ಪ್ರೇಯಿಸಿಗೆ ಜ್ಞಾನೇಂದ್ರ ಚಿನ್ನದ ಉಡುಗೊರೆ

gnanendra gifts
gnanendra gifts
Published on

ಪ್ರಮುಖ ಮುಖ್ಯಾಂಶಗಳು

  • ಅಕ್ರಮ ಹಣದಿಂದ 26 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಖರೀದಿ
  • ಜುವೆಲ್ಲರಿ ಅಂಗಡಿಯಲ್ಲಿ ಸಿಸಿ ಕ್ಯಾಮರಾ ದೃಶ್ಯ ಪತ್ತೆ
  • ಮಧ್ಯಪ್ರದೇಶದಲ್ಲಿ ಬೇನಾಮಿ ಆಸ್ತಿ ಖರೀದಿಸಿರುವ ಗಂಗ್ವಾರ
  • ನಾಲ್ಕು ದಿನದಿಂದ ಸಾಹುಕಾರ್ ನಾಪತ್ತೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ಪಶುವೈದ್ಯಾಧಿಕಾರಿ ಹಗರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆಯನ್ನು ಇ.ಡಿ ವಿಚಾರಣೆ ನಡೆಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ನೀಡಿದೆ.
ಕಳೆದ ಹತ್ತು ದಿನಗಳಿಂದ ಸಿಐಡಿ ಕಸ್ಟಡಿಯಲ್ಲಿದ್ದ ಆರೋಪಿ ಜ್ಞಾನೇಂದ್ರ ಕುಮಾರ್ ತನ್ನ ಪ್ರೇಯಸಿಗಾಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಉಡುಗೊರೆಯಾಗಿ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
400 ಪಶುವೈದ್ಯಾಧಿಕಾರಿಗಳ ಹುದ್ದೆ ಸೇರಿ ಹಲವು ನೇಮಕಾತಿಗಳಲ್ಲಿ ಇಬ್ಬರು ಆರೋಪಿಗಳು ಪ್ರಮುಖ ಪಾತ್ರವಹಿಸಿದ್ದು, ಅವರ ವಿಚಾರಣೆ ಅಥವಾ ಹೇಳಿಕೆ ಪ್ರಮುಖವಾಗಿದೆ. ಹೀಗಾಗಿ ಅನುಮತಿ ನೀಡುವಂತೆ ಕೋರ್ಟ್‌ಗೆ ಇ.ಡಿ ಅಧಿಕಾರಿಗಳು ಮನವಿ ಸಲ್ಲಿಸಿದರು. ಅದನ್ನು ಮಾನ್ಯ ಮಾಡಿರುವ ಕೋರ್ಟ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಆರೋಪಿಗಳನ್ನು ವಶಕ್ಕೆ ಪಡೆದು ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿ ನೀಡಿದೆ. ಆದ್ದರಿಂದ ಶುಕ್ರವಾರ ಅಥವಾ ಶನಿವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜೈಲಿಗೆ ತೆರಳಿ ಇಬ್ಬರು ಆರೋಪಿಗಳಿಂದ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
26 ಲಕ್ಷ ರೂ. ಚಿನ್ನ ಉಡುಗೊರೆ:
ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ವೇಳೆ ಜ್ಞಾನೇಂದ್ರ ಕುಮಾರ್, ಬಸವರಾಜು ಕನ್ನಾಳೆ ಜತೆ ಸೇರಿ ದೊಡ್ಡ ಮಟ್ಟದ ಭ್ರಷ್ಟಚಾರ ನಡೆಸಿದ್ದಾರೆ. ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ನೇಮಕಾತಿಯ ಪ್ರತಿ ಪರೀಕ್ಷೆಯಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಲಕ್ಷಾಂತರ ರೂ. ಪಡೆದುಕೊಂಡಿದ್ದಾರೆ.
