ಬರದ ಬೇಗುದಿಗೆ ಬರಿದಾಯ್ತು ಗಂಗೇನಹಳ್ಳಿ ಕೆರೆ

 ಗಂಗೇನಹಳ್ಳಿ ಕೆರೆ ಬರಿದಾಗಿ ಜನ-ಜಾನುವಾರುಗಳಿಗೆ ನೀರಿಲ್ಲದಂತಾಗಿರುವುದು.
ಗಂಗೇನಹಳ್ಳಿ ಕೆರೆ ಬರಿದಾಗಿ ಜನ-ಜಾನುವಾರುಗಳಿಗೆ ನೀರಿಲ್ಲದಂತಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಗಂಗೇನಹಳ್ಳಿ ಕೆರೆ ಒಣಗಿ ಬರಿದಾಗಿದ್ದು
  • ಜಾನುವಾರುಗಳಿಗೆ ಕುಡಿಯಲು ನೀರಿಲ್ಲ
ಕಿಕ್ಕೇರಿ: ಹೋಬಳಿಯ ಗಂಗೇನಹಳ್ಳಿ ಕೆರೆ ಒಣಗಿ ಬರಿದಾಗಿದ್ದು, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ.
ಕೆರೆಯಲ್ಲಿನ ಗುಂಡಿಗಳಲ್ಲಿದ್ದ ಅಲ್ಪಸ್ವಲ್ಪ ಗುಟುಕು ನೀರು ಬರಿದಾಗಿದೆ. 30 ಎಕರೆ ವಿಸ್ತಾರದ ಕೆರೆ ಈಗ ಎತ್ತ ನೋಡಿದರೂ ವಿಶಾಲ ಮೈದಾನದಂತೆ ಕಾಣುತ್ತಿದೆ.
ಕೆರೆ ಅವಲಂಬಿಸಿ 490 ಎಕರೆಯಷ್ಟು ಕೃಷಿ ಭೂಮಿ ತಳಭಾಗದಲ್ಲಿದೆ. ಕೆರೆಯ ಆಸುಪಾಸಿನಲ್ಲಿ 300ಕ್ಕೂ ಹೆಚ್ಚು ರೈತರ ಕೃಷಿಪಂಪುಸೆಟ್‌ಗಳಿವೆ. ಕೆರೆಯ ತಳಭಾಗದ ರೈತರು ಬೇಸಿಗೆಯಲ್ಲಿ ತರಕಾರಿ ಬೆಳೆ ಬೆಳೆಯುತ್ತಿದ್ದು, ಪ್ರಸ್ತುತ ನೀರಿಲ್ಲದಿರುವುದರಿಂದ ಬೇಸಾಯವೂ ಈ ಬಾರಿ ಇಲ್ಲವಾಗಿದೆ. ಮುಂಗಾರು, ಪೂರ್ವ ಮುಂಗಾರು ಮಳೆ ಮುನಿಸಿಕೊಂಡಾಗಿದೆ. ಹಿಂಗಾರು ಮಳೆ ಕನಸಿನಂತಿದೆ. ಕೆರೆ ಬಟಬಯಲಾಗಿ, ಕೃಷಿಕರ ಪಂಪುಸೆಟ್‌ಗಳು ಸ್ಥಗಿತವಾಗಿವೆ. ಅಂರ್ತಜಲ ಕುಸಿತದಿಂದ ದಿನಕ್ಕೊಂದೆರೆಡು ಪಂಪುಸೆಟ್‌ಗಳು ಮೌನವಾಗುತ್ತಿದ್ದು ರೈತರು ಆಗಸದತ್ತ ನೋಡುವಂತಾಗಿದೆ.
ಕಬ್ಬು ಬೆಳೆಯುತ್ತಿದ್ದ ರೈತರ ಮೊಗ ಬಾಡಿದಂತಾಗಿದೆ. ಜಾನುವಾರುಗಳಿಗೆ ಮೇವು, ನೀರಿಲ್ಲ ಎಂದು ಹೈನುಗಾರರು ಹಪಹಪಿಸುವಂತಾಗಿದೆ. ಕೆರೆ ಬರಿದಾದ ಪರಿಣಾಮ ಗಂಗೇನಹಳ್ಳಿ, ಸಿದ್ಧಾಪುರದಂತಹ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಯಲ್ಲಿ ನೀರು ಜಿನುಗಲು ಆರಂಭಿಸಿದೆ.
