

ಆನೇಕಲ್ :
ಹಾರಗದ್ದೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯ ಅಕ್ಕ ಪಕ್ಕದಲ್ಲಿ ಕಸದ ರಾಶಿಯಿಂದ ಎದುರಾಗಿದ್ದ ಸಮಸ್ಯೆಗೆ ಕೊನೆಗೂ ಮುಕ್ತಿ ದೊರೆತಿದೆ.
ಹಾರಗದ್ದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿರಂಗಪ್ಪ ಅವರ ನೇತೃತ್ವದಲ್ಲಿ ಪಂಚಾಯಿತಿ ಸಿಬ್ಬಂದಿ ಸ್ಥಳಕ್ಕೆ ತೆರಳಿ, ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಾಶಿಯಾಗಿದ್ದ ಕಸವನ್ನು ಟ್ರಾಕ್ಟರ್ ಮೂಲಕ ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಹಲವು ದಿನಗಳಿಂದ ಸಂಗ್ರಹವಾಗಿದ್ದ ಕಸವನ್ನು ತೆರವುಗೊಳಿಸಿ ಸ್ಥಳವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿದರು.
ಹಾರಗದ್ದೆ ಗ್ರಾಮದಲ್ಲಿ ಕಸದ ಸಮಸ್ಯೆ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ಮಂಗಳವಾರ ಹಾರಗದ್ದೆ ಸರ್ಕಾರಿ ಆಸ್ಪತ್ರೆಗೆ ಬಂದರೆ ರೋಗ ಗ್ಯಾರಂಟಿ! ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡ ಬೆನ್ನಹಿಂದೆಯೇ ಹಾರಗದ್ದೆ ಗ್ರಾಪಂ ಆಡಳಿತ ಚುರುಕಿನ ಕಾರ್ಯಾಚರಣೆ ಕೈಗೊಂಡಿತು. ಆಸ್ಪತ್ರೆ ಸುತ್ತಮುತ್ತಲಿನ ಕಸದ ರಾಶಿ ಹಾಗೂ ಸ್ವಚ್ಛತೆಯ ಕೊರತೆಯಿಂದ ಸಾರ್ವಜನಿಕರಿಗೆ ಎದುರಾಗಿರುವ ಸಮಸ್ಯೆಯನ್ನು ಬೆಳಕಿಗೆ ತರಲಾಗಿತ್ತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿರಂಗಪ್ಪ ಹಾಗೂ ಶಶಿಕುಮಾರ್ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಕೊಟ್ಟ ಸಿಬ್ಬಂದಿ ಟ್ರಾ$್ಯಕ್ಟರ್ಗಳಲ್ಲಿ ಕಸ ತೆರವು ಮಾಡಿದ್ದು, ಸಿಬ್ಬಂದಿ ಕಾರ್ಯಕ್ಕೆ ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಸಮಸ್ಯೆಗಳನ್ನು ಬೆಳಕಿಗೆ ತಂದ ವಿಜಯವಾಣಿ ಪಾತ್ರಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವಿಜಯವಾಣಿ ಪತ್ರಿಕೆಯಲ್ಲಿ ವರದಿ ಬಿತ್ತರ ಆದ ಬಳಿಕ ಕೂಡಲೇ ಸ್ವಚ್ಛತೆಯ ಕಾರ್ಯ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಇಲ್ಲಿ ಕಸ ಹಾಕದಂತೆಯೂ ಕ್ರಮ ಕೈಗೊಳ್ಳಲಾಗುವುದು.
— > ಮುನಿರಂಗಪ್ಪ ಪಿಡಿಒ, ಹಾರಗದ್ದೆ ಗ್ರಾಪಂ