ಅಕ್ರಮದಿಂದ ಬಂದ ಹಣವನ್ನು ಜ್ಞಾನೇಂದ್ರ ಮಧ್ಯಪ್ರದೇಶದ ಬರೇಲಿ ಜಿಲ್ಲೆಯಲ್ಲಿರುವ ತಮ್ಮ ಊರಿನಲ್ಲಿ ಕೋಟ್ಯಂತರ ರೂ.ಮೌಲ್ಯದ ಆಸ್ತಿ ಖರೀದಿಸಿದ್ದಾರೆ. ಜತೆಗೆ ದೆಹಲಿಯಲ್ಲಿ ಖಾಸಗಿ ಸುದ್ದಿವಾಹಿನಿಯಲ್ಲಿರುವ ತನ್ನ ಪ್ರೇಯಸಿಗೆ ಬರೋಬರಿ 26 ಲಕ್ಷ ರೂ. ಮೌಲ್ಯದ ಚಿನ್ನಾಭರಣದ ಉಡುಗೊರೆಯಾಗಿ ನೀಡಿದ್ದಾನೆ. ಈ ಅಂಶಗಳು ಸಿಐಡಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಕೆಪಿಎಸ್‌ಸಿಯಿಂದ ಎಂಎಸ್‌ಎಂಇಗೆ ವರ್ಗಾವಣೆ ಆಗುವ ಮೊದಲು ಆಯೋಗದ ಅಕ್ರಮದಲ್ಲಿ ಬಂದ ಹಣವನ್ನು ಬೆನ್ನಾಮಿ ಖಾತೆಯೊಂದಕ್ಕೆ ಅಂದಾಜು 38 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾನೆ. ಆ ಖಾತೆಯಿಂದಲೇ ಬೆಂಗಳೂರು ಮತ್ತು ದೆಹಲಿಯ ಜುವ್ಯಲ್ಲರಿ ಶಾಪ್‌ವೊಂದರಲ್ಲಿ ಹಂತ-ಹಂತವಾಗಿ 26 ಲಕ್ಷ ರೂ. ಮೌಲ್ಯದ ಚಿನ್ನ ಖರೀದಿಸಿದ್ದ. ಅದನ್ನು ತನ್ನ ಪ್ರೇಯಸಿಯ ಜನ್ಮದಿನಕ್ಕೆ ಉಡುಗೊರೆಯಾಗಿ ನೀಡಿದ್ದಾನೆ. ಈ ಕುರಿತು ಪ್ರಶ್ನಿಸಿದಾಗ ಆರೋಪಿ ನಿರಾಕರಿಸಿದ್ದ. ನಾನು ಯಾವುದೇ ಚಿನ್ನಾಭರಣ ಖರೀದಿಸಿಲ್ಲ ಎಂದು ವಾದಿಸಿದ್ದ. ಆದರೆ, ಸಿಐಡಿ ಅಧಿಕಾರಿಗಳು ಜುವೆಲ್ಲರಿ ಶಾಪ್‌ಗಳಲ್ಲಿ ಚಿನ್ನಾಭರಣ ಖರೀದಿಸಿದ ಬಗ್ಗೆ ರಸೀದಿ ಹಾಗೂ ಒಂದು ಚಿನ್ನಾಭರಣ ಮಳಿಗೆಯ ಸಿಸಿ ಕ್ಯಾಮೆರಾ ದೃಶ್ಯಾವಳಿನ್ನು ತೋರಿಸಿ ಪ್ರಶ್ನಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಸಾಹುಕಾರ್‌ಗಾಗಿ ಮುಂದುವರೆದ ಹುಡುಕಾಟ
ಸಿಐಡಿ ವಿಚಾರಣೆಗೆ ಹಾಜರಾಗದೆ ಶಿವಶಂಕರಪ್ಪ ಸಾಹುಕಾರ್ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರ ಹುಡುಕಾಟ ಮುಂದುವರೆಸಿರುವ ಸಿಐಡಿ ಅಧಿಕಾರಿಗಳು ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆರೋಪಿ ಸಾಹುಕಾರ್ ರಾಜ್ಯದಿಂದ ತಮಿಳುನಾಡು ಅಥವಾ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿರಬಹುದು ಎಂಬ ಶಂಕೆ ಆಧಾರದ ಮೇಲೆ ಸಿಐಡಿ ವಿಶೇಷ ತಂಡಗಳು ಹೊರ ರಾಜ್ಯಗಳಲ್ಲಿ ಹುಡುಕಾಟ ನಡೆಸಿವೆ. ಮೊಬೈಲ್ ಲೋಕೆಷನ್ ಹಾಗೂ ತಾಂತ್ರಿಕ ಆಧಾರದ ಮೇಲೆ ಸಾಹುಕಾರ್ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net