ಜ.12ರಿಂದ ಗಂಗಾಧರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ / NELAMANGAL

ನೆಲಮಂಗಲ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಗಿರಿಜಾ ಕಲ್ಯಾಣ ಮಹೋತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ಶಾಸಕ ಎನ್​.ಶ್ರೀನಿವಾಸ್​, ತಹಸೀಲ್ದಾರ್​ ಮಲ್ಲೇಶ್​ ಬೀರಪ್ಪ ಪೂಜಾರ್​, ತಾಪಂ ಇಪ ಬಿಂದೂ, ಮುಜರಾಯಿ ಇಒ ಬೃಂದಾ, ಬಿಇಒ ರಮೇಶ್​, ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಇದ್ದರು.
ನೆಲಮಂಗಲ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಗಿರಿಜಾ ಕಲ್ಯಾಣ ಮಹೋತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ಶಾಸಕ ಎನ್​.ಶ್ರೀನಿವಾಸ್​, ತಹಸೀಲ್ದಾರ್​ ಮಲ್ಲೇಶ್​ ಬೀರಪ್ಪ ಪೂಜಾರ್​, ತಾಪಂ ಇಪ ಬಿಂದೂ, ಮುಜರಾಯಿ ಇಒ ಬೃಂದಾ, ಬಿಇಒ ರಮೇಶ್​, ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಇದ್ದರು.
Published on
ನೆಲಮಂಗಲ : ದಕ್ಷಿಣ ಕಾಶಿ ಶಿವಗಂಗೆಯ ಗಂಗಾಧರೇಶ್ವರ ಸ್ವಾಮಿಯ ಗಿರಿಜಾ ಕಲ್ಯಾಣ ಮಹೋತ್ಸವ ಜ.15ರಂದು ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.
ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಂಗಾಧರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಜ.12ರಿಂದ 20ರವರೆಗೆ ನಡೆಯಲಿದೆ, ಜ.15ರಂದು ರಾತ್ರಿ 12.30ಕ್ಕೆ ಗಂಗಾಧರೇಶ್ವರ ಸ್ವಾಮಿಗೆ ಧಾರೆ ನಡೆಯಲಿದೆ. 16ರಂದು ಅದ್ದೂರಿ ಜಾತ್ರೆಗೆ ಶಿವಗಂಗೆ ಸಾಕ್ಷಿಯಾಗಲಿದೆ ಎಂದರು.
ಜಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು, ಅರಣ್ಯ ಇಲಾಖೆ, ವೈದ್ಯಾಧಿಕಾರಿಗಳು, ದೇವಾಲಯದ ಕಾರ್ಯನಿರ್ವಹಣಾಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು, ಸ್ಥಾಪನಾ ಸಮಿತಿ ಸದಸ್ಯರು, ಗ್ರಾಪಂ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.
ಜಾತ್ರೆ ಸ್ಥಳಗಳಲ್ಲಿ ಮತ್ತು ದಾಸೋಹ ಭವನಗಳಲ್ಲಿ ಸಿಸಿ ಕ್ಯಾಮರ ಕಡ್ಡಾಯಗೊಳಿಸಬೇಕು. ಶಿವಗಂಗೆಯಲ್ಲಿ ದನಗಳ ಜಾತ್ರೆ ನಡೆಯುವುದರಿಂದ ಪಶುಪಾಲನ ಇಲಾಖೆ ಸಿಬ್ಬಂದಿ ಎಚ್ಚರವಹಿಸಬೇಕು. ದನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು. ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಮೂಲಸೌಕರ್ಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಸದಸ್ಯ ಸಿ.ಪ್ರದಿಪ್​, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ನಾರಾಯಣ್​ಗೌಡ, ಮಾನಿ ಸದಸ್ಯ ಬಿ.ಬಿ.ವಾಸು, ಮುಖಂಡ ಗೋವಿಂದರಾಜು, ಅಂಜನಮೂರ್ತಿ, ವಸಂತ್​, ಮುನಿರಾಜು, ಮುನಿರಾಮು, ಸಿ.ಎಂ.ಗೌಡ, ಚಿಕ್ಕಣ್ಣ ಇತರರಿದ್ದರು.
ಶಾಸಕರಿಗೆ ಮನವಿ : ಶಿವಗಂಗೆ ಜಾತ್ರೆಯು ಜಿಲ್ಲೆಯಲ್ಲಿ ಅತಿದೊಡ್ಡ ಜಾತ್ರೆಯಾಗಿರುವುದರಿಂದ ಮೂಲಸೌಕರ್ಯ, ವಿದ್ಯುತ್​, ಕಾಡು ಪ್ರಾಣಿಗಳಿಂದ ರಕ್ಷಣೆ ಮುಂತಾದ ಜಾಗೃತ ಕ್ರಮ ಕೈಗೊಳ್ಳಬೇಕು. ಬಸ್​ ವ್ಯವಸ್ಥೆ, ಕುಡಿಯುವ ನೀರಿನ ಕೌಂಟರ್​ ಹಾಗೂ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಬೇಕು. ಜಾತ್ರೆ ಸಾಗುವ ರಾಜಬೀದಿಯ ಚರಂಡಿಗಳನ್ನು ಸ್ವಚ್ಛಗೊಳಿಸಿ, ಉತ್ತಮ ಸೌಲಭ್ಯ ನೀಡುವಂತೆ ಮುಖಂಡರು ಶಾಸಕರಿಗೆ ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net