ಗಣೇಶ ಹಬ್ಬಕ್ಕೆ ಗಿರಿ ಜಿಲ್ಲೆ ಸಜ್ಜು

ಗಣೇಶ ಹಬ್ಬದಂಗವಾಗಿ ಯಾದಗಿರಿಯಲ್ಲಿ ಮಾರಾಟಕ್ಕೆ ಇಟ್ಟಿರುವ ವಿಗ್ರಹಗಳು.
ಗಣೇಶ ಹಬ್ಬದಂಗವಾಗಿ ಯಾದಗಿರಿಯಲ್ಲಿ ಮಾರಾಟಕ್ಕೆ ಇಟ್ಟಿರುವ ವಿಗ್ರಹಗಳು.
Published on
ಯಾದಗಿರಿ: ಪ್ರಥಮ ಪೂಜಿತ, ವಿಘ್ನ ವಿನಾಯಕನ ಹಬ್ಬಕ್ಕೆ ಗಿರಿ ಜಿಲ್ಲೆ ಸಜ್ಜಾಗುತ್ತಿದೆ. ಸೆ.೧೪ರಂದು ಗಣೇಶೋತ್ಸವ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಆರಂಭಗೊಳ್ಳಲಿದೆ.
ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸರ್ವ ಸಮುದಾಯಗಳ ಮುಖಂಡರ ಶಾಂತಿ ಸಭೆ ನಡೆಸಿ ಶಾಂತಿಯುವ ಆಚರಣೆಗೆ ಹಲವಾರು ನಿಯಮಗಳು ಜಾರಿ ಮಾಡಿವೆ. ಈ ಎಲ್ಲ ಕಂಡಿಷನ್‌ಗಳ ಒಪ್ಪಿಗೆಯೊಂದಿಗೆ ಪರವಾನಗಿ ಪಡೆದು ಭಕ್ತರು ಗಣೇಶ ಹಬ್ಬ ಆಚರಣೆಗೆ ಮುಂದಾಗಿದ್ದಾರೆ.
ನಗರ ಸೇರಿ ಜಿಲ್ಲೆಯ ಆರು ತಾಲೂಕಿನ ೧೩ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು ೧೦೮೦ ಗಣೇಶ ವಿಗ್ರಹಗಳ ಸ್ಥಾಪನೆಯಾಗಲಿದೆ. ಶಹಾಪುರ, ಯಾದಗಿರಿ, ಸುರಪುರ, ಗುರುಮಠಕಲ್‌ಗಳಲ್ಲಿ ಹಿಂದೂ ಮಹಾಗಣಪತಿ ಸಂಘಟನೆಯಿಂದ ಬೃಹತ್ ವಿಗ್ರಹಗಳು ಸ್ಥಾಪನೆಯಾಗಲಿವೆ. ೧, ೩, ೫, ೭, ೯, ೧೧, ೧೫, ೨೧ ದಿನ ಹೀಗೆ ಗಣೇಶ ವಿಗ್ರಹಗಳನ್ನು ಸ್ಥಾಪಿಸಲಾಗುತ್ತಿದೆ.
೧೪ರಂದು ಗಣೇಶ ವಿಗ್ರಹಗಳ ಮೆರವಣಿಗೆ ಮಾಡಿ ಪರವಾನಗಿ ಪಡೆದ ಸ್ಥಳಗಳಲ್ಲಿ ಪ್ರತಿಪ್ಠಾಪಿಸಲಾಗುತ್ತದೆ. ನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮೂಲಕ ಹಬ್ಬಕ್ಕೆ ಮೆರುಗು ನೀಡಲಾಗುತ್ತದೆ.
ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮೂರ್ತಿಗಳ ಪೈಕಿ ಅತಿ ಹೆಚ್ಚಿನ ೬೧೨ ೫ನೇ ದಿನ, ೧೧ನೇ ದಿನಕ್ಕೆ ೧೩೬, ೯ನೇ ದಿನ ೧೫೧, ೭ನೇ ದಿನಕ್ಕೆ ೭೫, ೩ನೇ ದಿನಕ್ಕೆ ೪೮, ೧೫ನೇ ದಿನಕ್ಕೆ ೧ ಹಾಗೂ ೨೧ ದಿನಕ್ಕೆ ನಾಲ್ಕು ವಿಗ್ರಹಗಳ ವಿರ್ಸಜನೆ ನಡೆಯಲಿದೆ. ಬೇಗ ಮೆರವಣಿಗೆ ಆರಂಭಿಸಿ ರಾತ್ರಿ ೧೧ರೊಳಗೆ ನಿಗದಿತ ಸ್ಥಳಗಳಲ್ಲಿ ವಿರ್ಸಜನೆ ಮೂಲಕ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಡಿಸಿ ರಾಹುಲ್ ಪಾಂಡ್ವೆ ಮತ್ತು ಎಸ್‌ಪಿ ಪೃಥ್ವಿಕ್ ಶಂಕರ್ ಗಣೇಶ ಮಂಡಳಿಗಳಿಗೆ ಮನವಿ ಮಾಡಿದ್ದಾರೆ.
ಹಬ್ಬದಂಗವಾಗಿ ಈಗಾಗಲೇ ಅನೇಕ ಕಡೆ ಗಣೇಶ ವಿಗ್ರಹಗಳ ಮಾರಾಟ ಆರಂಭವಾಗಿದೆ. ಸೊಲ್ಲಾಪುರ ಮತ್ತು ಹೈದರಾಬಾದ್‌ಗಳಿಂದ ತರಿಸಿ ಮಾರಾಟ ಮಾಡಲಾಗುತ್ತಿದೆ. ವಿಗ್ರಹಗಳ ಸೈಜ್ ಮೇಲೆ ದರ ನಿಗದಿಯಾಗಿದೆ.
"

