ಕಂದಾಯ ಇಲಾಖೆ ಯಡವಟ್ಟು! 65 ವರ್ಷದ ನಂತರ ಪಹಣಿಯಲ್ಲಿ ಆದೇಶ ಎಂಟ್ರಿ

ಗದಗ
ಗದಗ
Published on
ಹೆಸರೂರು ಗ್ರಾಮದ ರೈತರಿಗೆ ತೊಂದರೆ
ಕೋರ್ಟ್​ ಆದೇಶ ಉಲ್ಲಂಘಿಸಿ ಅತಿಕ್ರಮಿಸಿದ ಅಧಿಕಾರಿಗಳು
ಶಿವಾನಂದ ಹಿರೇಮಠ ಗದಗ
ಕಂದಾಯ ಇಲಾಖೆಯ ವಿಳಂಬ ಆಡಳಿತ ನೀತಿಯಿಂದ ಜಿಲ್ಲೆಯ ಮುಂಡರಗಿ ತಾಲೂಕಿನ ಹೆಸರೂರು ಗ್ರಾಮದ ಕೆಲ ರೈತರು ತಮ್ಮ ಜಮೀನನ್ನು ಕಳೆದುಕೊಳ್ಳುವ ಬೀತಿ ಎದುರಾಗಿದೆ. ರೈತರು ಕೊರ್ಟ ಮೆಟ್ಟಿಲೇರಿ ಜಮೀನಿನಲ್ಲಿ ಯಾರೂ ಅತೀಕ್ರಮ ಪ್ರವೇಶ ಮಾಡಬಾರದು ಎಂದು ಆದೇಶ ನೀಡಿದ್ದರೂ ಸಹ ಕಂದಾಯ, ಗ್ರಾಪಂ ಅಧಿಕಾರಿಗಳು ಅತೀಕ್ರಮಿಸಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಸ್ಥಲಿಯ ಕೆಲ ಗ್ರಾಪಂ ಸದಸ್ಯರು ಕೂಡ ರೈತರ ಪರವಾಗಿ ನಿಲ್ಲುತ್ತಿಲ್ಲ. ಈ ನಡುವೆ ರೈತರು ರಕ್ಷಣೆ ಕೋರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಕಚೇರಿ, ಸ್ಥಳಿಯ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದರು ಸಹ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರೈತರ ಸಂಕಷ್ಟಗಳಿಗೆ ಆಡಳಿತ ವರ್ಗ ಕೈಹಿಡಿಯದಂತಾಗಿ ರೈತರು ದಿನನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಏನಿದು ಪ್ರಕರಣ?
ಜಿಲ್ಲೆಯ ಮುಂಡರಗಿ ತಾಲೂಕಿನ ಹೆಸರೂರು ಗ್ರಾಮದ ಶಿವಯೋಗಿ ಸಸಿಮಠ ಎಂಬ ರೈತನ ಸರ್ವೇ ನಂ 36ರ 4.10 ಏಕರೆ ಜಮೀನು ಮತ್ತು 36/3 ಸರ್ವೇ ನಂಬರ್​ 5 ಏಕರೆ ಸೇರಿದಂತೆ ಇನ್ನೂ ಕೆಲ ರೈತರ ಜಮೀನಿನಲ್ಲಿ ಸ್ಥಳಿಯ ಗ್ರಾಪಂ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಏಕಾಏಕಿ ಒತ್ತುವರಿ ಕಾರ್ಯ ಆರಂಭಿಸಿದ್ದಾರೆ. ಜಮೀನಿನಲ್ಲಿ ಇರುವ ಗಿಡ ಮರಗಳನ್ನು ಕಡೆಯಲು ಮುಂದಾಗಿದ್ದಾರೆ. ಹಾಗೂ ಕೆಲ ವಸತಿ ನಿವೇಶನಗಳನ್ನು ಸೃಷ್ಟಿಸಿದ್ದಾರೆ. ಇದನ್ನು ವಿರೋಧಿಸಿದ ರೈತರಿಗೆ ಅಧಿಕಾರಿಗಳು ಉತ್ತರಿಸಿ "ನಿಮ್ಮ ಜಮೀನು ಹೊಸಪೇಟೆಯ ತುಂಗಭದ್ರ ಡ್ಯಾಂ ಪ್ರದೇಶದ ಮುಳಗಡೆ ಪ್ರದೇಶದಲ್ಲಿ ಬರುತ್ತದೆ. ಇದನ್ನು ಸರ್ಕಾರ ಸ್ವಾಧಿನ ಪಡೆಸಿಕೊಂಡಿದೆ' ಎಂದು ತಿಳಿಸಿದ್ದಾರೆ. ಇದನ್ನು ಪ್ರಶ್ನಿಸಿ ಮುಂಡರಗಿ ನ್ಯಾಯಾಲಯದಲ್ಲಿ ರೈತರು ದಾವೆ ದಾಖಲಿಸಿದ್ದರು. ಮುಂಡರಗಿ ನ್ಯಾಯಾಲಯವು ರೈತರ ಜಮೀನಿನಲ್ಲಿ ಅತೀಕ್ರಮಿಸದಂತೆ ಗ್ರಾಪಂ ಅಧಿಕಾರಿಗಳಿಗೆ ಆದೇಶ ನೀಡಿದೆ. ಆದರೂ, ಅಧಿಕಾರಿ ವರ್ಗ ಆಗಾಗ ಅತೀಕ್ರಮಿಸಿ ಭೂಮಿ ವಶಪಡಿಸಿಕೊಳ್ಳುತ್ತಿದೆ. ಇದಕ್ಕೆ ಸ್ಥಳಿಯ ಗ್ರಾಪಂ ಸದಸ್ಯರು ಕೂಡ ಬೆಂಬಲಿಸುತ್ತಿದ್ದಾರೆ ಎನ್ನಲಾಗಿದೆ.
ಇಲಾಖೆ ಯಡವಟ್ಟು?
ಜಿಲ್ಲೆಯ ಮುಂಡರಗಿ ತಾಲೂಕಿನ ಹೆಸರೂರು ಗ್ರಾಮದಲ್ಲಿ ರೈತರ ಜಮೀನುಗಳನ್ನು 1965ರಲ್ಲಿ ರಾಜ್ಯ ಸರ್ಕಾರ ಭೂಸ್ವಾಧಿನ ಪಡಿಸಿಕೊಂಡಿತ್ತು. ಹೊಸಪೇಟೆ ತುಂಗಭದ್ರ ಜಲಾಶಯ ನಿರ್ಮಾಣಕ್ಕಾಗಿ ಮುಳುಗಡೆ ಪ್ರದೇಶದ ಹಳ್ಳಿಗಳ ಜನರಿಗೆ ಪುನರ್ವಸತಿ ಕಲ್ಪಿಸಲು 1965ರಲ್ಲಿ ಈ ಜಮೀನುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, 1965ರಿಂದ ಈ ವರೆಗೂ ಅಲ್ಲಿನ ಪಹಣಿಗಳಲ್ಲಿ ಭೂಸ್ವಾಧಿನ ಪಡಿಸಿಕೊಂಡ ಬಗ್ಗೆ ಸೇರ್ಪಡೆ ಮಾಡಿಲ್ಲ. ಕಂದಾಯ ಇಲಾಖೆಯ ಈ ವಿಳಂಬ ಆಡಳಿತ ನೀತಿಯೇ ಇಲ್ಲಿನ ರೈತರಿಗೆ ಕಗ್ಗಂಟಾಗಿ ಪರಿಗಣಿಸಿದೆ. ಕಾಳ ಕಳೆದಂತೆ ಹಲವು ಜಮೀನುಗಳ ಮಾರಾಟ ಮತ್ತು ಖರೀದಿ ಮಾಡಲಾಗಿದೆ. ಇತ್ತೀಚೆಗೆ 2025ರಲ್ಲಿ ಪಹಣಿಯ ಕಾಲಂ ನಂಬರ್​ 11 ರಲ್ಲಿ "ಟಿಬಿ ಡ್ಯಾಂ ಬೂಸ್ವಾಧಿನ' ಎಂದು ಸೇರಿಸಲಾಗಿದೆ. ಭೂಮಿ ಖರೀದಿ ಮಾಡಿದ ರೈತರಿಗೆ ಮತ್ತು ಇದೇ ಜಮೀನನ್ನು ಜೀವನಾಧಾರವಾಗಿ ಇಟ್ಟು ಉಳುಮೆ ಮಾಡುತ್ತಿರುವ ರೈತರಿಗೆ ಇದು ಬಿಸಿತುಪ್ಪವಾಗಿ ಪರಿಗಣಿಸಿದೆ. 