ಜಿಲ್ಲೆಯ 32 ಸಣ್ಣ ನೀರಾವರಿಯ ಇಲಾಖೆಯ ಕೆರೆಗಳೂ ಖಾಲಿ

ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡವಾಡ ಕೆರೆಯಲ್ಲಿ ಅಲ್ಪ ಪ್ರಮಾಣದಲ್ಲಿ ನೀರಿರುವುದು.
ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡವಾಡ ಕೆರೆಯಲ್ಲಿ ಅಲ್ಪ ಪ್ರಮಾಣದಲ್ಲಿ ನೀರಿರುವುದು.
Published on
ಕೆರೆ ನೀರು ಆಧರಿಸಿ ನೀರಾವರಿ ಸೌಲಭ್ಯ ಹೊಂದಿದ್ದ 7741 ಹೆ ಪ್ರದೇಶಕ್ಕೆ ತೊಂದರೆ
ವಿಜಯವಾಣಿ ವಿಶೇಷ ಗದಗ
ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಸಂರ್ಪೂಣ ಕೈಕೊಟ್ಟಿದ್ದರಿಂದ ಭೀಕರ ಬರಗಾಲದ ಛಾಯೆ ಆವರಿಸಿದೆ. ಬರಗಾಲ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ಒಟ್ಟು 32 ಕೆರೆಗಳು ಭತಿರ್ ಆಗಿಲ್ಲ. ನೀರಾವರಿ ಇಲಾಖೆ ಮೂಲಕಗಳ ಪ್ರಕಾರ ಕಳೆದ ಒಂದು ದಶಕದಲ್ಲಿ ಇದು ಅತ್ಯಂತ ಅಧಿಕ ಬರಗಾಲ ಸ್ಥಿತಿ ಎಂದು ಉಲ್ಲೇಖಿಸಲಾಗುತ್ತಿದೆ.
ಸಣ್ಣ ನೀರಾವರಿ ಕೆರೆಗಳ ಹಿನ್ನೀರನ್ನೇ ನಂಬಿಕೊಂಡು ಜಿಲ್ಲೆಯಲ್ಲಿ ಒಟ್ಟು 7741 ಹೆ. ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿತ್ತು. ಬರಗಾಲ ಕಾರಣದಿಂದ ಪ್ರಸ್ತುತ ಕೆರೆಗಳಲ್ಲಿ ನೀರಿಲ್ಲದಿರುವುದರಿಂದ ಈ ಬಾರಿ ಕೃಷಿಕರಿಗೆ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಪರೋಕ್ಷವಾಗಿ ತೋಟಗಾರಿಕಾ ಬೆಳೆಗಳ ಮೇಲೂ ಉಂಟಾಗುತ್ತಿದ್ದು, ದಾಳಿಂಬೆ, ಪಪ್ಪಾಯಿ, ಮಾವು ಮತ್ತು ತರಕಾರಿ ಬೆಳೆದ ರೈತರಿಗೂ ಸಂಕಷ್ಟ ಎದುರಾಗಿದೆ.
ಸಣ್ಣ ನೀರಾವರಿ ಇಲಾಖೆಯಡಿ ಮುಂಡರಗಿ ತಾಲೂಕಿನಲ್ಲಿ 11, ಗಜೇಂದ್ರಗಡ 8, ಶಿರಹಟ್ಟಿ 5, ಗದಗ 4, ಲಕ್ಷೇಶ್ವರ 3 ಹಾಗೂ ರೋಣ ತಾಲೂಕಿನಲ್ಲಿ 1 ಕೆರೆ ಸೇರಿ ಒಟ್ಟು 32 ಕೆರೆಗಳಿವೆ. ಈ ಕೆರೆಗಳಲ್ಲಿ ಒಟ್ಟು ಪ್ರಸ್ತುತ ಲಭ್ಯವಿರುವ ಒಟ್ಟು ನೀರಿನ ಸಂಗ್ರಹ ಮಟ್ಟ ಕೇವಲ 1385 ಎಂಸಿಎಫ್​ಟಿ ಮಾತ್ರ ಎಂದು ತಿಳಿದು ಬಂದಿದೆ.
ಜಿಲ್ಲೆಯಲ್ಲಿ ಶೇ. 90 ಕ್ಕಿಂತ ಹೆಚ್ಚು, ಭತಿರ್ಯಾಗದೇ ಇರುವ ಕೆರೆಗಳೇ ಬರ ಸ್ಥಿತಿಯ ತೀವ್ರತೆಗೆ ಸಾಕ್ಷಿಯಾಗಿದೆ. ಒಟ್ಟು 32 ಕೆರೆಗಳ ಪೈಕಿ 18 ಕೆರೆಗಳಲ್ಲಿ ಶೇ. 1 ರಿಂದ 30 ರಷ್ಟು ನೀರು ತುಂಬಿದೆ. ಶೇ. 30 ರಿಂದ 50 ರಷ್ಟು ನೀರಿರುವ ಕೆರೆಗಳು 12 ಇದ್ದರೆ, ಶೇ. 50 ರಿಂದ 90 ರಷ್ಟು ನೀರು ಹೊಂದಿರುವ ಕೆರೆಗಳ ಸಂಖ್ಯೆ ಕೇವಲ 2 ಎಂದು ನೀರಾವರಿ ಇಲಾಖೆ ತಿಳಿಸಿದೆ. ಜುಲೈ ತಿಮಗಳ ಅಂತ್ಯಕ್ಕೆ ಬಂದರೂ ಕೆರೆಗಳು ಭತಿರ್ಯಾಗದೇ ಇರುವುದು ಸಹಜವಾಗಿಯೇ ಎಲ್ಲರಲ್ಲಿಯೂ ಆತಂಕಕ್ಕೆ ಕಾರಣವಾಗಿದೆ.
ಕೆರೆಗಳು ಭತಿರ್ಯಾಗದ ಪರಿಣಾಮ ಜಿಲ್ಲೆಯಾದ್ಯಂತ ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಕೆರೆ ಅಚ್ಚುಕಟ್ಟು ಪ್ರದೇಶದ ಸಾವಿರಾರು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದೆ. ಕೃಷಿ ಚಟುವಟಿಕೆಗೆ ನೀರು ಸಾಕಾಗುತ್ತಿಲ್ಲ. ಕೇವಲ ಕೃಷಿಯಷ್ಟೇ ಅಲ್ಲದೆ, ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ತೀವ್ರ ಅಭಾವ ಸೃಷ್ಟಿ ಆಗುತ್ತಿದೆ. ಮಳೆಯ ಅಭಾವದಿಂದಾಗಿ ವಾಣಿಜ್ಯ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಗಳು ಸಂರ್ಪೂಣ ಒಣಗಿ ಹೋಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net