ಶೇ.50 ಮಹಿಳಾ ಮೀಸಲಾತಿ ನೀಡಲಿ

Give 50% reservation to women
Give 50% reservation to women
Published on
ಗುಬ್ಬಿ: ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ನಮ್ಮ ಬೆಂಬಲವಿದೆ. ಆದರೆ ಶೇ.33 ಬದಲು 50ರಷ್ಟು ನೀಡುವುದು ಒಳ್ಳೆಯದು. ಮಹಿಳೆಯರಿಗೆ ಅವಕಾಶ ಸಿಕ್ಕರೆ ಪ್ರಾಮಾಣಿಕ ಕೆಲಸವನ್ನು ನಿರೀಕ್ಷೆ ಮಾಡಬಹುದು ಎಂದು ಶಾಸಕ ಎಸ್​.ಆರ್​.ಶ್ರೀನಿವಾಸ್​ ತಿಳಿಸಿದರು.
ಪಟ್ಟಣದ ಬಿಲ್ಲೆಪಾಳ್ಯದಲ್ಲಿ ವಿವಿಧ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಒಟ್ಟಿಗೆ ಜಾರಿಗೊಳ್ಳುವ ಸಾಧ್ಯತೆ ಇದೆ ಎಂದರು.
ಎಲ್ಲ ರಂಗದಲ್ಲಿಯೂ ಮಹಿಳೆಯರೇ ಮುಂದೆ ಇದ್ದು, ನಮ್ಮ ತಾಲೂಕಿನಲ್ಲಿಯೂ ಮಹಿಳಾ ಅಧಿಕಾರಿಗಳು ಹೆಚ್ಚಾಗಿದ್ದಾರೆ. ಪ್ರಾಮಾಣಿಕ ಕೆಲಸ ಇಲ್ಲಿ ನಡೆದಿದೆ ಎಂದ ಅವರು, ಮಲ್ಲಿಕಾರ್ಜುನ ರ್ಖಗೆ ಅವರ ಹೇಳಿಕೆ ಸರಿಯಿದೆ. 2029ರ ಸಂಸದರ ಚುನಾವಣೆ ವೇಳೆಗೆ ಮಹಿಳಾ ಮೀಸಲಾತಿ ಜತೆಗೆ ಕ್ಷೇತ್ರ ವಿಂಗಡಣೆ ಒಟ್ಟಿಗೆ ಆಗಬೇಕಿದೆ ಎಂದರು.
ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ. ದೇವೇಗೌಡರ ಕುಟುಂಬ ಎಲ್ಲರೂ ರಾಜಕಾರಣಿಗಳು, ಯಡಿಯೂರಪ್ಪ ಅವರ ಮನೆಯಲ್ಲೂ ಸಹ ಇದೆ. ಬಿಜೆಪಿ, ಜೆಡಿಎಸ್​ ಎಲ್ಲ ಪಕ್ಷದಲ್ಲಿ ಕುಟುಂಬ ರಾಜಕಾರಣ ಇರುವಾಗ, ಆತ್ಮಸಾಕ್ಷಿ, ಮಾನ ಮರ್ಯಾದೆ ಇರುವವರು ಕುಟುಂಬ ರಾಜಕಾರಣ ಎಂಬ ಮಾತೇ ಆಡುವಂತಿಲ್ಲ ಎಂದು ಟೀಕಿಸಿದರು.
ವಿ.ಸೋಮಣ್ಣ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ನಾವು ನೇರವಾಗಿ ಹೇಳ್ತಾ ಇದ್ದೀವಿ. ಆದರೆ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂದು ಸುಳ್ಳು ಹೇಳಿಕೆ ನೀಡಿರುವುದು ಸರಿಯಲ್ಲ. ಅಧಿಕಾರ ಇದ್ದಾಗ ಒಂದು ಮಾತು, ಇಲ್ಲದಾಗ ಒಂದು ಮಾತು ಆಡಿದರೆ ಜನ ಉಗಿಯುತ್ತಾರೆ. ಛೀಮಾರಿ ಹಾಕುತ್ತಾರೆ. ಅಧಿಕಾರ ಬೇಕೆಂದು ಸುಳ್ಳು ಹೇಳಿಕೆ ನೀಡುವುದು ಮುಂದಿನ ಪೀಳಿಗೆಗೆ ಮಾರಕ ಎಂದು ಹೇಳಿದರು.
37 ಲಕ್ಷ ರೂ. ಅನುದಾನದ ರಸ್ತೆ ಕಾಮಗಾರಿ, ಬಲದಂಡೆ ಕೋಡಿ ಚರಂಡಿ ಕಾಮಗಾರಿಗೆ 75 ಲಕ್ಷ ರೂ., ಬಸವ ನಗರದ ರಸ್ತೆ ಕಾಮಗಾರಿಗೆ 1 ಕೋಟಿ ರೂ., ಸುಭಾಷ್​ ನಗರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿಗೆ 69 ಲಕ್ಷ ರೂ. ಮತ್ತು ಪಟ್ಟಣದ ಹೈಟೆಕ್​ ಬಸ್​ ನಿಲ್ದಾಣ ಕಾಮಗಾರಿಗೆ 9 ಕೋಟಿ ರೂ. ಅನುದಾನದ ಕಾಮಗಾರಿಗೆ ಚಾಲನೆ ನೀಡಿದರು.
ಮುಖಂಡರಾದ ಸಿ.ಮೋಹನ್​, ಅಣ್ಣಪ್ಪಸ್ವಾಮಿ, ಪಿ.ಟಿ.ಸತೀಶ್​, ಉಂಡೆ ರಾಮಣ್ಣ, ಲೋಕೇಶ್​ ಬಾಬು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net