ಧಾರಾಕಾರ ಮಳೆ! ಹಲವೆಡೆ ಉರುಳಿಬಿದ್ದ ಗಿಡಮರಗಳು, ವಿದ್ಯುತ್ ಕಂಬಗಳು

ಗದಗ ನಗರದ ಕೆಎಲ್ಇ ಸಂಸ್ಥೆಯ ಮುಂಭಾಗದ ರಸ್ತೆಯಲ್ಲಿ ಮಳೆಗೆ ಮರವೊಂದು ಧರೆಗೆ ಉರುಳಿದೆ.
ಗದಗ ನಗರದ ಕೆಎಲ್ಇ ಸಂಸ್ಥೆಯ ಮುಂಭಾಗದ ರಸ್ತೆಯಲ್ಲಿ ಮಳೆಗೆ ಮರವೊಂದು ಧರೆಗೆ ಉರುಳಿದೆ.
Published on
ವಿಜಯವಾಣಿ ಸುದ್ದಿಜಾಲ ಗದಗ
ಬೇಸಿಗೆಯ ಬಿರು ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜಿಲ್ಲೆಯ ಜನರಿಗೆ ಸತತ ಎರಡನೇ ದಿನ ಮಳೆಯ ಸಿಂಚನವಾಗಿದೆ. ಭಾನುವಾರ ಸುರಿದ ರೀತಿಯಲ್ಲಿಯೇ ಸೋಮವಾರವೂ ಮಳೆಯ ಅಬ್ಬರ ಜೋರಾಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು.
ಸೋಮವಾರ ಸಂಜೆ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಹಾಗೂ ಭಾರೀ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗುತ್ತಿತ್ತಾದರೂ, ಬಿಸಿಲಿನ ಪ್ರಖರತೆ ಮಾತ್ರ ಕಡಿಮೆಯಾಗಿರಲಿಲ್ಲ. ಆದರೆ ಸತತ ಎರಡು ದಿನಗಳಿಂದ ವಾತಾವರಣದಲ್ಲಿ ದಿಢೀರ್ ಬದಲಾವಣೆ ಕಂಡುಬಂದಿತು.
ಸೋಮವಾರ ಮಳೆ:
ಸೋಮವಾರ ಮಧ್ಯಾಹ್ನದ ವರೆಗೆ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ, ಸಂಜೆಯಾಗುತ್ತಿದ್ದಂತೆ ವಾತಾವರಣದಲ್ಲಿ ಬದಲಾವಣೆಯಾಗಿ ಸಂಜೆ 4.30ಕ್ಕೆ ಇಡೀ ನಗರ ಕತ್ತಲೆ ಆವರಿಸಿದ ಅನುಭವ ಉಂಟಾಯಿತು. ಇದರ ಬೆನ್ನಲ್ಲೇ ಬಿರುಗಾಳಿ ಹಾಗೂ ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿಯಲು ಆರಂಭಿಸಿತು. ಸೋಮವಾರವೂ ಸಹ ಸಂಜೆ 4.30ರಿಂದ 6 ಗಂಟೆಯವರೆಗೆ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಳೆ ಸುರಿತಿತು. ಪರಿಣಾಮ ರಸ್ತೆಗಳು ಜಲಾವೃತಗೊಂಡವು:

ಉರುಳಿಬಿದ್ದ ಮರ
ಸತತ ಎರಡು ದಿನಗಳ ಭಾರೀ ಗಾಳಿ-ಮಳೆಯ ರಭಸಕ್ಕೆ ಜಿಲ್ಲೆಯ ಹಲವೆಡೆ ವ್ಯಾಪಕ ಹಾನಿ ಸಂಭವಿಸಿದೆ. ಗದಗ ನಗರದ ಭೀಷ್ಮ ಕೆರೆ ಆವರಣದಲ್ಲಿ ಬೋಟಿಂಗ್ ಗಾಗಿ ಅಳವಡಿಸಿದ್ದ ಶೆಡ್, ಸ್ವಾಗತ ಕಮಾನು ಸಹ ಕಿತ್ತು ಬಿದ್ದಿದೆ. ಅದೇ ರೀತಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಟಾಟಾ ಏಸ್ ವಾಹನದ ಮೇಲೆ ಬೃಹತ್ ಮರಮೊಂದು ಉರುಳಿಬಿದ್ದಿದೆ. ಗದಗ ಬಸ್ ಡಿಪೂ ಪ್ರವೇಶ ದ್ವಾರದ ಬಳಿಯೂ ಮರಮೊಂದು ಉರುಳಿ ಬಿದ್ದಿದ್ದು, ಬಸ್ಸುಗಳು ಡಿಪೋ ಪ್ರವೇಶಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ ಪಾಲಾ- ಬಾದಾಮಿ ಹೆದ್ದಾರಿಗೆ ಹೊಂದಿಕೊಂಡಿರುವ ಬೆಟಗೇರಿ ಕಿತ್ತೂರು ರಾಣಿ ಚನ್ನಮ್ಮ ಉದ್ಯಾನದ ಬೃಹತ್ ಮರಮೊಂದು ಉರುಳಿ ಬಿದ್ದು, ರಸ್ತೆ ಪಕ್ಕದ ಗೂಡಂಗಡಿಗೆ ಹಾನಿಯಾಗಿದೆ. ನಗರದ ಗಾಂಧಿ ವೃತ್ತದಲ್ಲಿ ಹಾಕಲಾಗಿದ್ದ ್ಲೆಕ್ಸ್ಗಳು ಧರೆಗೆ ಉರುಳಿವೆ. ಕೆಎಲ್ಇ ರಸ್ತೆ ಮುಂಭಾಗದಲ್ಲೂ ಮರಬಿದ್ದು ಹಾನಿಯಾಗಿದೆ. ಹಲವೆಡೆ ವಿದ್ಯುತ್ ಕಂಬಗಳು ವಾಲಿದ್ದು, ಸೋಮವಾರವೂ ವಿದ್ಯುತ್ ವ್ಯತ್ಯಯ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.

ಕಳೆದ ಮೂರು ತಿಂಗಳಲ್ಲಿ ವಿದ್ಯುತ್ ಕಂಬಳ ಹಾನಿ:
ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 280 ವಿದ್ಯುತ್ ಕಂಬಗಳು ಮಳೆ ಗಾಳಿಗೆ ಉರುಳಿ ಬಿದ್ದಿವೆ. ಹೆಸ್ಕಾಂ ಪ್ರಕಾರ ಒಟ್ಟು 28 ಲಕ್ಷ ವೆಚ್ಚದ ಹಾನಿ ಆಗಿದೆ ಎಂದು ತಿಳಿದು ಬಂದಿದೆ. ಗದಗನಲ್ಲಿ 60, ಗಜೆಂದ್ರಗಡ 90, ಮುಂಡರಗಿ 52, ಶಿರಹಟ್ಟಿ 25, ರೋಣ 84 ಹಾಗೂ ನರಗುಂದದಲ್ಲಿ 51 ವಿದ್ಯುತ್ ಕಂಬಗಳು ಕಳೆದ ಮೂರು ತಿಂಗಳಲ್ಲಿ ಧರೆಗೆ ಉರುಳಿವೆ.





ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net