ತಿಮ್ಮಾಪುರ ಗ್ರಾಮದಲ್ಲಿ ಬತ್ತಿದ ಕೆರೆ! ನೀರಿಗೆ ಹಾಹಾಕಾರ

Gadag Timmapur village Lake
Gadag Timmapur village Lake
Published on
ವಿಜಯವಾಣಿ ಸುದ್ದಿಜಾಲ ಗದಗ
ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ತಾಪಮಾನ ಹೆಚ್ಚುತ್ತಿರುವ ಬೆನ್ನಲ್ಲೇ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ತಾಲೂಕಿನ ಸಮೀಪದ ತಿಮ್ಮಾಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ಆಸರೆಯಾಗಿದ್ದ ಕೆರೆ ನೀರಿಲ್ಲದೆ ಸಂರ್ಪೂಣ ಬತ್ತಿ ಹೋಗಿದ್ದರಿಂದ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ತಿಮ್ಮಾಪುರ ಗ್ರಾಮದಲ್ಲಿ ಅಧಿಕಾರಿಗಳು, ಗ್ರಾಮ ಪಂಚಾಯತಿ ನಿರ್ಲಕ್ಷ$್ಯದಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.
ತಿಮ್ಮಾಪುರ ಗ್ರಾಮ ಈವರೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾದ ಜೆಜೆಎಂ ಮೂಲಕ ತುಂಗಭದ್ರಾ ನದಿ ಪೂರೈಸಲಾಗುತ್ತಿದ್ದು, ಈ ಭಾಗದ ಸಾರ್ವಜನಿಕರಿಗೆ ವರದಾನವಾಗಿತ್ತು. ಅಲ್ಲದೇ ಗ್ರಾಮದಲ್ಲಿರುವ ಕೆರೆ ಆಸರೆಯಾಗಿತ್ತು. ಆದರೆ, ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ವೈಫಲ್ಯದಿಂದ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಬೇಸಿಗೆಯಾದ ಕಾರಣ ನೀರು ಗ್ರಾಮಸ್ಥರಿಗೆ ಸಾಕಾಗುತ್ತಿಲ್ಲ. ತಿಮ್ಮಾಪುರ ಗ್ರಾಮದಲ್ಲಿ ಮೂರು ವಾರ್ಡುಗಳಿವೆ. ಈಗ ವಾರಕ್ಕೊಮ್ಮೆ ಕೇವಲ ಮನೆಗೆ ಮೂರ್ನಾಲ್ಕು ಕೊಡ ನೀರು ಬರುತ್ತಿದೆ. ಕುಡಿಯಲು, ದನಕರುಗಳಿಗೆ ಹಾಗೂ ಬಳಕೆ ಮಾಡಲು ಸಾಕಾಗುತ್ತಿಲ್ಲ. ಈ ಕುರಿತು ಮಹಿಳೆಯರು ಸೇರಿದಂತೆ ಸಾರ್ವಜನಿಕರು ಗ್ರಾಪಂ ಅಭಿವೃದ್ದಿ ಅಧಿಕಾರಿಗೆ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಇಲ್ಲಿನ ಜನರು ಆರೋಪಿಸುತ್ತಿದ್ದಾರೆ. ಕೆರೆ ಬತ್ತಿದ್ದರಿಂದ ಈ ಸಮಸ್ಯೆ ಇನ್ನೂ ಅಧಿಕವಾಗಿದೆ.
