40 ವರ್ಷಗಳ ಬಳಿಕ ಪಾಲಕರ ಹುಡುಕಿ ಬಂದ ಜರ್ಮನ್​ ಮಹಿಳೆ| High court

Germany
Germany
Published on

ಪ್ರಮುಖ ಮುಖ್ಯಾಂಶಗಳು

  • ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ
ಬೆಂಗಳೂರು: ಅಪರೂಪದ ಪ್ರಕರಣವೊಂದರಲ್ಲಿ ತನ್ನ ಜನ್ಮದಾತರ ವಿವರ ಹುಡುಕಿಕೊಂಡು ಬಂದಿರುವ ಜರ್ಮನ್​ ಮಹಿಳೆಯೊಬ್ಬರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ತನ್ನನ್ನು 1978ರಲ್ಲಿ ಜರ್ಮನ್​ ದಂಪತಿಗಳಿಗೆ ದತ್ತು ನೀಡಿರುವ ಬೆಂಗಳೂರಿನ ಖಾಸಗಿ ಆಸ್ಪತ್ರೆಯು ತನ್ನ ಜೈವಿಕ ತಂದೆ, ತಾಯಿಯ ಮಾಹಿತಿಯನ್ನು ನೀಡಲು ನಿರಾಕರಿಸಿದ್ದು, ಈ ಸಂಬಂಧ ಸೂಕ್ತ ನಿರ್ದೇಶನ ನೀಡಬೇಕು ಎಂದು ಜರ್ಮನಿಯ ಪ್ರಜೆಯಾಗಿರುವ ಅನಿತಾ ವೈಸೆಂಡ್​ ಅರ್ಜಿ ಸಲ್ಲಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್​ ಶಂಕರ್​ ಮಗದುಮ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್​ ಜಾರಿ ಮಾಡಿದೆ. ತಮ್ಮ ಮೂಲ ಬೇರುಗಳನ್ನು ತಿಳಿಯಲು ಅರ್ಜಿದಾರರು 2024ರಿಂದಲೇ ಪ್ರಯತ್ನಿಸುತ್ತಿದ್ದಾರೆ. ಆದರೆ, ದಾಖಲೆಗಳ ಅಲಭ್ಯತೆ ಕಾರಣ ಅದು ಸಾಧ್ಯವಾಗಿಲ್ಲ. ಪೊಲೀಸರಿಗೆ ದೂರು ನೀಡಲಾಗಿದ್ದರೂ ಕೂಡ ದಾಖಲೆಗಳಿಲ್ಲದ ಕಾರಣ ಯಾವುದೇ ಪ್ರಗತಿಯಾಗಿರಲಿಲ್ಲ. ಆದ್ದರಿಂದ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣದ ಹಿನ್ನಲೆ: 

ಅರ್ಜಿದಾರ ಮಹಿಳೆ 1978ರ ಮಾ. 3ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಅವರು ಜನಿಸಿದ ಕೆಲವೇ ದಿನಗಳಲ್ಲಿ ಅವರ ತಾಯಿ ಮೃತಪಟ್ಟಕಾರಣ, ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ತಂದೆ, ಮಗುವನ್ನು ಸಾಕಿ ಸಲಹಲು ಸಾಧ್ಯವಾಗದೆ ಆಸ್ಪತ್ರೆಗೆ ಒಪ್ಪಿಸಿ, ದತ್ತು ನೀಡುವಂತೆ ಕೋರಿದ್ದರು. ಆಸ್ಪತ್ರೆಯಲ್ಲಿದ್ದ ಮಗುವಿಗೆ ಆಡಳಿತ ಮಂಡಳಿಯೇ ಅನಿತಾ ಎಂದು ಹೆಸರಿಟ್ಟು 5 ತಿಂಗಳು ಆರೈಕೆ ಮಾಡಿತ್ತು. ನಂತರ ಜರ್ಮನಿಯ ಲೂಟ್ಜ್​ ಜೋಕಿಮ್​ ಮತ್ತು ಸಿಗ್ರಿಡ್​ ವೈಸೆಂಡ್​ ಎಂಬ ದಂಪತಿ, ನ್ಯಾಯಾಲಯದ ಮೂಲಕ ಕಾನೂನುಬದ್ಧವಾಗಿ ಮಗುವನ್ನು ದತ್ತು ಪಡೆದಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net