ಲೀಟರ್​ ಹಾಲಿಗೆ 45 ರೂ. ನೀಡಿ / NELAMANGAL

ರೈತರಿಂದ ಖರೀದಿಸುವ ಹಾಲಿನ ದರ ಹಾಗೂ ಸರ್ಕಾರದ ಪ್ರೋತ್ಸಾಹ ಧನ ಹೆಚ್ಚಳ ಮಾಡುವಂತೆ ಆಗ್ರಹಿಸಿ ನೆಲಮಂಗಲ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಹಾಗೂ ರೈತರು ಬೃಹತ್​ ಪ್ರತಿಭಟನೆ ನಡೆಸಿದರು.
ರೈತರಿಂದ ಖರೀದಿಸುವ ಹಾಲಿನ ದರ ಹಾಗೂ ಸರ್ಕಾರದ ಪ್ರೋತ್ಸಾಹ ಧನ ಹೆಚ್ಚಳ ಮಾಡುವಂತೆ ಆಗ್ರಹಿಸಿ ನೆಲಮಂಗಲ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಹಾಗೂ ರೈತರು ಬೃಹತ್​ ಪ್ರತಿಭಟನೆ ನಡೆಸಿದರು.
Published on
ನೆಲಮಂಗಲ : ರೈತರಿಂದ ಖರೀದಿಸುವ ಹಾಲಿನ ದರ ಹಾಗೂ ಸರ್ಕಾರದ ಪ್ರೋತ್ಸಾಹ ಧನವನ್ನು ಲೀಟರ್​ಗೆ 10 ರೂ. ಹೆಚ್ಚಿಸಬೇಕು ಎಂದು ಆಗ್ರಹಿಸಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಹಾಗೂ ರೈತರು ಬೃಹತ್​ ಪ್ರತಿಭಟನೆ ನಡೆಸಿದರು.
ಬಮುಲ್​ ನಿರ್ದೇಶಕ ಭವಾನಿ ಶಂಕರ್​ಬೈರೇಗೌಡ ನೇತೃತ್ವದಲ್ಲಿ ಸೋಮವಾರ ನಗರಸಭೆ ವ್ಯಾಪ್ತಿಯ ರಾ.ಹೆದ್ದಾರಿ ಬಳಿಯ ಬಮುಲ್​ ಶಿಬಿರ ಕಚೇರಿ ಬಳಿ ಸಮಾವೇಶಗೊಂಡ ಸಾವಿರಾರು ಹಾಲು ಉತ್ಪಾದಕರು ಹಾಗೂ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬಮುಲ್​ ನಿರ್ದೇಶಕ ಭವಾನಿಶಂಕರ್​ ಬೈರೇಗೌಡ ಮಾತನಾಡಿ, ಬೆಂಗಳೂರು ಹಾಲು ಒಕ್ಕೂಟ ಆರಂಭದಲ್ಲಿ 10 ಕೋಟಿ ರೂ.ಗೂ ಹೆಚ್ಚು ನಷ್ಟ ಅನುಭವಿಸುತ್ತಿತ್ತು. ಡಿ.ಕೆ.ಸುರೇಶ್​ ಅಧಿಕಾರ ವಹಿಸಿಕೊಂಡ ಬಳಿಕ ಸುಮಾರು 74 ಕೋಟಿ ರೂ.ಕ್ಕಿಂತ ಹೆಚ್ಚು ಲಾಭಾಂಶ ಗಳಿಸಿದೆ. ತೈಲ, ಮದ್ಯ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಸರ್ಕಾರ ಏರಿಸುತ್ತಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನದರ ಹಾಗೂ ಪ್ರೋತ್ಸಾಹ ಧನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್​ಚೌಧರಿ ಮಾತನಾಡಿ, ಹೈನುಗಾರಿಕೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ರಾಜ್ಯದಲ್ಲಿ ಶೇ.80ರಷ್ಟು ಮಹಿಳೆಯರು ಹೈನುಗಾರಿಕೆಯನ್ನೇ ಅವಲಂಬಿಸಿ ಕುಟುಂಬ ನಿರ್ವಹಿಸುತ್ತಿದ್ದಾರೆ. ಲಕ್ಷಾಂತರ ರೈತ ಕುಟುಂಬಗಳ ಜೀವನೋಪಾಯಕ್ಕೆ ಹೈನುಗಾರಿಕೆಯೇ ಪ್ರಮುಖ ಆಧಾರ. ಬರದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಉದ್ಯಮಿ ಹಂಚೀಪುರ ವಿಜಯ್​ಕುಮಾರ್​, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮರಾಜು, ಕುವೆಂಪು ಬ್ಯಾಂಕ್​ ಅಧ್ಯಕ್ಷ ನಟರಾಜು, ಡೇರಿ ಅಧ್ಯಕ್ಷರಾದ ಭಟ್ಟರಹಳ್ಳಿಮಂಜುನಾಥ್​, ರಾಜಶೇಖರ್​, ಬಸವರಾಜು, ಮುಖಂಡರಾದ ಗಂಗಾಧರ್​, ಗಂಗರಾಜು, ಮಹೇಶ್​, ಮುರುಳಿಧರ್​, ಉಮೇಶ್​, ಕಿರಣ್​ಕುಮಾರ್​ ಇತರರು ಇದ್ದರು.
