ರಾಜ್ಯದ 6 ಸಾವಿರ ಪಂಚಾಯ್ತಿಗಳಿಗೆ 'ಮಹಾತ್ಮ ಗಾಂಧಿ' ಹೆಸರು! ಡಿ.ಕೆ.ಶಿವಕುಮಾರ್‌ | Gram Panchayat

D K Shivakumar
D K Shivakumar
Published on
ಬೆಂಗಳೂರು: ಕೇಂದ್ರ ಸರ್ಕಾರದ ನರೇಗಾ (MGNREGA) ಯೋಜನೆಯ ಮಾರ್ಪಾಡು ಮತ್ತು ಅನುದಾನ ಕಡಿತವನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ 'ರಾಜಭವನ ಚಲೋ' ಪ್ರತಿಭಟನೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶದ ಸುರಿಮಳೆಗೈದಿದ್ದಾರೆ.
ಗಾಂಧೀಜಿಯವರ 'ಗ್ರಾಮ ಸ್ವರಾಜ್ಯ'ದ ಕನಸನ್ನು ಸಾಕಾರಗೊಳಿಸಲು ಮತ್ತು ಅವರ ಹೆಸರನ್ನು ಶಾಶ್ವತವಾಗಿ ಉಳಿಸಲು ರಾಜ್ಯದ ಎಲ್ಲಾ 6,000 ಗ್ರಾಮ ಪಂಚಾಯ್ತಿಗಳಿಗೆ 'ಮಹಾತ್ಮ ಗಾಂಧಿ ಪಂಚಾಯ್ತಿ' ಎಂದು ಹೆಸರಿಡಲು ಸರ್ಕಾರ ತೀರ್ಮಾನಿಸಿದೆ ಎಂದು ಶಿವಕುಮಾರ್ ಘೋಷಿಸಿದರು. ಈ ಮೂಲಕ ಗಾಂಧಿ ಹೆಸರನ್ನು ಅಳಿಸಲು ಪ್ರಯತ್ನಿಸುತ್ತಿರುವವರಿಗೆ ತಿರುಗೇಟು ನೀಡಲಾಗುವುದು ಎಂದರು.

ಬಿಜೆಪಿ ವಿರುದ್ಧ ವಾಗ್ದಾಳಿ

"ಗಾಂಧೀಜಿಯವರನ್ನು ಹತ್ಯೆ ಮಾಡಿದ ಸಿದ್ಧಾಂತದವರು ಇಂದು ಅವರನ್ನು ಮತ್ತೆ ಹತ್ಯೆ ಮಾಡಲು ಹೊರಟಿದ್ದಾರೆ. ಗಾಂಧಿ ಹೆಸರನ್ನು ಯೋಜನೆಗಳಿಂದ ತೆಗೆದುಹಾಕುತ್ತಿರುವ ಬಿಜೆಪಿಯವರಿಗೆ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟಿಸುವ ನೈತಿಕ ಹಕ್ಕಿಲ್ಲ," ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಈ ಹಿಂದೆ ಕೇಂದ್ರವು 90% ಅನುದಾನ ನೀಡುತ್ತಿತ್ತು, ಈಗ ಹೊಸ ಕಾಯ್ದೆಯಡಿ ರಾಜ್ಯವು 40% ಭರಿಸಬೇಕಿದೆ. ಇದು ಬಡವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ತಂತ್ರ ಎಂದು ದೂರಿದರು. ಎನ್‌ಡಿಎ ಮಿತ್ರಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರೇ ಈ ನೂತನ ಕಾಯ್ದೆ ಜಾರಿ ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ. ಕೇಂದ್ರವು ಇದನ್ನು ಹಿಂಪಡೆಯದಿದ್ದರೆ ಆಪತ್ತು ತಪ್ಪಿದ್ದಲ್ಲ ಎಂದರು.
ನರೇಗಾ ಅಕ್ರಮದ ಬಗ್ಗೆ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಶಿವಕುಮಾರ್, ಈ ಹೋರಾಟ ತಾಲೂಕು ಮಟ್ಟದ ಪಾದಯಾತ್ರೆಯಾಗಿ ಮುಂದುವರಿಯಲಿದೆ ಎಂದು ಘೋಷಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net