ಸೂಪರ್ ಎಲ್ ನಿನೋ ಎದುರಿಸಲು ಸಿದ್ಧರಾಗಿ: ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ಸೂಚನೆ! Dr G Parameshwara

ಸೂಪರ್ ಎಲ್ ನಿನೋ ಎದುರಿಸಲು ಸಿದ್ಧರಾಗಿ: ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ಸೂಚನೆ!
ಸೂಪರ್ ಎಲ್ ನಿನೋ ಎದುರಿಸಲು ಸಿದ್ಧರಾಗಿ: ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ಸೂಚನೆ!
Published on
ಬೆಂಗಳೂರು: ಜಾಗತಿಕ ಹವಾಮಾನ ವೈಪರೀತ್ಯದ ಭಾಗವಾಗಿರುವ 'ಸೂಪರ್ ಎಲ್ ನಿನೋ' (Super El Nino) ಪ್ರಭಾವದಿಂದ ರಾಜ್ಯದಲ್ಲಿ ಉಂಟಾಗಬಹುದಾದ ಸಂಭವನೀಯ ಬರ ಹಾಗೂ ಪ್ರಕೃತಿ ವಿಕೋಪಗಳನ್ನು ಎದುರಿಸಲು ಸರ್ಕಾರ ಸಜ್ಜಾಗಿದೆ. ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ತಕ್ಷಣವೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್(Dr G Parameshwara) ಅವರು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ (ಜೂ.25) ಹಿರಿಯ ಅಧಿಕಾರಿಗಳೊಂದಿಗೆ ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ಮಹತ್ವದ ಸಭೆ ನಡೆಸಿದ ಉಪಮುಖ್ಯಮಂತ್ರಿಗಳು, ರಾಜ್ಯದಲ್ಲಿ ಈವರೆಗೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲಾವಾರು ಕಾರ್ಯಯೋಜನೆಗೆ ಡಿಸಿಗಳಿಗೆ ಕಟ್ಟುನಿಟ್ಟಿನ ಆದೇಶ

ಸಭೆಯ ಬಳಿಕ ಮಾತನಾಡಿದ ಡಾ. ಜಿ. ಪರಮೇಶ್ವರ ಅವರು, ಸೂಪರ್ ಎಲ್ ನಿನೋ ಪರಿಣಾಮದಿಂದಾಗಿ ರಾಜ್ಯದ ಕೆಲವು ಪ್ರದೇಶಗಳಲ್ಲಿ ಮಳೆ ಕೊರತೆ ಹಾಗೂ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗುವ ಆತಂಕವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವಿನ ಪೂರೈಕೆ, ಕೃಷಿ ಚಟುವಟಿಕೆಗಳ ನಿರ್ವಹಣೆ ಹಾಗೂ ನೀರಿನ ಸಂರಕ್ಷಣೆಗೆ ಸಂಬಂಧಿಸಿದಂತೆ ಜಿಲ್ಲಾವಾರು ಸಮಗ್ರ ಕಾರ್ಯಯೋಜನೆಗಳನ್ನು ಸಿದ್ಧಪಡಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಎಲ್ಲಾ ಜಿಲ್ಲಾಧಿಕಾರಿಗಳು (DC) ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ತುರ್ತು ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಅಂತರ್ಜಲದ ಪ್ರಸ್ತುತ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಬಳಕೆಯ ಮೇಲ್ವಿಚಾರಣೆಯನ್ನು ಅಧಿಕಾರಿಗಳು ನಿರಂತರವಾಗಿ ನಡೆಸಬೇಕು. ಯಾವುದೇ ಪರಿಸ್ಥಿತಿ ಎದುರಾದರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

ಕೊಳವೆಬಾವಿ ಕೊರೆಯಲು ವಿಳಂಬ ಮಾಡುವಂತಿಲ್ಲ!

ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿರುವ ಉಪಮುಖ್ಯಮಂತ್ರಿಗಳು, ಕುಡಿಯುವ ನೀರಿಗಾಗಿ ಹೊಸದಾಗಿ ಕೊಳವೆ ಬಾವಿ (ಬೋರ್‌ವೆಲ್) ಕೊರೆಸಲು ಅಗತ್ಯವಿರುವ ಅನುಮತಿಗಳನ್ನು ಇಲಾಖೆಗಳು ತ್ವರಿತಗತಿಯಲ್ಲಿ ನೀಡಬೇಕು. ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಅಧಿಕಾರಶಾಹಿ ವಿಳಂಬ ಧೋರಣೆಯನ್ನು ಸಹಿಸುವುದಿಲ್ಲ. ಕಂದಾಯ ಇಲಾಖೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಎಂದರು.
ಸಭೆಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳಾದ ಮನೋಜ್ ಕುಮಾರ್ ಮೀನಾ, ಮುಲ್ಲೈ ಮುಗಿಲನ್ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖರು ಉಪಸ್ಥಿತರಿದ್ದು, ಪರಿಸ್ಥಿತಿಯ ಗಾಂಭೀರ್ಯದ ಕುರಿತು ಉಪಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ.

ರಾಜ್ಯದ ಸದ್ಯದ ನೀರಿನ ಸ್ಥಿತಿಗತಿ (ವರದಿ ವಿವರ):

ಸಮಸ್ಯೆ ಎದುರಿಸುತ್ತಿರುವ ತಾಲ್ಲೂಕುಗಳು: 122
ಟ್ಯಾಂಕರ್ ನೀರು ಪೂರೈಕೆಯಾಗುತ್ತಿರುವ ಹಳ್ಳಿಗಳು: 139
ಬಾಡಿಗೆಗೆ ಪಡೆಯಲಾದ ಖಾಸಗಿ ಬೋರ್‌ವೆಲ್‌ಗಳು: 789
ಖಾಸಗಿ ಕೊಳವೆಬಾವಿ ಮೂಲಕ ನೀರು ಪಡೆಯುತ್ತಿರುವ ಹಳ್ಳಿಗಳು: 669
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net