ಬಿಸಿಲಲ್ಲೂ 5 ಕಿಮೀ ರ್ಯಾಲಿ : ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಬಮುಲ್​ ಶಿಬಿರ ಕಚೇರಿಯಿಂದ ಎನ್​.ಎಚ್​.48ರ ಟೋಲ್​ ಹಾಗೂ ಕುಣಿಗಲ್​ ವೃತ್ತದ ಮೂಲಕ ತಾಲೂಕು ಕಚೇರಿವರೆಗೂ ಸುಮಾರು 5 ಕಿ.ಮೀವರೆಗೆ ಹಾಲು ಉತ್ಪಾದಕರು, ರೈತರು ಬಿಸಿಲಲ್ಲೇ ಪತ್ರಿಭಟನಾ ರ್ಯಾಲಿ ನಡೆಸಿದರು.
ಟ್ರಾಫಿಕ್​ ಜಾಮ್​ : ಪತ್ರಿಭಟನೆ ಹಮ್ಮಿಕೊಂಡ ಹಿನ್ನಲೆ ರಾ.ಹೆದ್ದಾರಿ 48ರ ತುಮಕೂರು ಬೆಂಗಳೂರು ರಸ್ತೆಯಲ್ಲಿ ಸುಮಾರು 7&8 ಕಿಮೀವರೆಗೂ ಟ್ರಾಪಿಕ್​ ಜಾಮ್​ ಉಂಟಾಗಿತ್ತು. ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ಸಂಚಾರಿ ಠಾಣೆ ಪೊಲೀಸರು ಟ್ರಾಫಿಕ್​ ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಹಾಲು ಉತ್ಪಾದಕರ ಆಗ್ರಹ : ಮುಂಗಾರು ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿ, ಪಶು ಆಹಾರದ ಬೆಲೆ ಏರಿಕೆ ಹಾಗೂ ಹಾಲು ಉತ್ಪಾದನಾ ವೆಚ್ಚ ಹೆಚ್ಚಳದಿಂದ ಸಂಕಷ್ಟಕ್ಕೆ ಸಿಲುಕಿರುವ ಹೈನುಗಾರರನ್ನು ರಕ್ಷಿಸಬೇಕು. ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್​ ಹಾಲಿನ ದರ 10 ರೂ. ಹೆಚ್ಚಿಸಬೇಕು. ಪ್ರಸ್ತುತ ರೈತರಿಂದ ಖರೀದಿಸುತ್ತಿರುವ ಪ್ರತಿ ಲೀಟರ್​ ಹಾಲಿಗೆ ಸರಾಸರಿ 35 ರೂ. ನೀಡಲಾಗುತ್ತಿದೆ. ಉತ್ಪಾದನಾ ವೆಚ್ಚ ಪರಿಗಣಿಸಿದರೆ ಈ ಮೊತ್ತ ಸಾಲದು. ಆದ್ದರಿಂದ ಖರೀದಿ ದರ 45 ರೂ. ಗೆ ಹೆಚ್ಚಿಸಿ, ಪ್ರತಿ ಲೀಟರ್​ಗೆ ಸರ್ಕಾರ ನೀಡುತ್ತಿರುವ 5 ರೂ.ವನ್ನು 10ರೂ.ಗೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರಕ್ಕೆ ಮನವಿ : ರಸಗೊಬ್ಬರ, ಪಶು ಆಹಾರ, ವಿದ್ಯುತ್​ ಹಾಗೂ ಕಾರ್ಮಿಕರ ವೆಚ್ಚಗಳು ನಿರಂತರವಾಗಿ ಏರಿಕೆಯಾಗಿರುವ ಹಿನ್ನೆಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ತಕ್ಷಣವೇ ಹೈನುಗಾರರ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಕೈಗೊಂಡು, ಖರೀದಿ ದರ ಹೆಚ್ಚಿಸಬೇಕು ಎಂದು ತಹಸೀಲ್ದಾರ್​ ಅನುಪಸ್ಥಿತಿ ವಿಶೇಷ ತಹಸೀಲ್ದಾರ್​ ಸಂಧ್ಯಾ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ವಿಧಾನಸೌಧಕ್ಕೆ ಮುತ್ತಿಗೆ : ಕಾಂಗ್ರೆಸ್​ ಸರ್ಕಾರ ಉಚಿತ ಗ್ಯಾರಂಟಿಗಳ ಬದಲು ರೈತರಿಗೆ ಉಚಿತ ಹಸು ವಿತರಿಸಬೇಕು. ಹಾಗೆಯೇ ರೈತರಿಗೆ ಹಾಲು ಹಾಗೂ ಪ್ರೋತ್ಸಾಹ ದರ ಹೆಚ್ಚಳ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾವಿರಾರು ರೈತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್​ಚೌಧರಿ ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net