ವಿಜಯವಾಣಿ ಸುದ್ದಿಜಾಲ ಗದಗ
ನಗರದಲ್ಲಿ ಮೆ.31 ರಂದು ನಡೆಯಲಿರುವ ಹಿಂದೂ ಸಮಾವೇಶವನ್ನು ನಕಲಿ ಜ್ಯಾತ್ಯಾತೀತವಾದಿಗಳು, ಪಟ್ಟಭದ್ರ ಹಿತಾಸಕ್ತಿಗಲು ಹತ್ತಿಕ್ಕಲ್ಲು ಪ್ರಯತ್ನಿಸುತ್ತಿವೆ.
ಸನಾತನ ಧರ್ಮವನ್ನು ಪ್ರತಿಪಾದಿಸುತ್ತ ಸಮಾಜದಲ್ಲಿ ಜನಜಾಗೃತಿ ಮೂಡಿಸುತ್ತಿರುವ ಕನ್ಹೇರಿ ಮಠದ ಸ್ವಾಮಿಗಳ ವಿರುದ್ಧ ನಕಲಿ ಜ್ಯಾತ್ಯಾತೀತವಾದಿಗಳು ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾದಿಗ ಸಮಾಸದ ಜಿಲ್ಲಾಧ್ಯಕ್ಷ ಉಡಚಪ್ಪ ಹಳ್ಳಿಕೇರಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿ ಸಮಾಜದಲ್ಲಿ ಜನಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿರುವ ಕನ್ಹೇರಿ ಸ್ವಾಮಿಗಳ ಬಗ್ಗೆ ಸಮಾಜದಲ್ಲಿ ಅನಗತ್ಯ ಗೊಂದಲಕಾರಿ ಹೇಳಿಕೆಗಳನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ನೀಡುತ್ತಿವೆ. ಸಮಾಜದಲ್ಲಿನ ಸನಾತನ ಧರ್ಮದಲ್ಲಿರುವ ವ್ಯಕ್ತಿಗಳಿಂದಲೇ ಇಂತಹ ಹೇಳಿಕೆಗಳನ್ನು ನೀಡಿಸುತ್ತಿರುವದು ದುರ್ಧೈವ. ಪಕ್ಷಾತೀತವಾಗಿ ಜಿಲ್ಲೆಯಲ್ಲಿ ಸಮಾವೇಶ ಮಾಡುತ್ತಿದ್ದೇವೆ ಎಂದರು ಹೇಳಿದರು.
ಕನ್ಹೇರಿ ಮಠದ ಸ್ವಾಮೀಜಿಗಳ ಕಾರ್ಯಕ್ರಮ ನಡೆದರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆಯೋ ಎಂಬ ಆತಂಕದಲ್ಲಿರುವ ಈ ಕಮ್ಯುನಿಷ್ಟ ಮನಸ್ಥಿತಿಯ ಈ ದುರುಳರು ಸಮಾಜದಲ್ಲಿ ಅನಗತ್ಯವಾಗಿ ಸ್ವಾಮಿಗಳ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ಕನ್ಹೇರಿ ಮಠದ ಶ್ರೀಗಳು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಸಾವಯವ ಕೃಷಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಜನಜಾಗೃತಿ ಯಶಸ್ವಿಯಾದರೆ ರಾಸಾಯನಿಕ ಗೊಬ್ಬರ ತಯಾರಿಕಾ ಕಂಪನಿಗಳಿಂದ ಆಮದನಿ ಪಡೆಯುತ್ತಿರುವ ನಕಲಿ ಜಾತ್ಯಾತೀತವಾದಿಗಳ ಬಣ್ಣ ಬಯಲಾಗಲಿದೆ ಎಂಬ ಆತಂಕದಿಂದ ಕೆಲ ಕಮ್ಯುನಿಸ್ಟ್ ಮನಸ್ಥಿತಿ ಹೊಂದಿದವರು ಕನ್ಹೇರಿ ಶ್ರೀಗಳನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ನಕಲಿ ಜ್ಯಾತ್ಯಾತೀತವಾದಿಗಳು ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿರುವ ಲಿಂಗಾಯತರು, ವೀರಶೈವರನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಹಿಂದುಳಿದವರು, ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವವರಲ್ಲಿ ಒಳಪಂಗಡಗಳ ಭೇದಭಾವವನ್ನು ಮೂಡಿಸುವ ಮೂಲಕ ಒಡಕು ಉಂಟು ಮಾಡುತ್ತಿದ್ದಾರೆ. ಈ ಪ್ರಗತಿಪರರಿಗೆ ಸಮಾಜದಲ್ಲಿನ ಎಲ್ಲರೂ ಒಂದಿಲ್ಲೊಂದು ಕಾರಣದಿಂದ ಕಚ್ಚಾಡಿದಾಗ ಮಾತ್ರವೇ ಅವರ ಉದ್ದೇಶ ಸಫಲವಾಗಲಿದೆ ಎಂಬ ಭ್ರಯೆಯಲ್ಲಿ ಇದ್ದಾರೆ. ಬಸವಣ್ಣನವರು ಎಲ್ಲ ಸಮಾಜದವರಿಗೆ ಲಿಂಗಧಾರಣೆ ಮಾಡಿದ ಕಾರಣದಿಂದ ದಲಿತ ಸಮಾಜ ಇನ್ನೂ ಉನ್ನತಿಗೆ ಏರುತ್ತಿದೆ ಎಂದರು.
