ತಿಪಟೂರಲ್ಲೂ ಗ್ಯಾಸ್​ ತಲೆನೋವು

Gas headache in Tiptur too
Gas headache in Tiptur too
Published on
ತಿಪಟೂರು: ಗೃಹಬಳಕೆ ಅನಿಲ ಸರಬರಾಜಿನಲ್ಲಿ ಯಾವುದೇ ಅಡಚಣೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದರೂ ತೀವ್ರ ಆತಂಕಕ್ಕೆ ಒಳಗಾಗಿರುವ ಜನತೆ ಗ್ಯಾಸ್​ ಸರಬರಾಜು ಅಂಗಡಿಗಳ ಎದುರು ಸರತಿ ಸಾಲಿನಲ್ಲಿ ನಿಂತು ನೋಂದಣಿಗೆ ಕಾಯುತ್ತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.
ತಿಪಟೂರು ನಗರ ಸೇರಿದಂತೆ ತಾಲೂಕಿನೆಲ್ಲೆಡೆ ಗೃಹ ಬಳಕೆಯ ಸಿಲಿಂಡರ್​ಗಳು ಸಾಕಷ್ಟು ಲಭ್ಯವಿದೆ. ಆದರೂ ತೀವ್ರ ಆತಂಕಕ್ಕೆ ಒಳಗಾದವರಂತೆ ವರ್ತಿಸುತ್ತಿರುವ ಜನತೆ ಯೋಚಿಸುವ ವ್ಯವಧಾನ ಇಲ್ಲದವರಂತೆ ಬೆಳಗ್ಗೆಯಿಂದಲೇ ತಮ್ಮ ಕೆಲಸ, ಕಾರ್ಯ ಬದಿಗೊತ್ತಿ ಗ್ಯಾಸ್​ ಸರಬರಾಜು ಮಳಿಗೆಗಳ ಎದುರು ಸರತಿಯಲ್ಲಿ ನಿಂತು ಕಾಯುತ್ತಿದ್ದಾರೆ. ಗ್ಯಾಸ್​ ಏಜೆನ್ಸಿಯವರು ಎಷ್ಟು ಹೇಳಿದರೂ, ಹಠ ಹಿಡಿದವರಂತೆ ಇಂದೇ ನಮಗೆ ಸಿಲಿಂಡರ್​ ಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಅವಧಿಗೂ ಮುಂಚೆ ಗ್ಯಾಸ್​ ರೀಫಿಲ್​ಗಾಗಿ ಒತ್ತಡ ಹೆಚ್ಚುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ನಿನ್ನೆಯಿಂದ ಜಾರಿಗೆ ಬರುವಂತೆ ಹೊಸ ಆದೇಶ ಜಾರಿಗೊಳಿಸಿದ್ದು, ನಗರ ಪ್ರದೇಶಗಳಲ್ಲಿ ರೀಫಿಲ್​ ಪಡೆಯಲು ಕನಿಷ್ಠ 25 ದಿನ ಮತ್ತು ಗ್ರಾಮೀಣ ಭಾಗದವರಿಗೆ 45 ದಿನಗಳ ಕಾಲಮಿತಿ ಜಾರಿಗೊಳಿಸಿದೆ. ಆದರೆ ಇದರ ಮಾಹಿತಿ ಇಲ್ಲದವರು ಇಂದೇ ನಮಗೆ ರೀಫಿಲ್​ ಬೇಕೆಂದು ಹಠ ಹಿಡಿಯುತ್ತಿದ್ದು. ಅವರಿಗೆ ಅರಿವು ಮೂಡಿಸುವುದು ಎಜೆನ್ಸಿಯವರಿಗೆ ತಲೆನೋವಾಗಿದೆ.
ತಾಲೂಕಿನ ನೊಣವಿನಕೆರೆ ಗ್ರಾಮದ ಭಾರತ್​ಗ್ಯಾಸ್​ ಏಜೆನ್ಸಿ ಗೋದಾಮಿನಲ್ಲಿ ಸಾಕಷ್ಟು ಸಿಲೆಂಡರ್​ ಲಭ್ಯವಿದೆ. ಆದರೂ ಆತಂಕಕ್ಕೆ ಒಳಗಾಗಿರುವ ಕೆಲವರು ಅವರ ಬಳಿ ಇರುವ ಸಿಲೆಂಡರಿನಲ್ಲಿ 5ರಿಂದ 6 ಕಿಲೋ ಗ್ಯಾಸ್​ ಇದ್ದರೂ, ಅದನ್ನು ಪೂರ್ತಿ ಖಾಲಿ ಮಾಡದೇ, ಹೊಸ ಸಿಲೆಂಡರಿಗೆ ಬೇಡಿಕೆ ಇಟ್ಟು ಕಾಯುತ್ತಿರುವುದನ್ನು ಖುದ್ದು ತಾಲೂಕು ಆಹಾರ ನಿರೀಕ್ಷಕರೇ ಗಮನಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net