ಆಟದ ಮೈದಾನವಾದ ಅಂಗಳ!: ಹತ್ತು ವರ್ಷಗಳ ಹಿಂದೆ ಈ ಕೆರೆಗೆ ಮಳೆಯ ನೀರು ಆಶ್ರಯವಾಗಿತ್ತು. ಸ್ವಲ್ಪ ಜೋರು ಮಳೆ ಬಂದರೆ ಸಾಕಿತ್ತು. ಹಳ್ಳ ಕೊಳ್ಳಗಳಲ್ಲಿ ನೀರು ತುಂಬಿ ಸರಾಗವಾಗಿ ಹರಿದು ಬರುತ್ತಿತ್ತು. ಸಾಕಷ್ಟು ಒಡ್ಡು, ಜೀವಸೆಲೆಗಳಿದ್ದವು. ಇಂದು ಎಲ್ಲವೂ ಮಾಯವಾಗಿದೆ. ಹಳ್ಳ ಕೊಳ್ಳಗಳು ಎಗ್ಗಿಲ್ಲದೆ ಮುಚ್ಚಿಹೋಗಿವೆ. ಒತ್ತುವರಿ ತೆರವು ಮಾಡಿ ಟ್ರಂಚ್ ತೆಗೆದ ಗುಂಡಿಗಳು ಪ್ರಭಾವಿ ರೈತರಿಂದ ಮತ್ತೆ ಮುಚ್ಚಲ್ಪಡುತ್ತಿವೆ. ಕೆರೆ ಹೂಳು ನೆಪ ಮಾತ್ರಕ್ಕೆ ತೆಗೆಯುವಂತಾಗಿದ್ದು, ಕೆರೆ ತುಂಬ ಹೂಳು ತುಂಬಿ ಆಟದ ಮೈದಾನವಾಗಿದೆ.
ಕೆರೆಗೆ ಬರುತ್ತಿದ್ದ ನೀರಿನ ಸೆಲೆಗಳಾದ ಹಳ್ಳಗಳನ್ನು ಪ್ರಭಾವಿ ವ್ಯಕ್ತಿಗಳು ನಿರ್ಭಯವಾಗಿ ಮುಚ್ಚಿಕೊಂಡಿರುವುದರಿಂದ ನೀರು ಸಂಗ್ರಹಣೆಗೆ ಪೆಟ್ಟು ಬಿದ್ದಿದೆ. ಹೂಳನ್ನು ಅವೈಜ್ಞಾನಿಕವಾಗಿ ತೆಗೆಯಲಾಗಿದೆ. ಹೇಮಾವತಿ ನಾಲೆಯಿಂದ ನೀರು ಹರಿದರೆ ಮಾತ್ರ ಈಬಾರಿ ರೈತ ಬದುಕು ಕಟ್ಟಿಕೊಳ್ಳಲು ಸಾಧ್ಯ. ಇಲ್ಲವಾದಲ್ಲಿ ರೈತ ಕೂಲಿ ಹರಸಿ ನಗರ ಪ್ರದೇಶಕ್ಕೆ ಗುಳೇ ಹೋಗುವ ಕಾಲ ಸನಿಹವಾಗಲಿದೆ.
ಈ ಬಾರಿ ಮಳೆ ಕೈ ಕೊಟ್ಟಿರುವುದರಿಂದ ಹಲವು ರೀತಿಯ ಸಮಸ್ಯೆ ಎದುರಾಗಿದೆ. ಕೆರೆ-ಕಟ್ಟೆ, ರೈತರು, ಪ್ರಾಣಿಪಕ್ಷಿಗಳ ಜೀವ ಸೆಲೆ ಸಂರಕ್ಷಣೆ ಆಗದಿದ್ದರೆ ಮುಂದಿನ ದಿನಗಳಲ್ಲಿ ನಮಗೆ ಉಳಿಗಾಲವಿಲ್ಲ. ಕೆರೆಗೆ ನೀರು ತುಂಬಿಸುವ ಜತೆಗೆ ಒತ್ತುವರಿ ತೆರವು ಮಾಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು.
ಎಚ್.ಟಿ.ಮಂಜು, ಶಾಸಕ, ಕೆ.ಆರ್.ಪೇಟೆ
ಗಂಗೇನಹಳ್ಳಿ ಕೆರೆ ನಮ್ಮ ಇಲಾಖೆ ವ್ಯಾಪ್ತಿಗೆ ಬರಲಿದೆ. ಈಗಷ್ಟೇ ನೂತನವಾಗಿ ಬಂದಿರುವೆ. ಸ್ಥಳ ಪರಿಶೀಲನೆ ಮಾಡಿ ಮೇಲಧಿಕಾರಿಗಳಿಗೆ ತಿಳಿಸಿ ಕೆರೆ ಸಂರಕ್ಷಣೆಗೆ ಅಗತ್ಯ ಕ್ರಮ ವಹಿಸಲಾಗುವುದು.
ಸುಧಾ
ಎಇಇ, ಹೇಮಾವತಿ ಎಡದಂಡೆ ನಾಲೆ ಉಪವಿಭಾಗ
ಒತ್ತುವರಿ ತೆರವು ಎನ್ನುವುದು ಕಾಟಾಚಾರವಾಗಬಾರದು. ಭೂಗಳ್ಳರಿಗೆ ಕಠಿಣ ಶಿಕ್ಷೆಯಾಗಬೇಕಿದೆ. ಒತ್ತುವರಿ ತೆರವು ಮಾಡಿ ಗಡಿರೇಖೆ ಗುರುತಿಸಿ ತಡೆಗೋಡೆ ಹಾಕಬೇಕಿದೆ. ಹೂಳು ತೆಗೆಯುವ ಸಂದರ್ಭ ರೈತರು ಸಾಮೂಹಿಕವಾಗಿ ಪಾಲ್ಗೊಂಡಾಗ ಮಾತ್ರ ಕೆರೆ ಉಳಿವು ಸಾಧ್ಯ.
ಗುರು ಸಾಮಾಜಿಕ ಕಾರ್ಯಕರ್ತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net