಯದ ಚಿನ್ನ ಖರೀದಿ ಮಾಡಿರುವುದು ಪತ್ತೆಯಾಗಿದೆ. ಬೆಂಗಳೂರಿನ ವಿವಿಧ ಕಡೆ ಆಸ್ತಿ, ದೇವನಹಳ್ಳಿ ಏರ್​ಪೋರ್ಟ್​ ಬಳಿ ಸಹೋದರನ ಹೆಸರಲ್ಲಿ ವಿಲ್ಲಾ ಸೇರಿ ಪ್ರೇಯಸಿಗಾಗಿಯೇ 56 ಲಕ್ಷ ರೂ. ಮೌಲ್ಯದ ಆಭರಣ ಖರೀದಿಸಿರುವುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ಬಸವರಾಜ್​ ಕನ್ನಾಳೆ ಮೂಲಕ ಬರುತ್ತಿದ್ದ ಲಂಚದ ಹಣವನ್ನು ಜ್ಞಾನೇಂದ್ರ, ನೇರವಾಗಿ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳದೆ ಚಿನ್ನಾಭರಣ, ಸಂಬಂಧಿಕರ ಹೆಸರಿನಲ್ಲಿ ಆಸ್ತಿ ಖರೀದಿಸಲು ಹಾಗೂ ಮೋಜು & ಮಸ್ತಿಗೆ ಖರ್ಚು ಮಾಡುತ್ತಿದ್ದ. ಅಲ್ಲದೆ, ಹೊರ ರಾಜ್ಯದಲ್ಲಿ ಸಂಬಂಧಿಕರ ಹೆಸರಿನಲ್ಲಿ ಆಸ್ತಿ, ಕೃಷಿ ಜಮೀನು ಖರೀದಿಸಿರುವ ಬಗ್ಗೆ ಸಿಐಡಿ ತನಿಖೆ ಕೈಗೊಂಡಿದೆ.
ನಾಲ್ಕು ವರ್ಷದಿಂದ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದ ಜ್ಞಾನೇಂದ್ರ, ವಿವಿಧ ಇಲಾಖೆಗಳ ನೇಮಕಾತಿ ಅಧಿಸೂಚನೆಗೂ ಮೊದಲೇ ಇಂತಿಷ್ಟು ಹುದ್ದೆಗಳ ನೇಮಕಾತಿ ನಡೆಯಲಿದೆ ಎಂದು ಕನ್ನಾಳೆಗೆ ಮಾಹಿತಿ ನೀಡುತ್ತಿದ್ದ. ಆತ ತನಗೆ ಬೇಕಾದವರು ಹಾಗೂ ಮಧ್ಯವರ್ತಿಗಳಿಗೆ ಕಮಿಷನ್​ ಆಸೆ ತೋರಿಸಿ, ಅಭ್ಯರ್ಥಿಗಳನ್ನು ಹುಡುಕುತ್ತಿದ್ದ. ಕೆಪಿಎಸ್​ಸಿಯಿಂದ ಅಧಿಸೂಚನೆಗೊಂಡ ಬಳಿಕ ಅಭ್ಯರ್ಥಿಗಳಿಂದ ಅರ್ಜಿ ಹಾಕಿಸಿ ಹುದ್ದೆಗೆ 70 & 80 ಲಕ್ಷ ರೂ. ಡೀಲ್​ ಮುಗಿಸುತ್ತಿದ್ದ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಜ್ಞಾನೇಂದ್ರ ಕುಮಾರ್​ ಹಾಗೂ ಸಂಬಂಧಿಕರು ವಿದೇಶಿ ಪ್ರವಾಸಕ್ಕೆ ಹೋಗುತ್ತೇವೆಂದು ತಿಳಿಸಿದರೆ ಬಸವರಾಜ್​ ಕನ್ನಾಳೆ ದುಬಾರಿ ಬೆಲೆಯ ವಿಮಾನ ಟಿಕೆಟ್​, ಐಷಾರಾಮಿ ಹೋಟೆಲ್​ಗಳನ್ನು ಕಾಯ್ದಿರಿಸುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net