65 ವರ್ಷಗಳ ಕಾಲ ಸುಮ್ಮನ್ನಿದ್ದ ಕಂದಾಯ ಇಲಾಖೆ ಈಗ ಏಕಾಏಕಿ ಈ ಕ್ರಮಕ್ಕೆ ಮುಂದಾಗಿದ್ದು ಏಕೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಈ ಪ್ರಕ್ರಿಯೆ ವಿರುದ್ಧ ಕೊರ್ಟ ಮೆಟ್ಟಿಲೇರಿ ಅತೀಕ್ರಮ ಪ್ರವೇಶ ತಡೆ ತಂದಿದ್ದಾರೆ.
ನಿವೇಶನ ಹಂಚಿಕೆ:
ಪಹಣಿಯಲ್ಲಿ "ಟಿಬಿ ಡ್ಯಾಂ ಬೂಸ್ವಾಧಿನ' ಎಂದು ಸೇರಿಸಿದ್ದರಿಂದ ಸ್ಥಳಿಯ ಗ್ರಾಪಂ ಅಧಿಕಾರಿಗಳು ನಿವೇಶನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ಕೆಲ ನಿವೇಶನಗಳನ್ನು ನಿಮಿರ್ಸಿ ಹಂಚಲಾಗಿದೆ. ಇದರಲ್ಲಿ ಕೆಲ ಸ್ಥಳಿಯ ಗ್ರಾಪಂ ಸದಸ್ಯರ ಕುಟುಂಬಸ್ಥರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸ್ಥಳಿಯ ಪಿಡಿಓ ಮತ್ತು ಗ್ರಾಪಂ ಸದಸ್ಯರ ಪ್ರಭಾವಕ್ಕೆ ಇಲ್ಲಿನ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ನೋಂದ ರೈತರು ಅಳಲು ತೋಡಿಕೊಂಡಿದ್ದಾರೆ.
ದೂರು ತೆಗೆದುಕೊಳ್ಳುತ್ತಿಲ್ಲ:
ಕೊರ್ಟ ಆದೇಶ ಉಲ್ಲಂಘಿಸಿ ಅತೀಕ್ರಮಿಸುತ್ತಿರುವ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಲು ರೈತರು ಠಾಣೆ ಮೆಟ್ಟಿಲೇರಿದರೂ ಸಹ ಠಾಣಾಧಿಕಾರಿ ದೂರು ದಾಖಲಿಸಿಲು ಮತ್ತು ರೈತರಿಗೆ ರಕ್ಷಣೆ ನೀಡಲು ಹಿಂದೇಟು ಹಾಕಿದ್ದಾರೆ. ಜನಪ್ರತಿನಿಧಿಗಳು ಸಹ ರೈತರ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಪ್ರಕರಣ ಬಿಡಿಸಲಾಗದ ಕಗ್ಗಂಟಾಗಿದ್ದು, ಜನಪ್ರತಿನಿಧಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net