ಇತ್ತೀಚೆಗೆ ನಗರದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದಲ್ಲಿ ಡ್ಯಾನ್ಸಿಂಗ್ ತೊಟ್ಟಿಲು ತುಂಡಾಗಿ 21 ಜನರು ತೀವ್ರವಾಗಿ ಗಾಯಗೊಂಡ ಸಂದರ್ಭದಲ್ಲಿ ಈ ನಕಲಿ ಜ್ಯಾತ್ಯಾತೀತವಾದಿಗಳು ಘಟನೆಯ ಬಗ್ಗೆ ತುಟಿ ಬಿಚ್ಚಿ ಮಾತನಾಡುವ ಸೌಜನ್ಯವನ್ನು ಸಹತೋರಲಿಲ್ಲ. ಹಣಕ್ಕಾಗಿ ಜಾತ್ರೆಯಲ್ಲಿ ತೊಟ್ಟಿಲು ಅಳವಡಿಸಿರುವ ತೊಟ್ಟಿಲು ಮಾಲಿಕನಾಗಲಿ, ಯಾರೂ ಗಾಯಾಳುಗಳಿಗೆ ಕಿಂಚಿತ್ತೂ ನೆರವು ನೀಡದಿರುವದು ದೌರ್ಭಾಗ್ಯವಾಗಿದೆ. ಸಮಾಜದಲ್ಲಿ ಯಾವದೇ ವ್ಯಕ್ತಿಗೆ ನೋವು ಆದಾಗ ಸ್ಪಂದಿಸದೇ ಇದೀಗ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುವ ಆತಂಕದಲ್ಲಿ ಕನ್ಹೇರಿ ಶ್ರೀಗಳ ಕಾರ್ಯಕ್ರಮವನ್ನು ವಿರೋಧಿಸುವ ಮೂಲಕ ತಮ್ಮ ಮೂಲ ಮನಸ್ಥಿತಿಯನ್ನು ಬಹೀರಂಗಪಡಿಸಿದ್ದಾರೆ ಎಂದು ಆರೋಪಿಸಿದರು.
ಯಾರೇ ಎನೇ ಆರೋಪಿಸಿದರು. ಮೆ.31 ರಂದು ಹಿಂದೂ ಸಮಾವೇಶ ನಡೆಯುವುದು ನಿಶ್ಚಿತ ಎಂದು ಉಡಚಪ್ಪ ಹಳ್ಳಿಕೇರಿ ಹೇಳಿದರು.
ರಾಘವೇಂದ್ರ, ಮಂಜುನಾಥ ಕೋಟ್ನಿಕರ, ಪಿ.ಎಸ್. ಕಾಳೆ, ಮೌನೇಶ ದಾಸರ, ಹುಲಗಪ್ಪ ವಾಲ್ಮೀಕಿ, ಅಶೋಕ ಬಜಂತ್ರಿ, ಈರಪ್ಫ ವಾಲ್ಮೀಕಿ, ಮಂಜುನಾಥ ಗುಡಿ, ಮಂಜುನಾಥ ಪೂಜಾರ, ಕುಮಾರ ನಾಡಗೇರ, ಮಂಜುನಾಥ ಗುಡಿಮನಿ, ಸ್ವರೂಪ ಹುಳ್ಳಿಕಾಶಿ, ವೆಂಟೇಶ ದೊಡ್ಡಮನಿ ಇತರರು ಇದ್ದರು.