ಈ ಸಲದ ಗಣೇಶ ಹಬ್ಬಕ್ಕೆ ನಗರ ಸೇರಿ ಇಡೀ ಜಿಲ್ಲೆಯಲ್ಲಿ ಡಿಜೆ ಬ್ಯಾನ್ ಮಾಡಲಾಗಿದೆ. ಕಳೆದ ಒಂದು ವಾರದಲ್ಲಿ ಡಿಜೆ ಹಚ್ಚಿದ ಪ್ರಕರಣಕ್ಕೆ ಸಂಬಧಿಸಿದಂತೆ ಮೂರು ಕೇಸ್ ಹಾಕಿ ಸೀಜ್ ಮಾಡಲಾಗಿದೆ. ಕಾರಣ ಈ ಸಲದ ಗಣೇಶ ಹಬ್ಬಕ್ಕೆ ಯಾರೂ ಡಿಜೆ ಬಳಸಬಾರದು.

| ಪೃಥ್ವಿಕ್ ಶಂಕರ್ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್
ಶಾಂತಿಯುತ ಗಣೇಶ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ೪ ಕೆಎಸ್‌ಆರ್‌ಪಿ, ೧೨ ಡಿಎಆರ್, ೫೦೦ ಗೃಹರಕ್ಷಕ ದಳ, ಹೆಚ್ಚುವರಿ ಎಸ್‌ಪಿ ಸೇರಿ ಮೂವರು ಡಿವೈಎಸ್‌ಪಿ, ೧೧ ಸಿಪಿಐ, ೩೭ ಪಿಎಸ್‌ಐ, ೫೦ ಎಎಸ್‌ಐ, ೧೫೦ ಎಚ್‌ಸಿ, ೩೪೦ ಪಿಸಿಗಳನ್ನು ನಿಯೋಜಿಸಲಾಗಿದೆ. ಬ್ಯಾನರ್, ಫಲ್ಕ್ಸ್ ಹಾಕುವವರು ಪ್ರಚೋದನಾಕಾರಿ ಬರಹಗಳನ್ನು ಮುದ್ರಿಸಬಾರದು. ಎಲ್ಲೆಡೆ ನಿಗಾ ಇಡಲು ಹೆಚ್ಚುವರಿ ಸಿಸಿ ಕ್ಯಾಮರಾ ಮತ್ತು ಡ್ರೋನ್ ಬಳಕೆ ಮಾಡಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net