ನಗರದಲ್ಲಿ 8ನೇ ದಿನಕ್ಕೆ ಕಾಲಿಟ್ಟ ಅತಿಥಿ ಉಪನ್ಯಾಸಕರ ಹೋರಾಟ
ವಿಜಯವಾಣಿ ಸುದ್ದಿಜಾಲ ಗದಗ
ವಿವಿಧ ಬೇಡಿಕೆ ಆಗ್ರಹಿಸಿ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಹಮ್ಮಿಕೊಂಡಿರುವ ಅತಿಥಿ ಉಪನ್ಯಾಸಕ ಪ್ರತಿಭಟನೆ ಮಂಗಳವಾರ 9ನೇ ದಿನಕ್ಕೆ ಕಾಲಿಟ್ಟಿದೆ. ಕಳೆದೊಂದು ವಾರದಿಂದ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಮಂಗಳವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಗುಲ್ಬುರ್ಗಾದ ಅತಿಥಿ ಉಪನ್ಯಾಸಕ ಚಂದ್ರಕಾಂತೆ ಶಿರೋಳೆ ಮಾತನಾಡಿ ಅತಿಥಿ ಉಪನ್ಯಾಸಕರು 10ಕ್ಕೂ ಹೆಚ್ಚು ವರ್ಷದವರೆಗೆ ವಿದ್ಯಾಥಿರ್ಗಳಿಗೆ ಜ್ಞಾನದ ಸುಧೆ ಹರಿಸಿದ್ದಾರೆ. ಕೌನ್ಸಲಿಂಗ್ ನೆಪ ಮಾಡಿಕೊಂಡು 6 ಸಾವಿರ ಅತಿಥಿ ಉಪನ್ಯಾಸಕರನ್ನು ಕೌನ್ಸಲಿಂಗನಿಂದ ಹೊರಗಿಟ್ಟಿದ್ದಾರೆ. ತಕ್ಷಣವೇ, ಕೌನ್ಸಲಿಂಗ ನಿಲ್ಲಿಸಿ ಸೇವೆ ಸಲ್ಲಿಸುತ್ತಿರುವವರನ್ನು ಮುಂದುವರೆಸಬೇಕು ಎಂದು ಹೇಳಿದರು.
ಹೊನ್ನಳಿಯ ಅತಿಥಿ ಉಪನ್ಯಾಸಕ ಹಲದಪ್ಪ ಮಾತನಾಡಿ ಎಲ್ಲವೂ ತಮ್ಮ ಹಕ್ಕಿನ ಮಾನವೀಯ ಬದುಕಿಗಾಗಿ ಶ್ರಮಕ್ಕೆ ಮಾನ್ಯತೆ ಸಿಗಬೇಕು. ಅನಿಶ್ಚಿತತೆ ಕಳಚಲಿ ಎಂಬುದು ಏಕೈಕ ಬೇಡಿಕೆ. ನಾವು ವಿದ್ಯಾಥಿರ್ಗಳ ಭವಿಷ್ಯ ಕಟ್ಟುವವರಾದರೂ ನಮ್ಮದೇ ಬದುಕು ಪ್ರಶ್ನಾರ್ಥಕವಾಗಿ ಬೀದಿಯಲ್ಲಿ ಕುಳಿತುಕೊಳ್ಳುವಂತಹ ಸ್ಥಿತಿ ಉದ್ಭವಿಸಿದೆ ಎಂದರು.
ಗದಗ, ಬೀದರ, ಗುಲಬುರ್ಗಾ, ಕಾರವಾರ, ಧಾರವಾಡ, ಬಾಗಲಕೋಟೆ, ವಿಜಯನಗರ, ಬಳ್ಳಾರಿ, ಹಾವೇರಿ, ತುಮಕೂರ,ಕೊಡಗು, ಬೆಳಗಾವಿ, ಕೋಲಾರ ಸೇರಿದಂತೆ ಅನೇಕ ಜಿಲ್ಲೆಯ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.