ಟ್ಯಾಂಕರ್​ಗೆ ಮೊರೆ:
ಗ್ರಾಮದಲ್ಲಿ ಕುಡಿಯುವ ನೀರಿನ ಯಾವುದೇ ಮೂಲ ಸೌಲಭ್ಯ ಇಲ್ಲದ ಕಾರಣ ಜನರು ಟ್ಯಾಂಕರ್​ ನೀರಿನ ಮೊರೆ ಹೋಗಿದ್ದಾರೆ. ಆದರೆ ಕುಡಿಯುವ ನೀರಿನ ಟ್ಯಾಂಕರ್​ ಮಾಲೀಕರು ಒಂದು ಟ್ಯಾಂಕರ್​ಗೆ 1,500 ರೂ. ನಿಗದಿ ಮಾಡಿದ್ದರಿಂದ ಸಾರ್ವಜನಿಕರ ಗೋಳು ಕೇಳುವವರು ಇಲ್ಲದಂತಾಗಿದೆ. ಇಂದಿನ ದುಬಾರಿ ದಿನದಲ್ಲಿ ಬಡವರು, ಸಾಮಾನ್ಯ ವರ್ಗದವರು ಹಣ ಕೊಟ್ಟು ನೀರು ಹಾಕಿಸಿಕೊಳ್ಳುವುದು ಹೇಗೆ ಸಾಧ್ಯ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಕೋಟ್​:
ಸರ್ಕಾರ ಕುಡಿಯುವ ನೀರಿಗೆ ಕೋಟ್ಯಂತರ ರೂ. ಹಣ ಮೀಸಲಿಟ್ಟು, ರಾಜ್ಯದ ಯಾವುದೇ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೀರಿನ ಸಮಸ್ಯೆ ಕುರಿತು ವರದಿಯಾದರೆ ನೇರವಾಗಿ ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದರೂ ಯಾವುದೇ ಅಧಿಕಾರಿ ಗ್ರಾಮದ ಕಡೆಗೆ ಗಮನ ಹರಿಸಿಲ್ಲ.
ಯಲ್ಲಪ್ಪ ಬಾಬರಿ, ರೈತ ಸಂದ ಜಿಲ್ಲಾಧ್ಯಕ್ಷ
ಕೋಟ್​
ಈಗಾಗಲೇ ಜಿಲ್ಲಾ ಪಂಚಾಯತಿ ಪ್ರಕಾರ ನೀರಿನ ಸಮಸ್ಯೆಯಿರುವ 17 ಗ್ರಾಮಗಳ ಪೈಕಿ ತಿಮ್ಮಾಪುರ ಗ್ರಾಮವೂ ಇದ್ದು, ಈವರೆಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ರೀತಿ ನೀರಿನ ಸಮಸ್ಯೆ ಮುಂದುವರಿದರೆ ಗ್ರಾಮಸ್ಥರ ರಸ್ತೆತಡೆ ನಡೆಸಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ. -
ಹುಚ್ಚಿರಪ್ಪ ಜೋಗಿನ, ತಿಮ್ಮಾಪುರ ಗ್ರಾಮಸ್ಥರು
ಕೋಟ್​:
ವಿದ್ಯುತ್​ ಸಮಸ್ಯೆಯಿಂದ ಬಹುಗ್ರಾಮ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಕೆರೆಯೂ ಬರಿದಾಗಿದ್ದರಿಂದ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ. ಈಗಾಗಲೇ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್​ಗೆ ಟ್ಯಾಂಕರ್​ ಮೂಲಕ ನೀರು ಪೂರೈಕೆಗೆ ಅನುಮತಿ ನೀಡಲು ಪತ್ರ ಬರೆಯಲಾಗಿದೆ. ಜತೆಗೆ ಲಕ್ಕುಂಡಿ- ಹರ್ಲಾಪೂರ ಮಾರ್ಗದಲ್ಲಿ ಕುಡಿಯುವ ನೀರು ಪೂರೈಕೆಗಾಗಿ 25 ಲಕ್ಷ ರೂ. ವೆಚ್ಚದಲ್ಲಿ ಪೈಪ್​ಲೈನ್​ ಕಾಮಗಾರಿ ನಡೆದಿದ್ದು, ಕಾಮಗಾರಿ ರ್ಪೂಣಗೊಂಡರೆ ಕುಡಿಯುವ ನೀರು ಸಮಸ್ಯೆ ಬಗೆಹರಿಯಲಿದೆ. -
ಶಿವಲೀಲಾ ಗೂಳಪ್ಪನವರ, ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net