ತುರುವೇಕೆರೆ: ಸಾಹಿತ್ಯ ಅಕಾಡೆಮಿಗೆ ಸರ್ಕಾರ ಸಾಕಷ್ಟು ಅನುದಾನ ನೀಡಿದರೆ ಅಕಾಡೆಮಿಯ ಚಟುವಟಿಕೆಗಳನ್ನು ರಾಜ್ಯಾದ್ಯಂತ ವಿಸ್ತರಿಸಲು ಅನುಕೂಲವಾಗುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ನಾಗರಿಕರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಾಮಾನ್ಯ ಜನರಿಗೂ ಸಾಹಿತ್ಯ ತಲುಪಿಸುವ ನಿಟ್ಟಿನಲ್ಲಿ ಸಾಹಿತ್ಯ ಅಕಾಡೆಮಿ ಹಲವು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಸಾಲಿನಲ್ಲಿ 250 ಗ್ರಂಥಗಳನ್ನು ತರುವ ಯೋಜನೆಯಿದ್ದು, ಭಾಷಾಭಾರತಿ ಸಹಕಾರದೊಂದಿಗೂ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಡಾ.ಅಂಬೇಡ್ಕರ್ ಕುರಿತ 10 ಸಾವಿರ ಪ್ರತಿಗಳ ಪ್ರಕಟಣೆ ಜತೆಗೆ ಸೌಹಾರ್ದ ಕರ್ನಾಟಕ ಯೋಜನೆಯಡಿ ವ್ಯಕ್ತಿ, ವಿಷಯ ಆಧಾರಿತ ನಾಡಿನ ಸಾಹಿತ್ಯ ವೈವಿಧ್ಯತೆಗಳನ್ನು ಪರಿಚಯಿಸುವ 50 ಕಿರು ಕೃತಿಗಳನ್ನು ಹೊರತರಲಾಗುವುದು. ಈ ಕೃತಿಗಳ ಲೇಖಕರು ಓದುಗರ ಮುಂದೆ ಕೃತಿಯನ್ನು ಪರಿಚಯಿಸಿ ಚರ್ಚೆಯ ನಂತರ ಕೃತಿಯನ್ನು ಪರಿಷ್ಕರಿಸಬೇಕು ಎಂದರು.
ಸಾಹಿತಿ ಪ್ರೊ.ಕೆ.ಪುಟ್ಟರಂಗಪ್ಪ ಮಾತನಾಡಿ, ಮುಕುಂದರಾಜ್ ಸಾಹಿತ್ಯ ಅಕಾಡೆಮಿಯ ಚಟುವಟಿಕೆಗಳನ್ನು ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೂ ವಿಕೇಂದ್ರೀಕರಣಗೊಳಿಸಿದ್ದಾರೆ. ಇದು ಅನುಕರಣೀಯ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿಪೂ ಅಧ್ಯಕ್ಷ ಸಾ.ಶಿ.ದೇವರಾಜು, ಚಿದಂಬರೇಶ್ವರ ಗ್ರಂಥಾಲಯದ ಸಂಸ್ಥಾಪಕ ರಾಮಚಂದ್ರು, ಲೇಖಕ ತಂ.ಪಾ.ಚಂದ್ರರ್ಕಿತಿ, ಮಂಜೇಶ್ ಗುಪ್ತಾ, ವಿಶ್ವಾರಾಧ್ಯ, ತಾಪಂ ಮಾಜಿ ಸದಸ್ಯ ನಂಜೇಗೌಡ, ರಾಘವೇಂದ್ರ ಇತರರಿದ್ದರು.