ನರೇಗಾ ಯೋಜನೆಯ ಬಲವರ್ಧನೆ ಗೊಳಿಸುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಮೊದಲ ಬಜೆಟ್ ಅಧಿವೇಶನದಲ್ಲಿ ಶಿಶು ಪಾಲನಾ ಕೇಂದ್ರಗಳನ್ನು ತೆರೆಯುವ ಕುರಿತು ಘೋಷಿಸಿತ್ತು. ಮಹಿಳಾ ಕೂಲಿಕಾರರ 3.5 ವರ್ಷದೊಳಗಿನ ಮಕ್ಕಳ ಪೋಷಣೆಗೆ ಮತ್ತು ಉದ್ಯೋಗ ಖಾತ್ರಿ ದಿನಗಳನ್ನು ಅಧಿಕಗೊಳಿಸಲು ಈ ಯೋಜನೆ ಜಾರಿಗೆ ಉದ್ದೇಶಿಸಲಾಗಿತ್ತು. ಆರಂಭದಲ್ಲಿ ಜಿಲ್ಲೆಯಲ್ಲಿ 100 ಗ್ರಾಪಂಗಳನ್ನು ಆಯ್ಕೆ ಮಾಡಲಾಗಿತ್ತು. ಶಿಶು ಪಾಲಕರಿಗೆ ತರಬೇತಿಯನ್ನೂ ನೀಡಿದೆ. ಆದರೆ, ಗ್ರಾಪಂ, ತಾಪಂ ಸದಸ್ಯರ ಸಮಿತಿ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಿತಿ ರಚಿಸದೇ, ಸಂಪನ್ಮೂಲ ಕ್ರೂಢಿಕರಣ, ಅನುದಾನ ವಿನಿಯೋಗ ಸೇರಿದಂತೆ ಹಲವು ನಿಯಮಗಳನ್ನು ರಚಿಸದೇ ತರಾತುರಿಯಲ್ಲಿ ಯೋಜನೆಗೆ ಸರ್ಕಾರ ಚಾಲನೆ ನೀಡಿತ್ತು. ಜಿಲ್ಲೆಯ ಪ್ರತಿ ಕೇಂದ್ರಕ್ಕೆ ಸರ್ಕಾರದಿಂದ 1 ಲಕ್ಷ ರೂ ವೆಚ್ಚ ಮಾಡಿ ಕೇಂದ್ರಗಳನ್ನು ತೆರೆಯಲಾಗಿದೆ.